ಉದಯಕಾಲ ನ್ಯೂಸ್, ಧಾರವಾಡ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಬಂಡಾಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಭೇಟಿ ಹಾಗೂ ರಾಜಕೀಯ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ ಅವರಿಬ್ಬರೂ ಒಂದೇ ಪಕ್ಷದವರು, ಭೇಟಿ ಮಾಡುವುದರಲ್ಲಿ ಯಾವುದೇ ವಿಶೇಷತೆಯಿಲ್ಲ ಎಂದು ಹೇಳಿದ್ದಾರೆ.
ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ರಾಜಕೀಯ ಪಕ್ಷಗಳಲ್ಲಿ ವೈಮನಸ್ಸು ಮತ್ತು ಭಿನ್ನಾಭಿಪ್ರಾಯಗಳು ಸಹಜ ಎಂದರು. ನಮ್ಮ ಕಾಂಗ್ರೆಸ್ ಪಕ್ಷದಲ್ಲೂ ಭಿನ್ನಾಭಿಪ್ರಾಯಗಳು ಬರುತ್ತಿರುತ್ತವೆ, ಜಗಳವಾಡುತ್ತೇವೆ, ಆದರೆ ಚುನಾವಣೆ ಬಂದಾಗ ನಾವೆಲ್ಲರೂ ಒಂದಾಗುತ್ತೇವೆ. ಹಾಗೆಯೇ ಬಿಜೆಪಿ ನಾಯಕರ ಭೇಟಿಯಲ್ಲೂ ವಿಶೇಷವಾಗಿ ತಳಕು ಹಾಕಿ ನೋಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ಸಂಪುಟ ವಿಸ್ತರಣೆ!
ಕಬ್ಬು ಬೆಳೆಗಾರರ ಹೋರಾಟದ ಕುರಿತು ಮಾತನಾಡಿದ ಅವರು, ಸರ್ಕಾರ ಯಾರ ಪರವಾಗಿಯೂ ಇಲ್ಲ, ವಿರೋಧವಾಗಿಯೂ ಇಲ್ಲ. ರೈತರ ನ್ಯಾಯಸಮ್ಮತ ಬೇಡಿಕೆಗಳಿಗೆ ನಮ್ಮ ಸರ್ಕಾರ ಯಾವಾಗಲೂ ಬೆಂಬಲ ನೀಡುತ್ತದೆ. ಈ ಕುರಿತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಇದೇ ತಿಂಗಳ 26ರಂದು ಮಹತ್ವದ ಸಭೆ ನಡೆಯಲಿದ್ದು, ರೈತರ ಹಿತರಕ್ಷಣೆಗಾಗಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು.
ಇದೇ ವೇಳೆ, ಸಚಿವ ಸಂಪುಟ ವಿಸ್ತರಣೆ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಸಂಪುಟ ವಿಸ್ತರಣೆ ಬಗ್ಗೆ ನನಗೆ ಅಧಿಕಾರವಿಲ್ಲ, ಆ ಕುರಿತು ಮುಖ್ಯಮಂತ್ರಿಗಳನ್ನೇ ಕೇಳಬೇಕು ಎಂದು ಹಾರಿಕೆಯ ಉತ್ತರ ನೀಡಿದರು.
#SatishJarkiholi #BJPLeadersMeeting #KarnatakaPolitics #UdayakalaNews #SugarcaneFarmers #CMDKShivakumar


