Thursday, October 08, 2026
Menu

ಸುಳ್ಳು ಸುದ್ದಿ ನೀಡಿದವರ ಮೇಲೆ ಮಾನನಷ್ಟ ಮೊಕದ್ದಮೆ: ಸಚಿವ ಸತೀಶ್ ಜಾರಕಿಹೊಳಿ

ಉದಯಕಾಲ ನ್ಯೂಸ್‌, ಬೆಳಗಾವಿ: ತಮ್ಮನ್ನು ತೇಜೋವಧೆ ಮಾಡಲು ತಮ್ಮ ವಿರುದ್ಧ ಆಧಾರರಹಿತ ಸುಳ್ಳು ಸುದ್ದಿಗಳನ್ನು ಹರಡುತ್ತಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿದ್ದು, ಧೈರ್ಯವಿದ್ದರೆ ಅವರು ನ್ಯಾಯಾಲಯಕ್ಕೆ ಬಂದು ಆರೋಪಗಳನ್ನು ಎದುರಿಸಲಿ ಎಂದು ಸಚಿವ ಸತೀಶ್ ಜಾರಕಿಹೊಳಿ ಕಠಿಣ ಸವಾಲು ಹಾಕಿದ್ದಾರೆ.‘ಕಮಿಷನ್ ಹಣದಿಂದ ಹೆಲಿಕಾಪ್ಟರ್ ಖರೀದಿಸಿದ್ದಾರೆ’ ಎಂಬ ಕೆಲ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ತಮ್ಮ ಹೆಸರಿಗೆ ಹಾಗೂ ವ್ಯಕ್ತಿತ್ತ್ವಕ್ಕೆ ಕಳಂಕ ತರುವ ಇಂತಹ ಪ್ರಯತ್ನಗಳ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಸ್ಪಷ್ಟಪಡಿಸಿದರು.

ಸುಳ್ಳು ಸುದ್ದಿಗೆ ಕಾನೂನಿನ ಛಡಿಯೇಟು
ಸಚಿವರ ವಿರುದ್ಧ ಹಬ್ಬಿಸಲಾಗುತ್ತಿರುವ ದುರುದ್ದೇಶಪೂರ್ವಕ ಹಾಗೂ ಆಧಾರರಹಿತ ವರದಿಗಳ ವಿರುದ್ಧ ಈಗಾಗಲೇ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ ಎಂದು ತಿಳಿಸಿದ ಅವರು, ಆರೋಪ ಹೊರಿಸಿದವರು ಕೋರ್ಟ್‌ನಲ್ಲಿ ಉತ್ತರಿಸಲಿ ಎಂದರು.

SIR ವಿವಾದ ಮತ್ತು ಬಿಜೆಪಿಗೆ ತಿರುಗೇಟು
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಮಾತನಾಡುತ್ತಾ, ಕಾಂಗ್ರೆಸ್‌ಗೆ SIR ಬಗ್ಗೆ ಯಾವುದೇ ಭಯವಿಲ್ಲ, ನಿಜವಾದ ಆತಂಕವಿರುವುದು ಬಿಜೆಪಿಯವರಿಗೆ ಎಂದರು. ನಾವು ಯಾರ ಮತಗಳನ್ನೂ ಅಳಿಸಿಲ್ಲ ಅಥವಾ ಹೊಸದಾಗಿ ಸೇರಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಸಾವಿರಾರು ಫಾರ್ಮ್‌-7 ಅರ್ಜಿಗಳನ್ನು ಸಲ್ಲಿಸಲು ಬಿಜೆಪಿಗೆ ಯಾವ ಅಧಿಕಾರವಿದೆ ಎಂದು ಪ್ರಶ್ನಿಸಿದ ಸಚಿವರು, ಯಾವುದೋ ಒಂದು ಸಂಸ್ಥೆ ಫಾರ್ಮ್‌ಗಳನ್ನು ಮುದ್ರಿಸುತ್ತಿದ್ದು, ಬಿಜೆಪಿ ಕಾರ್ಯಕರ್ತರು ಅದಕ್ಕೆ ಸಹಿ ಹಾಕುತ್ತಿದ್ದಾರೆ. ಯಾರ ಹೆಸರುಗಳನ್ನು ಅಳಿಸಬೇಕು ಎಂಬುದನ್ನು ಬಿಜೆಪಿ ಮುಂಚಿತವಾಗಿ ನಿರ್ಧರಿಸಿದೆ ಎಂದು ದೂರಿದರು. ಕೊಪ್ಪಳದ ಮತದಾರರಿಗೆ ಸಂಬಂಧಿಸಿದ ಫಾರ್ಮ್‌ಗಳು ಬೆಂಗಳೂರಿನಲ್ಲಿ ಹೇಗೆ ಮುದ್ರಣವಾಗಲು ಸಾಧ್ಯ? ಇದು ಸಂಪೂರ್ಣ ಪೂರ್ವಯೋಜಿತ ಎಂದು ಆರೋಪಿಸಿದರು.

ಇ.ಡಿ (ED) ನೋಟಿಸ್‌ ಬಗ್ಗೆ ಸ್ಪಷ್ಟನೆ
ಜಾರಿ ನಿರ್ದೇಶನಾಲಯದಿಂದ (ED) ಯಾವುದೇ ನೋಟಿಸ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಒಂದು ವೇಳೆ ನೋಟಿಸ್ ಬಂದರೆ ಅದಕ್ಕೆ ಕಾನೂನುಬದ್ಧವಾಗಿ ಉತ್ತರಿಸುವುದಾಗಿ ತಿಳಿಸಿದರು. ನಮಗೆ ನೋಟಿಸ್ ತಲುಪುವುದಕ್ಕಿಂತ ಮುಂಚಿತವಾಗಿ ಮಾಧ್ಯಮಗಳಿಗೆ ಮಾಹಿತಿ ಸಿಗುತ್ತದೆ ಎಂದು ವ್ಯಂಗ್ಯವಾಡಿದರು.
ಕಬ್ಬಿನ ಎಂಎಸ್‌ಪಿ ಬೆಲೆಯ ಪ್ರಶ್ನೆ ಉದ್ಭವಿಸಿದಾಗ ಕಬ್ಬು ಅಥವಾ ಸಕ್ಕರೆಯ ಬೆಲೆಯನ್ನು ನಿರ್ಧರಿಸುವ ಸಂಪೂರ್ಣ ಅಧಿಕಾರ ರಾಜ್ಯ ಸರ್ಕಾರಕ್ಕೆ ಮಾತ್ರ ಇಲ್ಲ ಎಂದೂ ಈ ಸಂದರ್ಭದಲ್ಲಿ ತಿಳಿಸಿದರು.
#SatishJarkiholi #DefamationCase #Belagavi #KarnatakaPolitics #FakeNews #Form7Controversy #ED #Congress #UdayakalaNews

Related Posts

Leave a Reply

Your email address will not be published. Required fields are marked *