ಉದಯಕಾಲ ನ್ಯೂಸ್, ಬೆಂಗಳೂರು: ಆರ್‌ಎಸ್‌ಎಸ್ ಪಥಸಂಚಲನ ಹಾಗೂ ಮೆರವಣಿಗೆಗಳ ವಿಚಾರವಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ತೀವ್ರವಾಗಿ ಕಿಡಿಕಾರಿದ್ದಾರೆ. ಪೊಲೀಸ್ ಇಲಾಖೆಗೆ ಕೇವಲ ಮಾಹಿತಿ ನೀಡಿ, ಸ್ವತಃ ನಾವೇ ಸಿದ್ಧತೆ ಮಾಡಿಕೊಳ್ಳಿ ಎಂದು ಹೇಳಲು ಪೊಲೀಸ್ ಇಲಾಖೆ ಆರ್‌ಎಸ್‌ಎಸ್ ಮನೆ ಆಳಾ? ಎಂದು ಪ್ರಶ್ನಿಸುವ ಮೂಲಕ ಅವರು ನೇರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಆರ್‌ಎಸ್‌ಎಸ್ ಪಥಸಂಚಲನ ಕುರಿತಾಗಿ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರು. “ಇದು ಕಾನೂನು ನಿರ್ವಹಣೆಯ ಪ್ರಶ್ನೆ.ನಾವು ಕೇಳಿರೋದರಲ್ಲಿ ಏನ್ರಿ ತಪ್ಪು? ಆರ್‌ಎಸ್‌ಎಸ್ ಅನುಮತಿ ಪಡೆದು ಕಾರ್ಯಕ್ರಮ ನಡೆಸಬೇಕು.ಏನಾದರೂ ಲೋಪವಿದ್ದರೆ ನಾವು ತಿದ್ದಿಕೊಳ್ಳುತ್ತೇವೆ. ಹಲವು ಕಡೆ ಆರ್‌ಎಸ್‌ಎಸ್ ಕೇವಲ ಮಾಹಿತಿಗಾಗಿ ಪತ್ರ ನೀಡಿ ಕಾರ್ಯಕ್ರಮ ಮಾಡುತ್ತಿದೆ. ಕೇವಲ ಮಾಹಿತಿ ನೀಡುವುದಲ್ಲ, ಬದಲಾಗಿ ಅನುಮತಿ ಕೊಡಿ ಎಂದು ಕೇಳಿ, ನಾವು ಕಾನೂನು ಪ್ರಕಾರ ಪರಿಶೀಲಿಸಿ ಅನುಮತಿ ನೀಡುತ್ತೇವೆ ಆದರೆ ಅನುಮತಿಯೇ ಕೇಳದೆ ಕೇವಲ ಮಾಹಿತಿ ಕೊಟ್ಟಿದ್ದೇವೆ, ಪೊಲೀಸ್ ಇಲಾಖೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೇಳುವುದು ಸರಿಯಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾನೂನು ಎಲ್ಲರಿಗೂ ಒಂದೇ!
“ಸಾಮಾನ್ಯ ಜನರು ಹಬ್ಬದ ಆಚರಣೆಗಳಿಗೆ ಅಥವಾ ಮನೆ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಅನುಮತಿ ಕೇಳ್ತೀರಾ ಅಲ್ವಾ? ಹಾಗೆಯೇ ನಿಮಗೆ ಏನು ಕಾನೂನು ಅನ್ವಯಿಸುತ್ತದೆ, ಅದೇ ಕಾನೂನು ಆರ್‌ಎಸ್‌ಎಸ್‌ಗೂ ಕೂಡ ಅನ್ವಯಿಸುತ್ತದೆ. ಪ್ರತಿಯೊಬ್ಬರೂ ಕಾನೂನಿನ ಚೌಕಟ್ಟಿನೊಳಗೆ ನಡೆದುಕೊಳ್ಳಬೇಕು” ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
ಪುಲಿಕೇಶಿ ನಗರ ಸ್ಫೋಟ ಪ್ರಕರಣದ ಬಗ್ಗೆ ಸ್ಪಷ್ಟನೆ
ಇದೇ ವೇಳೆ, ಪುಲಿಕೇಶಿ ನಗರದ ಮನೆಯೊಂದರಲ್ಲಿ ಸಂಭವಿಸಿದ ಶಂಕಿತ ಸ್ಫೋಟದ ಕುರಿತು ಮಾತನಾಡಿದ ಅವರು, ಮನೆಯಲ್ಲಿ ಸ್ಫೋಟವಾಗಿರುವ ಬಗ್ಗೆ ಈಗಾಗಲೇ ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ. ಘಟನೆಗೆ ಏನು ಕಾರಣ ಹಾಗೂ ಯಾವ ವಸ್ತುಗಳು ಸ್ಫೋಟಗೊಂಡಿವೆ ಎಂಬ ಸಂಪೂರ್ಣ ಮಾಹಿತಿ ಮಧ್ಯಾಹ್ನದ ಬಳಿಕ ಲಭ್ಯವಾಗಲಿದೆ. ವಶಪಡಿಸಿಕೊಂಡ ವಸ್ತುಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿಕೊಡಲಾಗಿದ್ದು, ತನಿಖೆಯ ವರದಿ ಬಂದ ಬಳಿಕ ಸತ್ಯಾಂಶ ಹೊರಬರಲಿದೆ ಎಂದು ತಿಳಿಸಿದರು.
#PriyankKharge #RSSPathasanchalana #KarnatakaPolitics #UdayakalaNews #PoliceDepartment #PulakeshinagarBlast


