Saturday, October 10, 2026
Menu

ಮೈಸೂರು ದಸರಾದಂತೆ ಹಾಸನಾಂಬ ಜಾತ್ರೆ: ಭಕ್ತರಿಗೆ ಮೊದಲ ಆದ್ಯತೆ – ಸಚಿವ ಕೆ.ಎಂ. ಶಿವಲಿಂಗೇಗೌಡ

ಉದಯಕಾಲ ನ್ಯೂಸ್, ಹಾಸನ: ಐತಿಹಾಸಿಕ ಪ್ರಸಿದ್ಧ ಶ್ರೀ ಹಾಸನಾಂಬ ದೇವಿ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವನ್ನು ಈ ಬಾರಿ ಮೈಸೂರು ದಸರಾ ಮಾದರಿಯಲ್ಲಿ ಅತ್ಯಂತ ಅದ್ಧೂರಿಯಾಗಿ ಮತ್ತು ಅಚ್ಚುಕಟ್ಟಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಂ. ಶಿವಲಿಂಗೇಗೌಡ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.

ಮೈಸೂರು ದಸರಾ ಮಾದರಿ ವಿದ್ಯುತ್ ದೀಪಾಲಂಕಾರ

ಜಾತ್ರೆಯ ಸಂದರ್ಭದಲ್ಲಿ ನಗರದಾದ್ಯಂತ ಕೈಗೊಳ್ಳುವ ವಿದ್ಯುತ್ ದೀಪಾಲಂಕಾರವು ಅತ್ಯಂತ ಆಕರ್ಷಕವಾಗಿರಬೇಕು. ಮೈಸೂರು ದಸರಾ ಮಾದರಿಯಲ್ಲಿ ನಗರವನ್ನು ಶೃಂಗರಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು. ಅಲ್ಲದೆ, ನಗರದ ರಸ್ತೆ ಗುಂಡಿಗಳನ್ನು ಕೂಡಲೇ ಮುಚ್ಚುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಶಾಸಕ ಸ್ವರೂಪ್ ಪ್ರಕಾಶ್ ಸೂಚನೆ ನೀಡಿದರು.

ಸಾರ್ವಜನಿಕ ಭಕ್ತರಿಗೆ ಮೊದಲ ಆದ್ಯತೆ – ಪಾಸ್‌ಗಳ ಕಡಿತ

ಹಾಸನಾಂಬ ದರ್ಶನಕ್ಕೆ ಬರುವ ಸಾರ್ವಜನಿಕರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ತೊಂದರೆ ಅನುಭವಿಸಬಾರದು ಎಂಬ ಉದ್ದೇಶದಿಂದ ಈ ಬಾರಿ ಸಾರ್ವಜನಿಕ ಭಕ್ತರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು. ದರ್ಶನದ ಪಾಸ್‌ಗಳ ಸಂಖ್ಯೆಯನ್ನು ಕಡಿಮೆಗೊಳಿಸಿ, ಗಣ್ಯರ (VIP) ದರ್ಶನಕ್ಕೂ ನಿಗದಿತ ಸಮಯದ ವ್ಯವಸ್ಥೆ ಕಲ್ಪಿಸುವ ಮೂಲಕ ಸಾಮಾನ್ಯ ಭಕ್ತರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಾಗುವುದು. ಜೊತೆಗೆ, ಪುಟ್ಟ ಮಕ್ಕಳೊಂದಿಗೆ ಆಗಮಿಸುವ ಮಹಿಳೆಯರಿಗೆ ಪ್ರತ್ಯೇಕ ಸರತಿ ಸಾಲಿನ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗಿದೆ.

