Menu

ನಾನೇ ಸರ್ಕಾರ, 60 ರೂ.ಗೆ 2 ಲಾಡು ಕೊಡ್ಬೇಕು, : ಇಸ್ಕಾನ್‌ಗೆ ಶಿವಲಿಂಗೇಗೌಡ ಎಚ್ಚರಿಕೆ

ಉದಯಕಾಲ ನ್ಯೂಸ್, ಹಾಸನ: ಹಾಸನಾಂಬೆಯ ಜಾತ್ರಾ ಮಹೋತ್ಸವದಲ್ಲಿ ಭಕ್ತರಿಗೆ ಪ್ರಸಾದದ ರೂಪದಲ್ಲಿ ವಿತರಿಸುವ ಲಾಡು ದರವನ್ನು ಗಗನಕ್ಕೇರಿಸಿರುವ ವಿರುದ್ಧ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 100 ರೂ.ಗೆ ಲಾಡು ಮಾರಾಟ ಮಾಡುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡಿರುವ ಅವರು, “60 ರೂ.ಗೆ ಎರಡು ಲಾಡು ಕೊಡಬೇಕು, ನಾನೇ ಸರ್ಕಾರ, ನಾನು ಹೇಳಿದ್ದೇ ಫೈನಲ್” ಎಂದು ಗುಡುಗಿದ್ದಾರೆ.

ಇಸ್ಕಾನ್ ಸಂಸ್ಥೆಗೆ ಸಚಿವರ ತರಾಟೆ ಮತ್ತು ಎಚ್ಚರಿಕೆ

ಹಾಸನಾಂಬೆ ದೇವಾಲಯದ ಸುತ್ತಮುತ್ತ ಸಚಿವರು ದಿಢೀರ್ ಪರಿಶೀಲನೆ ನಡೆಸಿದ ವೇಳೆ, ಲಾಡನ್ನು ಬವಿಷ್ಯದ ಹೆಸರಿನಲ್ಲಿ ಅಧಿಕ ಬೆಲೆಗೆ ಅಂದರೆ 100 ರೂಪಾಯಿಗೆ ಮಾರಾಟ ಮಾಡುತ್ತಿರುವ ಅಕ್ರಮ ದಂಧೆ ಅವರ ಗಮನಕ್ಕೆ ಬಂದಿದೆ. ತಕ್ಷಣವೇ ಎಚ್ಚೆತ್ತ ಸಚಿವರು, ಲಾಡು ತಯಾರಿಕೆ ಮತ್ತು ವಿತರಣೆಯ ಟೆಂಡರ್ ಪಡೆದಿರುವ ಇಸ್ಕಾನ್ (ISKCON) ಸಂಸ್ಥೆಯ ಪ್ರತಿನಿಧಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

“ನಾನು ಮಿನಿಸ್ಟರ್ ಮಾತನಾಡುತ್ತಿದ್ದೇನೆ. ಅಧಿಕೃತವಾಗಿ 56.16 ರೂ.ಗೆ ಲಾಡು ಮಾರಾಟದ ಟೆಂಡರ್ ಆಗಿದೆ. ಆದರೆ ನೀವು 100 ರೂ. ವಸೂಲಿ ಮಾಡುತ್ತಿರುವುದು ಯಾವ ನ್ಯಾಯ? ತಕ್ಷಣವೇ ದರ ಇಳಿಕೆ ಮಾಡಿ, 60 ರೂ.ಗೆ ಎರಡು ಲಾಡುಗಳನ್ನು ಮಾರಾಟ ಮಾಡಬೇಕು. ಇಲ್ಲದಿದ್ದರೆ ನಾನೇ ಸ್ಥಳದಲ್ಲಿ ನಿಂತು ಪ್ರತಿಭಟನೆ ಮಾಡಿಸುತ್ತೇನೆ ಮತ್ತು ಜನರನ್ನು ದಂಗೆ ಎಬ್ಬಿಸುತ್ತೇನೆ” ಎಂದು ಸಚಿವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, 1000 ರೂ. ಹಾಗೂ 300 ರೂ. ವಿಶೇಷ ದರ್ಶನದ ಟಿಕೆಟ್ ಪಡೆದು ಬರುವ ಭಕ್ತರಿಗೆ ಉಚಿತವಾಗಿ ಲಾಡು ಪ್ರಸಾದ ನೀಡಬೇಕು ಎಂದೂ ಸೂಚಿಸಿದ್ದಾರೆ.

ಮೊದಲ ದಿನವೇ ಹರಿದುಬಂದ ಭಕ್ತ ಸಾಗರ

ಮತ್ತೊಂದೆಡೆ, ಈ ವರ್ಷದ ಹಾಸನಾಂಬೆ ದೇವಿ ದರ್ಶನದ ಮೊದಲ ದಿನವೇ ಭಕ್ತರ ಮಹಾಪೂರವೇ ಹರಿದುಬಂದಿದೆ. ಮುಂಜಾನೆ 3 ಗಂಟೆಯಿಂದಲೇ ದೇವಿ ದರ್ಶನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸಾಲುಗಟ್ಟಿ ನಿಂತಿದ್ದಾರೆ. 300 ರೂ. ವಿಶೇಷ ದರ್ಶನದ ಸಾಲಿನಲ್ಲಿ ಬರೋಬ್ಬರಿ ಎರಡು ಕಿಲೋಮೀಟರ್‌ವರೆಗೂ ಕ್ಯೂ ಸಾಲು ವಿಸ್ತಾರಗೊಂಡಿದ್ದು, ಭಕ್ತರು ತಾಸುಗಟ್ಟಲೆ ಕಾದು ನಿಂತು ದರ್ಶನ ಪಡೆಯುತ್ತಿದ್ದಾರೆ.

ಬಿಗಿ ಪೊಲೀಸ್ ಬಂದೋಬಸ್ತ್ ಮತ್ತು ಮುನ್ನೆಚ್ಚರಿಕೆ

ಭಕ್ತರ ದಟ್ಟಣೆ ವಿಪರೀತವಾಗಿರುವುದರಿಂದ ಯಾವುದೇ ಅಹಿತಕರ ಘಟನೆಗಳು ಅಥವಾ ನೂಕುನುಗ್ಗಲು ಉಂಟಾಗದಂತೆ ಎಸ್‌ಪಿ ಶುಭನ್ವಿತಾ ಅವರು ಸ್ವತಃ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಧರ್ಮ ದರ್ಶನ ಹಾಗೂ ವಿಶೇಷ ದರ್ಶನದ ಸರತಿ ಸಾಲುಗಳಿಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ. ಸಚಿವರ ಎಚ್ಚರಿಕೆಯ ಬಳಿಕ ಲಾಡು ದರ ಕಡಿತಗೊಳ್ಳಲಿದೆಯೇ ಮತ್ತು ಭಕ್ತರಿಗೆ ನೆಮ್ಮದಿಯ ದರ್ಶನ ಸಿಗಲಿದೆಯೇ ಕಾದು ನೋಡಬೇಕಿದೆ.

#HasanambaJatra #KMShivalingegowda #HassanNews #LadduPrasada #ISKCON #KarnatakaPolitics #UdayakalaNews

Related Posts

Leave a Reply

Your email address will not be published. Required fields are marked *