ಉದಯಕಾಲ ನ್ಯೂಸ್, ನವದೆಹಲಿ: ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಧ್ವನಿ ಎತ್ತುತ್ತಿರುವ ವಿರೋಧ ಪಕ್ಷಗಳ ಮುಖಂಡರನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗವು ನಡೆಸುತ್ತಿರುವ ಸರ್ವಾಧಿಕಾರಿ ಧೋರಣೆ ವಿರುದ್ಧ ವಿಪಕ್ಷಗಳು ತೀವ್ರ ಹೋರಾಟ ಮುಂದುವರಿಸಿವೆ. ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ವಿರುದ್ಧದ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ವಿಪಕ್ಷ ನಾಯಕರು, “ನನ್ನ ವಿರುದ್ಧ 100 ಎಫ್‌ಐಆರ್‌ಗಳನ್ನು ದಾಖಲಿಸಿದರೂ ನಾನು ಹೆದರುವುದಿಲ್ಲ; ಪ್ರತಿಯೊಂದು ಎಫ್‌ಐಆರ್ ಕೂಡ ನನಗೆ ಒಂದು ಪದಕವಿದ್ದಂತೆ” ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಗುಡುಗಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ವಿಪಕ್ಷಗಳ ನಾಯಕರು ಮಹತ್ವದ ಸಭೆ ನಡೆಸಿದ ಬಳಿಕ, ಸಂಸತ್ ಭವನದಿಂದ ಜಂತರ್ ಮಂತರ್‌ನತ್ತ ಬೃಹತ್ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ದಬ್ಬಾಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ಧ ಸಮರ
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರವಾಗಿ ಚುನಾವಣಾ ಆಯೋಗವು ಕೇಂದ್ರದ ಕೈಗೊಂಬೆಯಾಗಿ ವರ್ತಿಸುತ್ತಿದೆ ಎಂದು ಪ್ರತಿಪಕ್ಷಗಳು ತೀವ್ರವಾಗಿ ಆಕ್ಷೇಪಿಸಿವೆ. ಜ್ಞಾನೇಶ್ ಕುಮಾರ್ ಅವರು ‘ಕಾನೂನುಬದ್ಧ CEC ಅಲ್ಲ’ ಎಂಬುದನ್ನು ದೇಶದ ಜನರಿಗೆ ಮನವರಿಕೆ ಮಾಡಿಕೊಡುವುದಾಗಿ ನಾಯಕರು ಘೋಷಿಸಿದ್ದಾರೆ. ಜನರ ಹಕ್ಕುಗಳನ್ನು ರಕ್ಷಿಸುವ ಈ ಐತಿಹಾಸಿಕ ಹೋರಾಟದಲ್ಲಿ ಎಲ್ಲಾ ವಿಪಕ್ಷಗಳು ಒಗ್ಗಟ್ಟಾಗಿ ನಿಂತಿವೆ ಎಂದು ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ಪ್ರತಿಭಟನೆ ಹತ್ತಿಕ್ಕಲು ಯತ್ನ, ರಾಹುಲ್ ಆಕ್ರೋಶ
“ನಿನ್ನೆ ನಾವು ಪ್ರತಿಭಟನೆ ನಡೆಸಲು ಮುಂದಾದಾಗ ಪೊಲೀಸರನ್ನು ಬಳಸಿ ಹತ್ತಿಕ್ಕಲು ನೋಡಿದರು. ಆದರೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಲೇಬೇಕು. ನನ್ನ ಮೇಲೆ 100 ಎಫ್‌ಐಆರ್ ಹಾಕಲಿ, ಪ್ರತಿಯೊಂದೂ ನನಗೆ ಪದಕ” ಎಂದು ರಾಹುಲ್ ಗಾಂಧಿ ಸರ್ಕಾರದ ದಮನಕಾರಿ ನೀತಿಗೆ ಸವಾಲು ಹಾಕಿದರು. ಮಂಗಳವಾರ ದಿನವಿಡೀ ನಡೆದ ಪ್ರತಿಭಟನೆಯ ಅಂತ್ಯದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಸುಮಾರು 250ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಅಕ್ರಮವಾಗಿ ವಶಕ್ಕೆ ಪಡೆದಿದ್ದರು. ಈ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಬುಧವಾರವೂ ವಿಪಕ್ಷ ಸಂಸದರು ಜಂತರ್ ಮಂತರ್‌ವರೆಗೆ ಬೃಹತ್ ಮೆರವಣಿಗೆ ನಡೆಸಿದರು.
