Thursday, October 15, 2026
Menu

ಭಾರತೀಯರ ಹತ್ಯೆ ಜಸ್ಟ್‌ ಮಿಸ್: ಹಿಂದೂ ದೇವಸ್ಥಾನದ ಮೇಲೆ ಸಾಮೂಹಿಕ ದಾಳಿಗೆ ಸಂಚು ರೂಪಿಸಿದ್ದ ಶೂಟರ್ ಬಂಧನ!

ವಾಷಿಂಗ್ಟನ್: ಅಮೆರಿಕದ ಇಲಿನಾಯ್ಸ್ ಪ್ರಾಂತ್ಯದಲ್ಲಿ ಭಾರತೀಯ ಮೂಲದ ಜನರನ್ನು ಮತ್ತು ಹಿಂದೂ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ನಡೆಸಲು ಉದ್ದೇಶಿಸಲಾಗಿದ್ದ ಭೀಕರ ಸಾಮೂಹಿಕ ಗುಂಡಿನ ದಾಳಿಯ ಸಂಚು ಕೊನೆ ಕ್ಷಣದಲ್ಲಿ ವಿಫಲಗೊಂಡಿದೆ. ಶಿಕಾಗೋ ಪ್ರದೇಶದ ಪ್ರಸಿದ್ಧ ಹಿಂದೂ ದೇವಾಲಯವೊಂದರ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದ ಯುವಕನ ರೈಫಲ್ ಕೊನೆಯ ಕ್ಷಣದಲ್ಲಿ ಕೈಕೊಟ್ಟಿದ್ದರಿಂದ (Jammed) ನೂರಾರು ಜನರ ಜೀವ ಉಳಿದಂತಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಲಾಟೈನ್ ನಿವಾಸಿ, 19 ವರ್ಷದ ಅಲೆಕ್ಸಾಂಡ್ರೋಸ್ ಪಪೊರಾಕಿಸ್ (Alexandros Paporakis) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತನ ಮನೆಯಿಂದ ಮಾರಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೃತ್ಯದ ವಿವರ ಹಾಗೂ ಹಿನ್ನೆಲೆ

ಅಮೆರಿಕದಲ್ಲಿ ನವರಾತ್ರಿ ಸೇರಿದಂತೆ ಹಿಂದೂಗಳ ಹಬ್ಬದ ಋತು ಆರಂಭವಾಗಿರುವ ಸಂಭ್ರಮದ ನಡುವೆಯೇ ಈ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಪಲಾಟೈನ್‌ನ ಟ್ಯಾಕೋ ಬೆಲ್‌ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ ಪಪೊರಾಕಿಸ್, ಹಿಂದೂ ದೇವಾಲಯದ ಮೇಲೆ ಸಾಮೂಹಿಕ ಗುಂಡಿನ ದಾಳಿ ನಡೆಸಲು ಸಂಚು ರೂಪಿಸಿದ್ದ. ಈ ಕುರಿತು ಆತ ತನ್ನ ಸಹೋದ್ಯೋಗಿಯೊಬ್ಬನ ಬಳಿ ತನ್ನ ಯೋಜನೆಯನ್ನು ವಿವರಿಸಿದ್ದಲ್ಲದೆ, ರೈಫಲ್, ಮ್ಯಾಗಜೀನ್‌ಗಳು ಹಾಗೂ ದೇಹದ ರಕ್ಷಣಾ ಕವಚದ ಚಿತ್ರಗಳನ್ನು ಹಂಚಿಕೊಂಡಿದ್ದ.

ಆರೋಪಿಯ ಈ ಅನುಮಾನಾಸ್ಪದ ಚಟುವಟಿಕೆ ಹಾಗೂ ಬೆದರಿಕೆಯ ಬಗ್ಗೆ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಪೊಲೀಸರು ತಕ್ಷಣ ಎಚ್ಚೆತ್ತುಕೊಂಡು ತನಿಖೆ ಆರಂಭಿಸಿದ್ದರು.

ಕೊನೆ ಕ್ಷಣದಲ್ಲಿ ಕೈಕೊಟ್ಟ ಗನ್!

