Menu

ಕನ್ನಡಿಗರಿಗೆ ಉದ್ಯೋಗ ಕೊಡುವುದು ಉದ್ಯಮಿಗಳ ಜವಾಬ್ದಾರಿ: ಡಿಸಿಎಂ ಡಾ. ಜಿ. ಪರಮೇಶ್ವರ್

ಉದಯಕಾಲ ನ್ಯೂಸ್, ಬೆಂಗಳೂರು: ರಾಜ್ಯದಲ್ಲಿ ಬಂಡವಾಳ ಹೂಡಿ ಕೈಗಾರಿಕೆಗಳನ್ನು ಸ್ಥಾಪಿಸುವ ಉದ್ಯಮಿಗಳು ಕಡ್ಡಾಯವಾಗಿ ಅರ್ಹ ಸ್ಥಳೀಯ ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಬೇಕು. ಸರ್ಕಾರದಿಂದ ಕೈಗಾರಿಕೆಗಳಿಗೆ ಭೂಮಿ, ವಿದ್ಯುತ್, ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಉದಾರವಾಗಿ ಒದಗಿಸಲಾಗುತ್ತಿದ್ದು, ಅದಕ್ಕೆ ಪ್ರತಿಯಾಗಿ ಸ್ಥಳೀಯರಿಗೆ ಉದ್ಯೋಗ ನೀಡುವ ಬದ್ಧತೆಯನ್ನು ಕೈಗಾರಿಕಾ ಸಂಸ್ಥೆಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ತಿಳಿಸಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು ಸರ್ಕಾರದ ಕಠಿಣ ನಿಲುವನ್ನು ಸ್ಪಷ್ಟಪಡಿಸಿದರು. ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂಬುದು ಹೊಸ ವಿಚಾರವೇನಲ್ಲ, ಮೊದಲಿನಿಂದಲೂ ಈ ನೀತಿ ಚಾಲ್ತಿಯಲ್ಲಿದೆ. ಅರ್ಹತೆ ಇಲ್ಲದವರಿಗೆ ಉದ್ಯೋಗ ನೀಡಿ ಎಂದು ಸರ್ಕಾರ ಒತ್ತಾಯಿಸುತ್ತಿಲ್ಲ. ಬದಲಿಗೆ, ಅಗತ್ಯ ವಿದ್ಯಾರ್ಹತೆ ಮತ್ತು ಕೌಶಲ ಹೊಂದಿರುವ ಕನ್ನಡಿಗರಿಗೆ ಅವರ ಅರ್ಹತೆಗೆ ತಕ್ಕಂತೆ ಸೂಕ್ತ ಉದ್ಯೋಗಾವಕಾಶಗಳನ್ನು ನೀಡಬೇಕು ಎಂದರು. ಕೆಲವು ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಕೇವಲ ಅಟೆಂಡರ್ ಹಾಗೂ ಕೆಳಹಂತದ ಹುದ್ದೆಗಳನ್ನು ಮಾತ್ರ ನೀಡುತ್ತಿರುವ ಪ್ರವೃತ್ತಿ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಒಂಟಿಯಲ್ಲ,ಶಾಸಕರ ಬೆಂಬಲವಿದೆ

ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂಟಿಯಾಗಿದ್ದಾರೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಪರಮೇಶ್ವರ್, ಸಿದ್ದರಾಮಯ್ಯ ಅವರು ಒಂಟಿಯಾಗುವ ಪ್ರಶ್ನೆಯೇ ಇಲ್ಲ. ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ನಮ್ಮ ಎಲ್ಲ ಶಾಸಕರು ಸಿದ್ದರಾಮಯ್ಯರೊಂದಿಗೆ ಜತೆಗಿದ್ದಾರೆ. ಹಾಗಾಗಿ ಅವರು ಒಂಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಸಾರ್ವಜನಿಕ ಬದುಕಿನಲ್ಲಿ ನಡೆಯಬಾರದಂತಹ ಘಟನೆಗಳನ್ನು ಎಲ್ಲರೂ ಖಂಡಿಸಬೇಕು ಎಂದ ಅವರು, ಪ್ರಸ್ತುತ ತನಿಖೆ ನಡೆಯುತ್ತಿರುವ ವಿಚಾರದಲ್ಲಿ ಈಗಲೇ ಯಾವುದೇ ಮುಕ್ತ ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ. ತನಿಖೆ ಪೂರ್ಣಗೊಂಡು ವರದಿ ಹೊರಬಂದ ಬಳಿಕ ಎಲ್ಲ ಸತ್ಯಾಂಶಗಳು ಹೊರಬರಲಿವೆ ಎಂದರು.

ನಾನು ಒತ್ತಾಯಿಸುವವನಲ್ಲ, ಆದೇಶಿಸುವವನು

ಪ್ರತಿ ರೈತರಿಗೆ 2,500 ರೂಪಾಯಿ ನೀಡುವ ವಿಚಾರದಲ್ಲಿ ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿರುವ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ ಅವರು, ಸರ್ಕಾರವನ್ನು ಒತ್ತಾಯಿಸುವುದಾಗಿ ನಾನು ಎಲ್ಲಿಯೂ ಹೇಳಿಲ್ಲ. ನಾನು ಸಾರ್ವಜನಿಕವಾಗಿ ಅಥವಾ ಇನ್ಯಾವುದೇ ವೇದಿಕೆಯಲ್ಲಿ ಕೇವಲ ಒತ್ತಾಯ ಮಾಡುವವನಲ್ಲ, ಬದಲಿಗೆ ನಿರ್ಧಾರ ಕೈಗೊಂಡು ಆದೇಶ ನೀಡುವವನು. ಈ ವಿಚಾರದಲ್ಲಿ ಈಗಾಗಲೇ ಅಗತ್ಯ ಆದೇಶ ನೀಡಿದ್ದೇನೆ ಎಂದು ಖಡಕ್ ಆಗಿ ತಿಳಿಸಿದರು. ಡಿಸಿಎಂ ಅವರ ಈ ಸ್ಪಷ್ಟನೆಯು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
#DrGParameshwara #KannadigasJobs #KarnatakaGovernment #Siddaramaiah #CMDKShivakumar #UdayakalaNews #BengaluruNews #IndustryJobs #KarnatakaPolitics

Related Posts

Leave a Reply

Your email address will not be published. Required fields are marked *