ಉದಯಕಾಲ ನ್ಯೂಸ್, ಕೋಲ್ಕತ್ತಾ: ಬಿಜೆಪಿ ಆಡಳಿತವಿರುವ ಪಶ್ಚಿಮ ಬಂಗಾಳದ ಪ್ರತಿಷ್ಠಿತ ಇಎಸ್‌ಐ (ESI) ಆಸ್ಪತ್ರೆಯ ವೈದ್ಯಕೀಯ ಅವ್ಯವಸ್ಥೆಯಿಂದ ಇಡೀ ದೇಶಕ್ಕೆ ತೀವ್ರ ವಿವಾದಕ್ಕೀಡಾಗಿದೆ. ಡಯಾಲಿಸಿಸ್‌ಗಾಗಿ ದಾಖಲಾಗಿದ್ದ ಮಹಿಳೆಯೊಬ್ಬರು ಮೃತಪಟ್ಟ ನಂತರ, ಅವರ ಮೃತದೇಹದ ಮುಖ ಹಾಗೂ ವಿವಿಧ ಭಾಗಗಳನ್ನು ಇಲಿಗಳು ಕಚ್ಚಿ ತಿಂದಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ತನಿಖೆ ನಡೆಸಲು ಆಸ್ಪತ್ರೆಯ ಆಡಳಿತ ಮಂಡಳಿಯು 10 ಸದಸ್ಯರ ಸಮಿತಿಯನ್ನು ರಚಿಸಿದೆ.
ಹೌರಾದ ಅಂಡುಲ್ ನಿವಾಸಿಯಾದ ಅಲ್ಪನಾ ಡೇ (ಮಹಿಳೆ) ಎಂಬುವರನ್ನು ಕಳೆದ ಗುರುವಾರ (ಅಕ್ಟೋಬರ್ 8) ಡಯಾಲಿಸಿಸ್‌ಗಾಗಿ ಮಾಣಿಕ್ತಲ ಇಎಸ್‌ಐ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ (ಸರ್ಜರಿ ವಾರ್ಡ್) 108ನೇ ಬೆಡ್‌ಗೆ ದಾಖಲಿಸಲಾಗಿತ್ತು. ಆದರೆ, ಅಂದೇ ರಾತ್ರಿ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಶುಕ್ರವಾರ (ಅಕ್ಟೋಬರ್ 9) ಬೆಳಗ್ಗೆ ಕುಟುಂಬಸ್ಥರು ಆಸ್ಪತ್ರೆಗೆ ಬಂದಾಗ ಮಹಿಳೆಯ ದೇಹದ ಮೇಲಿದ್ದ ಗಾಯಗಳನ್ನು ಕಂಡು ಆಘಾತಕ್ಕೊಳಗಾದರು. ಇಲಿಗಳು ಮೃತ ಮಹಿಳೆಯ ದವಡೆ, ಹಣೆಯ ಭಾಗ, ಕಣ್ಣುಗಳು, ಕೈಗಳು ಮತ್ತು ಕಾಲುಗಳ ಮಾಂಸವನ್ನು ಕಚ್ಚಿ ತಿಂದಿವೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಕೈ ಬೆರಳುಗಳ ಮಾಂಸವೂ ಕಾಣೆಯಾಗಿದೆ ಎಂದು ಅವರು ಕಣ್ಣೀರು ಹಾಕಿದ್ದಾರೆ.
ಕುಟುಂಬಸ್ಥರ ಗಂಭೀರ ಆರೋಪ ಹಾಗೂ ಆಕ್ರೋಶ
“ಮಹಿಳೆ ಮೃತಪಟ್ಟ ನಂತರ ಇಲಿಗಳು ದೇಹವನ್ನು ಕಚ್ಚಿವೆಯೋ ಅಥವಾ ಅದಕ್ಕೂ ಮುನ್ನವೇ ಈ ಘಟನೆ ನಡೆದಿದೆಯೋ ಎಂಬ ಬಗ್ಗೆ ಆಸ್ಪತ್ರೆಯವರು ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಸಾವಿನ ನಿಖರ ಕಾರಣವನ್ನೂ ಸ್ಪಷ್ಟಪಡಿಸಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ನಾವು ಈಗಾಗಲೇ ಮಾಣಿಕ್ತಲ ಪೊಲೀಸ್ ಠಾಣೆಯಲ್ಲಿ ಮತ್ತು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಅವರಿಗೆ ಲಿಖಿತ ದೂರು ನೀಡಿದ್ದೇವೆ” ಎಂದು ಮೃತರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸಾ ವಿಭಾಗದಲ್ಲಿಯೇ ಇಂತಹ ಘಟನೆ ಹೇಗೆ ಸಂಭವಿಸಲು ಸಾಧ್ಯ ಎಂದು ಪ್ರಶ್ನಿಸಿರುವ ಕುಟುಂಬಸ್ಥರು, ಆಸ್ಪತ್ರೆಯ ನೈರ್ಮಲ್ಯ ಹಾಗೂ ಭದ್ರತಾ ವ್ಯವಸ್ಥೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಮೂಲಗಳ ಪ್ರಕಾರ, ಅಲ್ಪನಾ ದೇವಿ ಅವರು ರಾತ್ರಿ ವೇಳೆ ನೋವಿನಿಂದ ಕಿರುಚಾಡಿದ್ದರು ಎನ್ನಲಾಗಿದೆ. ಆ ವೇಳೆ ಸಿಬ್ಬಂದಿ ಯಾರೂ ಅವರ ಬಳಿ ಹೋಗಲಿಲ್ಲವೇ ಎಂಬ ಪ್ರಶ್ನೆ ಮೂಡಿದ್ದು, ವಾರ್ಡ್‌ನಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಯ ನಿರ್ಲಕ್ಷ್ಯವೂ ಈಗ ಭಾರೀ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ತನಿಖೆಗೆ 10 ಸದಸ್ಯರ ಸಮಿತಿ ರಚನೆ
ಘಟನೆಯ ಗಂಭೀರತೆಯನ್ನು ಪರಿಗಣಿಸಿರುವ ಆರೋಗ್ಯ ಇಲಾಖೆ ಹಾಗೂ ಆಸ್ಪತ್ರೆ ಆಡಳಿತ ಮಂಡಳಿಯು, ಈ ಬಗ್ಗೆ ಸಮಗ್ರ ತನಿಖೆ ನಡೆಸಲು 10 ಸದಸ್ಯರ ವಿಶೇಷ ಸಮಿತಿಯನ್ನು ರಚಿಸಿದೆ. ಮೂರು ದಿನಗಳೊಳಗೆ ಆಸ್ಪತ್ರೆಯ ಅಧೀಕ್ಷಕರಿಗೆ ತನಿಖಾ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಘಟನೆಯ ಹಿನ್ನೆಲೆ ಹಾಗೂ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯವಿದೆಯೇ ಎಂಬ ಕುರಿತು ವರದಿಯ ಬಳಿಕ ಸ್ಪಷ್ಟ ಮಾಹಿತಿ ಹೊರಬರಲಿದೆ.
#Udayakala #UdayakalaNews #KolkataNews #WestBengal #ManiktalaESI #MedicalNegligence #RatBiteIncident #HospitalHorror #AlpanaDay #HealthDepartment #CrimeNews #KarnatakaNewsInKannada