ವಿಪಕ್ಷಗಳ ಒಗ್ಗಟ್ಟಿನ ಹೋರಾಟ ಮುಂದುವರಿಕೆ
ಟಿಎಂಸಿ ಸಂಸದ ಡೆರೆಕ್ ಒ’ಬ್ರಿಯಾನ್ ಮಾತನಾಡಿ, =”ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಆಡಳಿತಶಾಹಿಗಳ ದಬ್ಬಾಳಿಕೆ ಕೊನೆಯಾಗುವವರೆಗೂ ಈ ಹೋರಾಟ ನಿಲ್ಲುವುದಿಲ್ಲ” ಎಂದರು.ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ ಪ್ರತಿಕ್ರಿಯಿಸಿ, “ನಾವು ಎಫ್‌ಐಆರ್‌ಗಳಿಗೆ ಹೆದರುವವರಲ್ಲ. ಸಂವಿಧಾನ ರಕ್ಷಣೆಯ ನಮ್ಮ ಹೆಜ್ಜೆ ಹಿಂದೆ ಸರಿಯುವುದಿಲ್ಲ” ಎಂದು ತಿರುಗೇಟು ನೀಡಿದರು.ಸಭೆಯಲ್ಲಿ ಎಸ್‌ಆರ್‌ಐ (SIR) ವಿಚಾರವಾಗಿ ಚುನಾವಣಾ ಆಯುಕ್ತರಿಗೆ ತುರ್ತು ಸಭೆಗಾಗಿ ಕಳುಹಿಸಬೇಕಾದ ಪತ್ರದ ಕರಡು ಸಿದ್ಧಪಡಿಸಲಾಯಿತು. ಈ ಸಭೆಯಲ್ಲಿ ಕಾಂಗ್ರೆಸ್, ಆರ್‌ಜೆಡಿ, ಟಿಎಂಸಿ ಸೇರಿದಂತೆ ವಿವಿಧ ಪ್ರತಿಪಕ್ಷಗಳ ಪ್ರಮುಖ ಸಂಸದರು ಭಾಗವಹಿಸಿದ್ದರು.
ಇದೇ ವೇಳೆ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ (AAP) ಕೂಡ ವ್ಯಾಪಕ ‘ಮತ ಕಳ್ಳತನ’ ಖಂಡಿಸಿ ಕಾಶ್ಮೀರ್ ಗೇಟ್‌ನಿಂದ ದೆಹಲಿ ಮುಖ್ಯ ಚುನಾವಣಾಧಿಕಾರಿ ಕಚೇರಿಯತ್ತ ಹಮ್ಮಿಕೊಂಡಿದ್ದ ಮೆರವಣಿಗೆಯನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ತಡೆಯುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆಗೆ ಮುಂದಾದರು.ಒಟ್ಟಾರೆಯಾಗಿ ಮತದಾರರ ಪಟ್ಟಿ ವಿವಾದ ಹಾಗೂ ಕೇಂದ್ರದ ದಬ್ಬಾಳಿಕೆಯ ವಿರುದ್ಧ ಇಂಡಿಯಾ ಮೈತ್ರಿಕೂಟದ ನಾಯಕರು ಸರ್ಕಾರದ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ.
#RahulGandhi #MallikarjunKharge #JantarMantar #ElectionCommission #Congress #UdayakalaNews #OppositionProtest #IndiaAlliance #DelhiNews


