ಉದಯಕಾಲ ನ್ಯೂಸ್, ನವದೆಹಲಿ: ರಾಜ್ಯ ರಾಜಕೀಯದಲ್ಲಿ ಸಚಿವರನ್ನು ಗುರಿಯಾಗಿಸಿಕೊಂಡು ‘ಸ್ಟಿಂಗ್ ಆಪರೇಷನ್’ ನಡೆಸಲಾಗುತ್ತಿದೆ ಎಂಬ ಚರ್ಚೆಗಳು ತೀವ್ರಗೊಂಡಿರುವ ಬೆನ್ನಲ್ಲೇ, ಖುದ್ದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ತಮ್ಮ ವಿರುದ್ಧವೂ ಸ್ಟಿಂಗ್ ಆಪರೇಷನ್ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನನ್ನಿಂದಲೇ ಸ್ಟಿಂಗ್ ಆರಂಭಿಸಲು ಯತ್ನ
ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, “ನನ್ನ ಬಳಿಗೂ ಕೆಲವರು ಜಿಎಸ್ಟಿ ಇತ್ಯಾದಿ ಬೇರೆ ಬೇರೆ ವಿಚಾರಗಳನ್ನು ಮಾತನಾಡಲು ಬಂದಿದ್ದರು.ನನ್ನಿಂದಲೇ ಈ ಸ್ಟಿಂಗ್ ಆಪರೇಷನ್ ಆರಂಭಿಸಲು ಯತ್ನಿಸಿದ್ದರು” ಎಂದು ತಿಳಿಸಿದರು.
ಎಲ್ಲಾ ದಾಖಲೆಗಳು ನನ್ನಲ್ಲಿ ಲಭ್ಯ
“ನನಗೆ ಅವರ ಮೇಲೆ ಮುಂಚಿತವಾಗಿಯೇ ಅನುಮಾನ ಬಂದ ಹಿನ್ನೆಲೆಯಲ್ಲಿ, ಪೊಲೀಸರ ಮೂಲಕ ಸಂಪೂರ್ಣ ಮಾಹಿತಿ ಪಡೆದು ಅಗತ್ಯವಿರುವ ಎಲ್ಲಾ ದಾಖಲೆಗಳು ಹಾಗೂ ಫೋಟೋಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದೇನೆ. ಅಗತ್ಯಬಿದ್ದರೆ ಆ ಫೋಟೋಗಳನ್ನು ಬಿಡುಗಡೆ ಮಾಡುತ್ತೇನೆ. ಈ ಷಡ್ಯಂತ್ರದ ಹಿಂದೆ ಯಾರ್ಯಾರಿದ್ದಾರೆ, ಯಾರು ಇದಕ್ಕೆ ಹಣಕಾಸು ಒದಗಿಸುತ್ತಿದ್ದಾರೆ ಮತ್ತು ಇದರ ಪಿತಾಮಹ ಯಾರು ಎಂಬುದು ನನಗೆ ಸ್ಪಷ್ಟವಾಗಿ ತಿಳಿದಿದೆ. ಕುಂಬಳಕಾಯಿ ಕಳ್ಳ ಅಂದರೆ ಕೆಲವರು ಹೆಗಲು ಮುಟ್ಟುಕೊಳ್ಳುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
ಅಧಿಕಾರಿಗಳು ಹಾಗೂ ಸಚಿವರಿಗೆ ಎಚ್ಚರಿಕೆ
“ಈ ಹಿಂದೆ 2000ರ ಆಸುಪಾಸಿನಲ್ಲೂ ನನ್ನ ವಿರುದ್ಧ ಇಂತಹ ಷಡ್ಯಂತ್ರಗಳು ನಡೆದಿದ್ದವು. ಸುಖಾಸುಮ್ಮನೆ ಟ್ರಾಪ್ ಮಾಡಲು ಜನರು ಬರುತ್ತಾರೆ, ಹಾಗಾಗಿ ಎಲ್ಲರೂ ಎಚ್ಚರಿಕೆಯಿಂದ ಇರಿ ಎಂದು ನಮ್ಮ ಅಧಿಕಾರಿಗಳಿಗೆ ಮತ್ತು ಸಚಿವರಿಗೆ ಸೂಚನೆ ನೀಡಿದ್ದೇನೆ. ಇದರಲ್ಲಿ ಕರ್ನಾಟಕದವರೇ ಇದ್ದಾರಾ ಅಥವಾ ಹೊರರಾಜ್ಯದವರಾ ಎಂಬ ವಿವರಗಳನ್ನು ಈಗಲೇ ಬಹಿರಂಗಪಡಿಸುವುದಿಲ್ಲ, ಕಾಲವೇ ಎಲ್ಲದಕ್ಕೂ ತಕ್ಕ ಉತ್ತರ ನೀಡಲಿದೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
#DKShivakumar #StingOperation #KarnatakaPolitics #UdayakalaNews #BangaloreNews #PoliticalConspiracy #DKShiStatement


