ಉದಯಕಾಲ ನ್ಯೂಸ್, ಬೆಂಗಳೂರು: ರಾಜ್ಯದಲ್ಲಿ ಸಖತ್ ಸದ್ದು ಮಾಡಿ, ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಬಹುಚರ್ಚಿತ ‘ರಿಂಗ್ ರೋಡ್ ಶುಭಾ’ (Ring Road Shubha Case) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮಹತ್ವದ ಬೆಳವಣಿಗೆ ನಡೆದಿದೆ. ಭಾವಿ ಪತಿಯನ್ನು ಹತ್ಯೆಗೈದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳಾದ ಶುಭಾ ಶಂಕರನಾರಾಯಣ ಹಾಗೂ ಡಿ. ಅರುಣ್ ವರ್ಮಾ ಸಲ್ಲಿಸಿರುವ ಕ್ಷಮಾದಾನ ಅರ್ಜಿಗಳ ಕುರಿತು ಚರ್ಚಿಸಲು ಇಂದು ರಾಜ್ಯ ಸಚಿವ ಸಂಪುಟ ಸಭೆ ನಿಗದಿಯಾಗಿದೆ.
ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಇವರ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿತ್ತಾದರೂ, ಅಪರಾಧಿಗಳು ಕೃತ್ಯ ಎಸಗುವಾಗ ಯೌವನದ ಅಸ್ಥಿರತೆ ಹಾಗೂ ತಿಳಿವಳಿಕೆಯ ಕೊರತೆಯಿಂದ ದುಡುಕಿನ ನಿರ್ಧಾರ ತೆಗೆದುಕೊಂಡಿರುವುದನ್ನು ಪರಿಗಣಿಸಿ, ರಾಜ್ಯಪಾಲರ ಮುಂದೆ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿತ್ತು. ಅದರಂತೆ ಅಪರಾಧಿಗಳು ಸಲ್ಲಿಸಿರುವ ಮನವಿಗಳು ಇದೀಗ ರಾಜ್ಯ ಸರ್ಕಾರದ ಗೃಹ ಇಲಾಖೆಯ ಮೂಲಕ ಸಚಿವ ಸಂಪುಟದ ಮುಂದೆ ಮಂಡನೆಯಾಗುತ್ತಿವೆ.
ಪ್ರಕರಣದ ಹಿನ್ನೆಲೆ ಏನು?
2003ರ ನವೆಂಬರ್ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಬಿ.ವಿ. ಗಿರೀಶ್ ಅವರೊಂದಿಗೆ ಲಾ ವಿದ್ಯಾರ್ಥಿನಿಯಾಗಿದ್ದ ಶುಭಾಳ ನಿಶ್ಚಿತಾರ್ಥ ನಡೆದಿತ್ತು. ಆದರೆ, ಡಿಸೆಂಬರ್ 3, 2003ರಂದು ರಾತ್ರಿ ವಿಮಾನ ನಿಲ್ದಾಣದ ಬಳಿ ಸುಂದರ ದೃಶ್ಯ ತೋರಿಸುವ ನೆಪದಲ್ಲಿ ಗಿರೀಶ್ ಅವರನ್ನು ಕರೆದೊಯ್ದು, ಪೂರ್ವಯೋಜಿತ ಸಂಚಿನಂತೆ ಬಾಡಿಗೆ ಹಂತಕರ ಮೂಲಕ ಹತ್ಯೆ ಮಾಡಿಸಲಾಗಿತ್ತು. ಈ ಭೀಕರ ಕೃತ್ಯವು ಅಂದು ರಾಜ್ಯಾದ್ಯಂತ ಭಾರೀ ಆಕ್ರೋಶ ಹಾಗೂ ಸಂಚಲನ ಸೃಷ್ಟಿಸಿತ್ತು. ನಂತರ 2010ರಲ್ಲಿ ವಿಚಾರಣಾ ನ್ಯಾಯಾಲಯ ಹಾಗೂ ಹೈಕೋರ್ಟ್ ಈ ಪ್ರಕರಣದಲ್ಲಿ ಶುಭಾ ಸೇರಿದಂತೆ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ಸಂಪುಟದ ನಿರ್ಧಾರದ ಮೇಲೆ ಎಲ್ಲರ ಚಿತ್ತ
ರಾಜ್ಯಪಾಲರಿಗೆ ಸಲ್ಲಿಕೆಯಾಗಿರುವ ಈ ಕ್ಷಮಾದಾನ ಅರ್ಜಿಗಳ ಕಡತವನ್ನು ನಿಯಮಾನುಸಾರ ಪರಿಶೀಲಿಸಿ ವರದಿ ನೀಡುವಂತೆ ಗೃಹ ಇಲಾಖೆಗೆ ಸೂಚಿಸಲಾಗಿತ್ತು. ಜೈಲು ಅಧಿಕಾರಿಗಳ ವರದಿ ಹಾಗೂ ಸನ್ನಡತೆಯನ್ನು ಆಧರಿಸಿ, ಸಚಿವ ಸಂಪುಟವು ಈ ಕುರಿತು ಅಂತಿಮ ತೀರ್ಮಾನ ಕೈಗೊಂಡು ರಾಜ್ಯಪಾಲರಿಗೆ ತನ್ನ ಶಿಫಾರಸನ್ನು ಕಳುಹಿಸಿಕೊಡಬೇಕಿದೆ. ಕಾನೂನು ಹೋರಾಟದ ಅಂತಿಮ ಘಟ್ಟದಲ್ಲಿರುವ ಈ ಪ್ರಕರಣದಲ್ಲಿ ಸರ್ಕಾರದ ನಿಲುವು ಹಾಗೂ ಸಂಪುಟದ ಶಿಫಾರಸು ಏನಾಗಲಿದೆ ಎಂಬುದು ಈಗ ತೀವ್ರ ಕುತೂಹಲ ಮೂಡಿಸಿದೆ.
#RingRoadShubha #CrimeNews #KarnatakaCabinet #ClemencyPlea #BangaloreNews #Udayakala #LegalUpdate #SupremeCourt


