Wednesday, October 21, 2026
Menu

100 ಕೋಟಿ ಕ್ಲಬ್‌ ಸೇರಿ ಇತಿಹಾಸ ಸೃಷ್ಟಿಸಿದ ‘ಪ್ರೇಮದ ಊರಲಿ’!

ಉದಯಕಾಲ ನ್ಯೂಸ್, ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಹೊಸ ಇತಿಹಾಸ ಸೃಷ್ಟಿಯಾಗಿದೆ. ಕೇವಲ 60 ಶೋಗಳು ಹಾಗೂ ಅಲ್ಪಪ್ರಮಾಣದ ಬಜೆಟ್‌ನೊಂದಿಗೆ ಸದ್ದಿಲ್ಲದೆ ಬಾಕ್ಸ್ ಆಫೀಸ್ ಪ್ರಯಾಣ ಆರಂಭಿಸಿದ್ದ ‘ಪ್ರೇಮದ ಊರಲಿ’ ಚಿತ್ರವು ಈಗ ಯಶಸ್ವಿ 26 ದಿನಗಳನ್ನು ಪೂರೈಸಿದ್ದು, ಅಧಿಕೃತವಾಗಿ ₹100 ಕೋಟಿ ಕ್ಲಬ್‌ ಸೇರುವ ಮೂಲಕ ಸ್ಯಾಂಡಲ್‌ವುಡ್‌ನ ಹೆಮ್ಮೆಯ ಸಿನಿಮಾಗಳ ಸಾಲಿಗೆ ಸೇರ್ಪಡೆಗೊಂಡಿದೆ.

ಕಳೆದ ಸೆಪ್ಟೆಂಬರ್ 25ರಂದು ತೆರೆಕಂಡ ಈ ಚಿತ್ರಕ್ಕೆ ಆರಂಭದಲ್ಲಿ ಪ್ರೇಕ್ಷಕರ ಸಂಖ್ಯೆ ವಿರಳವಾಗಿತ್ತು. ಆದರೆ ಸಿನಿಮಾ ನೋಡಿದ ವೀಕ್ಷಕರ ಬಾಯ್ಮಾತಿನ ಪ್ರಚಾರವೇ (Word of Mouth) ಈ ಚಿತ್ರಕ್ಕೆ ಶ್ರೀರಕ್ಷೆಯಾಯಿತು. ಪರಿಣಾಮವಾಗಿ ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿ, ಸದ್ಯ 4ನೇ ವಾರದಲ್ಲೂ ಯಶಸ್ವಿ ಪ್ರದರ್ಶನ ಮುಂದುವರಿಸಿದೆ. ಇಂಡಸ್ಟ್ರಿ ಟ್ರ್ಯಾಕರ್ ವರದಿ ಪ್ರಕಾರ, ಈ ಚಿತ್ರವು ಗ್ಲೋಬಲ್ ಮಟ್ಟದಲ್ಲಿ ಬರೋಬ್ಬರಿ ₹102.19 ಕೋಟಿ ಹಾಗೂ ಭಾರತೀಯ ಮಾರುಕಟ್ಟೆಯಲ್ಲಿ ₹99.34 ಕೋಟಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಅಚ್ಚರಿಯ ಮೈಲಿಗಲ್ಲು ಸ್ಥಾಪಿಸಿದೆ.

ಖ್ಯಾತ ನಟರ ದೊಡ್ಡ ಸ್ಟಾರ್‌ಡಮ್ ಇಲ್ಲದೆ, ಕೇವಲ ಭಾವನಾತ್ಮಕ ಕಥೆ, ಮನಮುಟ್ಟುವ ನಟನೆ ಹಾಗೂ ಜನಮನ ಸೆಳೆಯುವ ದೃಶ್ಯಕಾವ್ಯದಿಂದಲೂ ಕನ್ನಡದಲ್ಲಿ ದೊಡ್ಡ ಮಟ್ಟದ ವಿಜಯ ಸಾಧಿಸಬಹುದು ಎಂಬುದನ್ನು ಈ ಚಿತ್ರ ಸಾಬೀತುಪಡಿಸಿದೆ. ರಂಗಾಯಣ ರಘು, ಶ್ರೀ ರಾಮ್, ತಪಸ್ವಿನಿ ಪೂಣಚ್ಚ ಸೇರಿದಂತೆ ಪ್ರಮುಖರ ಅಭಿನಯಕ್ಕೆ ಪ್ರೇಕ್ಷಕರಿಂದ ಪ್ರಶಂಸೆ ವ್ಯಕ್ತವಾಗಿದ್ದು, ಸಿನಿಗಣ್ಯರು ಕೂಡ ಚಿತ್ರದ ಯಶಸ್ಸನ್ನು ಕೊಂಡಾಡಿದ್ದಾರೆ. ಕೆಜಿಎಫ್, ಕಾಂತಾರ, 777 ಚಾರ್ಲಿ ಸಿನಿಮಾಗಳ ಸಾಲಿನಲ್ಲಿ ಈಗ ‘ಪ್ರೇಮದ ಊರಲಿ’ ಕೂಡ ಹೆಮ್ಮೆಯಿಂದ ನಿಂತಿದ್ದು, ಕನ್ನಡ ಚಿತ್ರರಂಗದ ಭವಿಷ್ಯದ ಬಗ್ಗೆ ಭರವಸೆ ಮೂಡಿಸಿದೆ.
#PremadaOorali #SandalwoodBlockbuster #KannadaCinema #BoxOfficeHit #UdayakalaNews #100CroreClub

Related Posts

Leave a Reply

Your email address will not be published. Required fields are marked *