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಅಕ್ಟೋಬರ್ 11ರ ಭಾನುವಾರ ಅರೋರಾ ಪ್ರದೇಶದಲ್ಲಿರುವ ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಲು ಆರೋಪಿ ನಿರ್ಧರಿಸಿದ್ದ. ಅಂದಿನ ದಿನ ವಿಶೇಷ ದಿನವಾಗಲಿದೆ ಎಂದು ಆತ ತನ್ನ ಸಹೋದ್ಯೋಗಿಗಳ ಬಳಿಯೂ ಹೇಳಿಕೊಂಡಿದ್ದ. ಆದರೆ ಭಾನುವಾರ ಬೆಳಿಗ್ಗೆ ಸಹೋದ್ಯೋಗಿಗೆ ಕರೆ ಮಾಡಿದ ಆತ, ತಾನು ದಾಳಿಗೆ ತೆರಳುವ ವೇಳೆ ತನ್ನ ಬಂದೂಕು ಜಾಮ್ (Jammed) ಆಗಿದೆ ಎಂದು ಆತಂಕದಿಂದ ತಿಳಿಸಿ, ಅಲ್ಲಿಂದ ಪರಾರಿಯಾಗಿದ್ದ.

ಬಿಳಿಯರ ಶ್ರೇಷ್ಠತಾ ಸಿದ್ಧಾಂತ ಮತ್ತು ಪ್ರಣಾಳಿಕೆ

ಪೊಲೀಸರು ಮತ್ತು ಎಫ್‌ಬಿಐ (FBI) ನಡೆಸಿದ ಶೋಧನೆಯಲ್ಲಿ ಆರೋಪಿಯ ಮನೆಯಿಂದ ಒಂದು ರೈಫಲ್, ಗುಂಡು ತುಂಬಿದ್ದ ಹಲವು ಮ್ಯಾಗಜೀನ್‌ಗಳು, ನೂರಾರು ಹೆಚ್ಚುವರಿ ಗುಂಡುಗಳು ಹಾಗೂ ಯುದ್ಧತಂತ್ರದ ಉಪಕರಣಗಳು ಪತ್ತೆಯಾಗಿವೆ. ಅಲ್ಲದೆ, ‘Why I Fought’ ಎಂಬ ಹೆಸರಿನಲ್ಲಿ ಆತ ಸಿದ್ಧಪಡಿಸಿದ್ದ ಪ್ರಣಾಳಿಕೆಯೂ ಲಭ್ಯವಾಗಿದೆ.

ಅದರಲ್ಲಿ ಬಿಳಿಯರ ಶ್ರೇಷ್ಠತೆಯನ್ನು ಪ್ರತಿಪಾದಿಸುವ, ನವ-ನಾಜಿ ಸಿದ್ಧಾಂತ ಹಾಗೂ ದಕ್ಷಿಣ ಏಷ್ಯಾ ಮೂಲದವರ ಅದರಲ್ಲೂ ನಿರ್ದಿಷ್ಟವಾಗಿ ಭಾರತೀಯರ ವಿರುದ್ಧ ಹಿಂಸಾಚಾರ ಎಸಗುವ ಉಗ್ರವಾದಿ ವಿಚಾರಗಳುತುಂಬಿಕೊಂಡಿದ್ದವು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ತ್ವರಿತ ಕಾರ್ಯಾಚರಣೆ ಹಾಗೂ ನ್ಯಾಯಾಂಗ ಬಂಧನ

ಪಲಾಟೈನ್ ಮತ್ತು ಮೌಂಟ್ ಪ್ರಾಸ್ಪೆಕ್ಟ್ ಪೊಲೀಸ್ ಇಲಾಖೆಗಳು ತಕ್ಷಣವೇ ಸಮನ್ವಯ ಸಾಧಿಸಿ, ಅರೋರಾ ಪೊಲೀಸ್ ಇಲಾಖೆ ಹಾಗೂ ಆ ಭಾಗದ ಹಿಂದೂ ದೇವಾಲಯಗಳ ಆಡಳಿತ ಮಂಡಳಿಗಳಿಗೆ ಎಚ್ಚರಿಕೆ ನೀಡಿದ್ದವು. ಅಕ್ಟೋಬರ್ 11ರ ಸಂಜೆ ಮನೆಯಿಂದ ಹೊರಡುತ್ತಿದ್ದ ಆರೋಪಿಯನ್ನು ಪೊಲೀಸರು ಯಶಸ್ವಿಯಾಗಿ ವಶಕ್ಕೆ ಪಡೆದಿದ್ದಾರೆ.

ಬುಧವಾರ ರೋಲಿಂಗ್ ಮೆಡೋಸ್‌ನ ಕುಕ್ ಕೌಂಟಿ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕುರಿತು ಹಿಂದೂ ಅಮೆರಿಕನ್ ಫೌಂಡೇಶನ್ ಪೊಲೀಸರ ಸಮಯೋಚಿತ ಹಾಗೂ ತ್ವರಿತ ಕಾರ್ಯಾಚರಣೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದೆ.
#USNews #HinduTemple #MassShootingPlot #IllinoisNews #Palatine #AlexandrosPaporakis #FBI #Udayakala #CrimeNews #LatestNews

Related Posts

Leave a Reply

Your email address will not be published. Required fields are marked *