Thursday, October 15, 2026
Menu

ಸಿಜೆಪಿ ಪ್ರತಿಭಟನೆಗೆ ಸಾಥ್‌: ನಟ ಇಮ್ರಾನ್ ಖಾನ್‌ಗೆ ಮುಂಬೈ ಪೊಲೀಸ್ ‘ಭಾರತ ತೊರೆಯಲು’ ನೋಟಿಸ್!

ಉದಯಕಾಲ ನ್ಯೂಸ್, ಮುಂಬೈ: ಬಾಲಿವುಡ್‌ನ ಖ್ಯಾತ ನಟ, ಆಮಿರ್ ಖಾನ್ ಅವರ ಸೋದರಳಿಯ ಇಮ್ರಾನ್ ಖಾನ್ (Imran Khan) ಕಾನೂನು ತೊಡಕಿಗೆ ಸಿಲುಕಿದ್ದಾರೆ. ಮುಖ್ಯ ಚುನಾವಣಾ ಆಯುಕ್ತರ (CEC) ವಿರುದ್ಧ ಮುಂಬೈನಲ್ಲಿ ನಡೆದ ಪ್ರತಿಭಟನೆಯೊಂದರಲ್ಲಿ ಪಾಲ್ಗೊಂಡಿದ್ದ ಕಾರಣಕ್ಕಾಗಿ ಮುಂಬೈ ಪೊಲೀಸರು (Mumbai Police) ನಟನಿಗೆ ಗಂಭೀರ ನೋಟಿಸ್ ಜಾರಿಗೊಳಿಸಿದ್ದು, ಅಕ್ಟೋಬರ್ 28ರೊಳಗೆ ಭಾರತವನ್ನು ತೊರೆಯುವಂತೆ (Leave India Notice) ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಅಮೆರಿಕದ ಪೌರತ್ವ ಹೊಂದಿರುವ ಇಮ್ರಾನ್ ಖಾನ್, ಭಾರತದಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಅನುಮತಿಸುವ ಸಾಗರೋತ್ತರ ಭಾರತೀಯ ನಾಗರಿಕ (OCI) ಕಾರ್ಡ್ ಅನ್ನು ಪಡೆದುಕೊಂಡಿದ್ದಾರೆ. ಆದರೆ, ವಿದೇಶಿ ಪ್ರಜೆಯಾಗಿರುವ ಅವರು ಭಾರತದ ಆಂತರಿಕ ರಾಜಕೀಯ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿರುವುದು ವಲಸೆ ಕಾಯ್ದೆಯ (Immigration Act) ನಿಯಮಗಳ ಉಲ್ಲಂಘನೆಯಾಗಿದೆ ಎಂದು ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಹಿನ್ನೆಲೆ ಏನು?

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಮುಂಬೈನ ಐತಿಹಾಸಿಕ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಯಲ್ಲಿ ನಟ ಇಮ್ರಾನ್ ಖಾನ್ ಯಾವುದೇ ರಾಜಕೀಯ ಪಕ್ಷದ ಪ್ರತಿನಿಧಿಯಾಗಿ ಅಲ್ಲದೆ, ಒಬ್ಬ ಸಾಮಾನ್ಯ ಮುಂಬೈ ನಿವಾಸಿ ಹಾಗೂ ಕಾಳಜಿಯುಳ್ಳ ಪ್ರಜೆಯಾಗಿ ಭಾಗವಹಿಸಿದ್ದೇನೆ ಎಂದು ಹೇಳಿದ್ದರು.

ಪ್ರತಿಭಟನಾ ಸ್ಥಳದಲ್ಲಿದ್ದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದು, ಆ ಬಳಿಕ ಅವರು ತಮ್ಮ ಬಂಧನದ ಫೋಟೋವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. OCI ಕಾರ್ಡ್ ಹೊಂದಿರುವ ವಿದೇಶಿ ಪ್ರಜೆಗಳು ದೇಶದ ರಾಜಕೀಯ ಚಟುವಟಿಕೆಗಳು ಅಥವಾ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ ಎಂಬ ನಿಯಮವಿರುವುದರಿಂದ, ಈ ಬೆಳವಣಿಗೆ ಬಾಲಿವುಡ್ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಸದ್ಯ ಮುಂಬೈ ಪೊಲೀಸರು ನೀಡಿರುವ ಗಡುವಿನೊಳಗೆ ನಟ ಇಮ್ರಾನ್ ಖಾನ್ ಯಾವ ಹೆಜ್ಜೆ ಇಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
#ImranKhan #MumbaiPolice #BollywoodNews #Udayakala #CECProtest #AugustKrantiMaidan #OCICard #IndiaNews #LatestNews

Related Posts

Leave a Reply

Your email address will not be published. Required fields are marked *