Menu

ತಮಿಳುನಾಡಿನಲ್ಲಿ ಧನುಷ್ ರಾಜಕೀಯ: ಬಿಜೆಪಿಯ ‘ಆಪರೇಷನ್ ಡಿ’ ಎಂದ ಕಾಂಗ್ರೆಸ್!

ಉದಯಕಾಲ ನ್ಯೂಸ್, ಚೆನ್ನೈ: ತಮಿಳುನಾಡಿನಲ್ಲಿ ದಳಪತಿ ವಿಜಯ್ ಅವರ ಹಾದಿಯಲ್ಲೇ ಜನಪ್ರಿಯ ನಟ ಧನುಷ್ ಕೂಡ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾತುಗಳು ಜೋರಾಗಿ ಕೇಳಿಬರುತ್ತಿವೆ. ಈ ಮಧ್ಯೆ ನಟ ತಮ್ಮ ಅಭಿಮಾನಿ ಸಂಘದ ಹೆಸರನ್ನು ಬದಲಾಯಿಸಿ, ರಾಜ್ಯದ ವಿವಿಧ ಭಾಗಗಳ 3,000ಕ್ಕೂ ಹೆಚ್ಚು ಮಹಿಳಾ ಅಭಿಮಾನಿಗಳನ್ನು ಭೇಟಿಯಾಗಲು ಮುಂದಾಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ. ಈ ಬೆಳವಣಿಗೆಯ ಹಿಂದೆ ಬಿಜೆಪಿಯ ಹುನ್ನಾರವಿದ್ದು, ಇದು ತಮಿಳುನಾಡಿನಲ್ಲಿ ನಡೆಯುತ್ತಿರುವ ‘ಆಪರೇಷನ್ ಡಿ’ (Operation D) ಎಂದು ತಮಿಳುನಾಡು ಕಾಂಗ್ರೆಸ್ ಗಂಭೀರವಾಗಿ ಆರೋಪಿಸಿದೆ.

ಧನುಷ್ ರಾಜಕೀಯ ಪಾದಾರ್ಪಣೆ ಮುನ್ಸೂಚನೆ

ಇತ್ತೀಚೆಗೆ ಕೊಯಮತ್ತೂರಿನಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ‘ಧನುಷ್ ಅಭಿಮಾನಿ ಸಂಘ’ದ ಹೆಸರನ್ನು ಅಧಿಕೃತವಾಗಿ ‘ಧನುಷ್ ನರ್ಪಣಿ ಇಯಕ್ಕಂ’(ಧನುಷ್ ಕಲ್ಯಾಣ ಚಳುವಳಿ) ಎಂದು ಬದಲಾಯಿಸಲಾಯಿತು. ಜೊತೆಗೆ ಧನುಷ್ ಕೈಮುಗಿದು ನಿಂತಿರುವ ಚಿತ್ರವಿರುವ ಹೊಸ ಲಾಂಛನವನ್ನೂ ಅನಾವರಣಗೊಳಿಸಲಾಗಿದೆ.
ಚೆನ್ನೈ ಹೊರವಲಯದಲ್ಲಿರುವ ಖಾಸಗಿ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ನಟ ಧನುಷ್ ತಮ್ಮ ಸಂಘಟನೆಯ 3,000ಕ್ಕೂ ಹೆಚ್ಚು ಮಹಿಳಾ ಪದಾಧಿಕಾರಿಗಳು ಹಾಗೂ ಸ್ವಯಂಸೇವಕರನ್ನು ಭೇಟಿಯಾಗಿ ಚರ್ಚೆ ನಡೆಸುತ್ತಿದ್ದಾರೆ. ಕಾರ್ಯಕ್ರಮದ ಸ್ಥಳದಲ್ಲಿ ನಟನ ಬ್ಯಾನರ್‌ ಹಾಗೂ ಪೋಸ್ಟರ್‌ಗಳು ಭರ್ಜರಿಯಾಗಿ ರಾರಾಜಿಸುತ್ತಿವೆ.

ಬಿಜೆಪಿ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ

ಈ ಎಲ್ಲಾ ಬೆಳವಣಿಗೆಗಳ ಹಿಂದೆ ಕೇಂದ್ರದ ಆಡಳಿತರೂಢ ಬಿಜೆಪಿಯ ರಾಜಕೀಯ ತಂತ್ರಗಾರಿಕೆ ಇದೆ ಎಂದು ತಮಿಳುನಾಡು ಕಾಂಗ್ರೆಸ್ ಮುಖ್ಯಸ್ಥ ಹಾಗೂ ಸಂಸದ ಮಾಣಿಕಂ ಟ್ಯಾಗೋರ್ ತೀವ್ರವಾಗಿ ಕಿಡಿಕಾರಿದ್ದಾರೆ. ತಮಿಳುನಾಡಿನಲ್ಲಿ ಚಲನಚಿತ್ರ ವ್ಯಕ್ತಿಗಳನ್ನು ಮತ್ತು ಹೊಸ ರಾಜಕೀಯ ಸಂಘಟನೆಗಳನ್ನು ಮುಖಂಡರನ್ನಾಗಿ ಬಿಟ್ಟು ಅಧಿಕಾರ ಹಿಡಿಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ತಮಿಳುನಾಡಿನಲ್ಲಿ ‘ಆಪರೇಷನ್ ಡಿ’ ಆರಂಭವಾಗಿದೆ. ಬಿಜೆಪಿ ಸಿನಿಮಾ ತಾರೆಯೊಬ್ಬರನ್ನು ತಮ್ಮ ರಾಜಕೀಯ ಮುಖವಾಗಿ ಬಳಸಿಕೊಳ್ಳಲು ಬಯಸಿದೆ. ಈಗಾಗಲೇ ಎಐಎಡಿಎಂಕೆ (AIADMK) ಪಕ್ಷವನ್ನು ಹೈಜಾಕ್ ಮಾಡಿ ದುರ್ಬಲಗೊಳಿಸಿರುವ ಅವರು, ಈ ಹಿಂದೆ ರಜನಿಕಾಂತ್ ಅವರ ಮೂಲಕವೂ ರಾಜಕೀಯ ಪಕ್ಷ ಆರಂಭಿಸಲು ಪ್ರಯತ್ನಿಸಿದ್ದರು. ಈಗ ನಟರೊಬ್ಬರನ್ನು ಬಳಸಿಕೊಂಡು ಹೊಸ ಸಂಘಟನೆ ರಚಿಸುತ್ತಿದ್ದಾರೆ. ಇವೆಲ್ಲವೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜಕೀಯ ಸಿದ್ಧಾಂತದ ಭಾಗವಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿನಿಮಾ ನಟರ ರಾಜಕೀಯ ಪ್ರವೇಶದ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂಬ ಕಾಂಗ್ರೆಸ್ ನಾಯಕರ ಈ ನೇರ ಆರೋಪವು ತಮಿಳುನಾಡು ರಾಜಕಾರಣದಲ್ಲಿ ಹೊಸ ಬಿರುಗೌಳಿ ಎಬ್ಬಿಸಿದೆ.
#DhanushPolitics #OperationD #ManickamTagore #TamilNaduPolitics #BJPConspiracy #CongressVsBJP #UdaykalaNews #DhanushNarpaniIyakkam #TamilCinema #AmitShah

Related Posts

Leave a Reply

Your email address will not be published. Required fields are marked *