Saturday, October 10, 2026
Menu

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ಟೋಬರ್ 12ರಿಂದ ದಸರಾ ಸಂಭ್ರಮ – ವಿಶೇಷ ಪ್ರವಾಸ ಪ್ಯಾಕೇಜ್!

ಉದಯಕಾಲ ನ್ಯೂಸ್, ಬೆಂಗಳೂರು: ನಾಡಹಬ್ಬ ಮೈಸೂರು ದಸರಾ ಸಂಭ್ರಮ ಕೇವಲ ಮೈಸೂರು ನಗರಕ್ಕಷ್ಟೇ ಸೀಮಿತವಾಗಿರದೆ, ರಾಜ್ಯದ ರಾಜಧಾನಿಯ ಹೆಬ್ಬಾಗಿಲಾದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ (KIA) ಕಳೆಗಟ್ಟಲಿದೆ. ಅಕ್ಟೋಬರ್ 12 ರಿಂದ 17 ರವರೆಗೆ ವಾರವಿಡೀ ವಿಮಾನ ನಿಲ್ದಾಣದಲ್ಲಿ ವಿಶಿಷ್ಟ ಸಾಂಸ್ಕೃತಿಕ ಉತ್ಸವ ಹಾಗೂ ದಸರಾ ಸಂಭ್ರಮ ಜೋರಾಗಿರಲಿದೆ ಎಂದು ಪ್ರವಾಸೋದ್ಯಮ ಮತ್ತು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ಏರ್‌ಪೋರ್ಟ್‌ನಲ್ಲಿ ದಸರಾ ಸಂಭ್ರಮದ ಪ್ರಮುಖ ಆಕರ್ಷಣೆಗಳು

‘ದಸರಾ ಗೊಂಬೆ’ ಪ್ರದರ್ಶನ

ಟರ್ಮಿನಲ್ 2 (T2) ರ ಆಗಮನದ ಮುಂಭಾಗದ ಆವರಣದಲ್ಲಿ (arrival forecourt) ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಹಾಗೂ ಪ್ರಸಿದ್ಧ ಗೊಂಬೆಯಾಟ ಕಲಾವಿದೆ ಅನುಪಮಾ ಹೊಸಕೆರೆ ಅವರು ರೂಪಿಸಿರುವ ವಿಶೇಷ ‘ದಸರಾ ಗೊಂಬೆ’ ಪ್ರದರ್ಶನವು ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರನ್ನು ಸೆಳೆಯಲಿದೆ.

ತೊಗಲು ಗೊಂಬೆಯಾಟ

ಅಕ್ಟೋಬರ್ 16 ರಂದು ಒಂಬತ್ತನೇ ತಲೆಮಾರಿನ ಖ್ಯಾತ ಕಲಾವಿದ ಗುಂಡುರಾಜು ಮತ್ತು ಅವರ ತಂಡವು ಅದ್ಭುತವಾದ ‘ತೊಗಲು ಗೊಂಬೆಯಾಟ’ ಪ್ರಸ್ತುತಪಡಿಸಲಿದ್ದು, ಇದು ಕರ್ನಾಟಕದ ಪ್ರಾಚೀನ ಗೊಂಬೆಯಾಟದ ಸಂಪ್ರದಾಯವನ್ನು ವಿಶ್ವದ ಗಮನಕ್ಕೆ ತರಲಿದೆ.

ಕೆಎಸ್‌ಟಿಡಿಸಿಯಿಂದ (KSTDC) ವಿಶೇಷ ಪ್ರವಾಸ ಪ್ಯಾಕೇಜ್ ಹಾಗೂ ಅಂಬಾರಿ ಬಸ್ ಸೇವೆ

ದಸರಾ ಸಂದರ್ಭದಲ್ಲಿ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರಿಗಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (KSTDC) ವಿಶೇಷ ಪ್ರಯಾಣ ಹಾಗೂ ಸಾರಿಗೆ ವ್ಯವಸ್ಥೆಗಳನ್ನು ಮಾಡಿದೆ.