ವಿಶೇಷ ಆಕರ್ಷಣೆಗಳು ಹಾಗೂ ಪ್ರದರ್ಶನಗಳು

ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಒಂದು ವಾರಗಳ ಕಾಲ ಫಲಪುಷ್ಪ ಪ್ರದರ್ಶನ ಆಯೋಜಿಸುವುದು.ಇದರೊಂದಿಗೆ ಶ್ವಾನ ಪ್ರದರ್ಶನ, ಜಾನುವಾರುಗಳ ಪ್ರದರ್ಶನ ಹಾಗೂ ವಸ್ತು ಪ್ರದರ್ಶನಗಳನ್ನು ಹಮ್ಮಿಕೊಳ್ಳುವುದು.

ಬಹುಮಾನ ಹಾಗೂ ಪ್ರಶಸ್ತಿ

ಜಾನುವಾರು ಪ್ರದರ್ಶನದಲ್ಲಿ ಭಾಗವಹಿಸುವ ಎಲ್ಲರಿಗೂ ಪ್ರಮಾಣಪತ್ರ ಹಾಗೂ ಸ್ಮರಣಿಕೆ ನೀಡಲಾಗುವುದು. ಉತ್ತಮ ರಾಸುಗಳಿಗೆ ಪ್ರಮಾಣಪತ್ರ, ಸ್ಮರಣಿಕೆಯೊಂದಿಗೆ ನಗದು ಬಹುಮಾನ ವಿತರಿಸಲಾಗುವುದು.

ಮೂಲಸೌಕರ್ಯ ಮತ್ತು ಸ್ವಚ್ಛತೆಗೆ ಆಧ್ಯತೆ

ತಾತ್ಕಾಲಿಕ ಶೌಚಾಲಯಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು. ಸ್ವಚ್ಛತಾಗಾರರು ಪಾಳಿ (Shift) ವ್ಯವಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಕ್ರಮಕೈಗೊಳ್ಳಬೇಕು. ಸಾರ್ವಜನಿಕರಿಂದ ಯಾವುದೇ ದೂರುಗಳು ಬರದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ ಸಚಿವರು, ಕುಡಿಯುವ ನೀರು, ಮಜ್ಜಿಗೆ ವಿತರಣೆ, ನೆರಳಿನ ವ್ಯವಸ್ಥೆ, ದಾಸೋಹ, ವಾಹನ ನಿಲುಗಡೆ ಹಾಗೂ ಸಂಚಾರ ನಿರ್ವಹಣೆಗೆ ಹೆಚ್ಚಿನ ಮಹತ್ವ ನೀಡುವಂತೆ ತಿಳಿಸಿದರು.

ಅಧಿಕಾರಿಗಳಿಗೆ ಧೈರ್ಯ ತುಂಬಿದ ಸಚಿವರು, *”ಸಾರ್ವಜನಿಕ ಜೀವನದಲ್ಲಿ ಅಪವಾದಗಳು ಬರುತ್ತವೆ, ಅಧಿಕಾರಿಗಳು ಎದೆಗುಂದಬೇಡಿ. ಪಾರದರ್ಶಕವಾಗಿ ಜಾತ್ರೆ ನಡೆಸೋಣ. ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉತ್ತಮವಾಗಿ ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡೋಣ”* ಎಂದು ಕರೆ ನೀಡಿದರು. ಕಳೆದ ಬಾರಿಗಿಂತ ಈ ಬಾರಿ ನಾಲ್ಕೈದು ಹೆಚ್ಚಿನ ಕಾರ್ಯಕ್ರಮಗಳನ್ನು ರೂಪಿಸಿ ಜಾತ್ರೆಯನ್ನು ಯಶಸ್ವಿಗೊಳಿಸಲಾಗುವುದು ಎಂದರು.

ಈ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಲತಾ ಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಂ ಶುಕ್ಲ, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿಧಿ, ಉಪ ವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್ ಸೇರಿದಂತೆ ಮುಂತಾದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

#Udayakala #UdayakalaNews #HasanambaJathre #HassanNews #KMShivalingegowda #MysoreDasaraModel #HasanambaTemple #KarnatakaNews #HassanDC #PublicFirst #KannadaNews

Related Posts

Leave a Reply

Your email address will not be published. Required fields are marked *