ಪ್ರವಾಸಿಗರಿಗಾಗಿ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್ ಸವಾರಿ ವ್ಯವಸ್ಥೆ ಮಾಡಲಾಗಿದೆ. ಈ ಬಸ್‌ಗಳು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಪ್ರತಿ ಗಂಟೆಗೊಮ್ಮೆ ಸಂಚರಿಸಲಿವೆ. ಅಲ್ಲದೆ, ಮೈಸೂರಿನ ವೈಭವದ ದೀಪಾಲಂಕಾರವನ್ನು ಕಣ್ತುಂಬಿಕೊಳ್ಳಲು ಸಂಜೆ 6.30 ರಿಂದ ರಾತ್ರಿ 9ರವರೆಗೆ ವಿಶೇಷ ದೀಪಾಲಂಕಾರ ಸವಾರಿಗಳನ್ನು (Illumination Rides) ನಡೆಸಲಾಗುತ್ತದೆ.

7 ವಿಶೇಷ ಪ್ರವಾಸ ಪ್ಯಾಕೇಜ್‌ಗಳು

ಸಾಂಸ್ಕೃತಿಕ ಪರಂಪರೆ, ಪ್ರಕೃತಿ ಮತ್ತು ಧಾರ್ಮಿಕ ಪ್ರವಾಸಿ ತಾಣಗಳನ್ನು ಅನ್ವೇಷಿಸಲು ಅನುಕೂಲವಾಗುವಂತೆ ಕೆಎಸ್‌ಟಿಡಿಸಿಯು ಒಟ್ಟು 7 ವಿಶೇಷ ಪ್ರವಾಸ ಪ್ಯಾಕೇಜ್‌ಗಳನ್ನು ಘೋಷಿಸಿದೆ. ಇದರಲ್ಲಿ ಊಟಿ, ಮೈಸೂರು ನಗರದ ಪ್ರೇಕ್ಷಣೀಯ ಸ್ಥಳಗಳು, ಬೇಲೂರು-ಹಳೆಬೀಡು-ಶ್ರವಣಬೆಳಗೊಳ, ಕೊಡಗು, ಶಿವನಸಮುದ್ರ, ನಂಜನಗೂಡು ಹಾಗೂ ಇತರೆ ಐತಿಹಾಸಿಕ ತಾಣಗಳ ಪ್ರವಾಸಗಳು ಸೇರಿವೆ.

ದಸರಾ ಸಂದರ್ಭದಲ್ಲಿ ರಾಜ್ಯಕ್ಕೆ ಆಗಮಿಸುವ ದೇಶಿ ಹಾಗೂ ವಿದೇಶಿ ಪ್ರವಾಸಿಗರಿಗೆ ಮೈಸೂರು ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಇದು ಅತ್ಯುತ್ತಮ ಅವಕಾಶ ಕಲ್ಪಿಸಲಿದೆ ಎಂದು ಪ್ರವಾಸೋದ್ಯಮಸಚಿವ ಕೆ.ಜೆ. ಜಾರ್ಜ್ ಅಭಿಪ್ರಾಯಪಟ್ಟಿದ್ದು, ಈ ವಿಶೇಷ ಸೇವೆಗಳು ಪ್ರವಾಸಿಗರಿಗೆ ಅತ್ಯಂತ ಸಮಗ್ರ ಹಾಗೂ ಸ್ಮರಣೀಯ ಪ್ರವಾಸದ ಅನುಭವವನ್ನು ನೀಡಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

#Udayakala #UdayakalaNews #BengaluruAirport #KIA #MysuruDasara2026 #KSTDC #AmbariBus #TourismKarnataka #AnupamaHosakerere #KJ George #DasaraFestival #KarnatakaTourism #TravelNews

Related Posts

Leave a Reply

Your email address will not be published. Required fields are marked *