Thursday, October 08, 2026
Menu

ವಿಜಯಪ್ರಕಾಶ್ ಹಾಗೂ ಅನುರಾಧ ಭಟ್ ಗಾನಸುಧೆಯೊಂದಿಗೆ ಮೈಸೂರು ಯುವ ಸಂಭ್ರಮಕ್ಕೆ ತೆರೆ

ಮೈಸೂರು: ಕಳೆದ 10 ದಿನಗಳಿಂದ ಯುವಕ-ಯುವತಿಯರ ಮನಸೊರೆಗೊಳಿಸುತ್ತಿದ್ದ ಮೈಸೂರು ದಸರಾ ಮಹೋತ್ಸವದ ‘ಯುವಸಂಭ್ರಮ’ಕ್ಕೆ ಬುಧವಾರ ಅದ್ಧೂರಿಯಾಗಿ ತೆರೆ ಬಿದ್ದಿದೆ. ಖ್ಯಾತ ಹಿನ್ನೆಲೆ ಗಾಯಕ ವಿಜಯಪ್ರಕಾಶ್ ಹಾಗೂ ಗಾಯಕಿ ಅನುರಾಧ ಭಟ್ ಅವರ ಗಾಯನದ ಮೋಡಿಗೆ ಪ್ರೇಕ್ಷಕರು ಮೈಮರೆತು ಕುಣಿದು ಕುಪ್ಪಳಿಸಿದರು.

ಕುವೆಂಪು ಬಯಲು ರಂಗಮಂದಿರದಲ್ಲಿ ಕಳೆಗಟ್ಟಿದ ಸಂಭ್ರಮ
ದಸರಾ ಮಹೋತ್ಸವದ ಅಂಗವಾಗಿ ಯುವ ಸಂಭ್ರಮ ಉಪ ಸಮಿತಿ ವತಿಯಿಂದ ಮಾನಸಗಂಗೋತ್ರಿಯ ಕುವೆಂಪು ಬಯಲು ರಂಗಮಂದಿರದಲ್ಲಿ ನಡೆದ 10ನೇ ಹಾಗೂ ಕೊನೆಯ ದಿನದ ಯುವ ಸಂಭ್ರಮದಲ್ಲಿ ಯುವ ಮನಸುಗಳು ಸಡಗರದಿಂದ ತೇಲಾಡಿದವು. ಯುವಸಂಭ್ರಮವನ್ನು ಉದ್ಘಾಟಿಸಿ ಗಾನುಸುಧೆ ಹರಿಸಿದ್ದ ವಿಜಯಪ್ರಕಾಶ್, ಕೊನೆಯ ದಿನವೂ ತಮ್ಮ ಅತಿಮಧುರ ಗಾನಕಂಠದಿಂದ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿದರು.

ವೇದಿಕೆ ಮೇಲೆ ‘ಜೈ ಹೋ ಮೈಸೂರು’ ಎನ್ನುವ ಮೂಲಕ ಮೈಸೂರಿನ ದಸರಾ ಸಂಭ್ರಮವನ್ನು ಇಮ್ಮಡಿಸಿದ ವಿಜಯಪ್ರಕಾಶ್, ಬಳಿಕ ಗಾಯಕಿ ಅನುರಾಧ ಭಟ್ ಅವರೊಂದಿಗೆ ಸೇರಿ ಜನಪ್ರಿಯ ‘ಸಿಂಗಾರ ಸಿರಿಯೇ’ ಹಾಡನ್ನು ಹಾಡಿ ಸಭಿಕರನ್ನು ಹುರಿದುಂಬಿಸಿದರು. ‘ಕಾಣದಂತೆ ಮಾಯವಾದನು’, ‘ನಮ್ಮ ಶಿವ ಕೈಲಾಸ ಸೇರಿಕೊಂಡನು’, ‘ಬೆಳಗೆದ್ದು ಯಾರ ಮುಖವ ನಾ ನೋಡಿದೆ’ ಹಾಗೂ ‘ಏನಮ್ಮಿ ಏನಮ್ಮಿ ನನ್ನ ಬಾಳು ಹೆಚ್ಚು ಕಮ್ಮಿ’ ಮುಂತಾದ ಸೂಪರ್ ಹಿಟ್ ಹಾಡುಗಳಿಗೆ ಪ್ರೇಕ್ಷಕರು ಮೊಬೈಲ್ ಟಾರ್ಚ್ ಬೆಳಗಿ ಉತ್ಸಾಹ ತುಂಬಿದರು. ಗಾಯಕಿ ಅನುರಾಧ ಭಟ್ ಅವರು ‘ಅಪ್ಪಾ ಐ ಲವ್ ಯು ಪಾ’, ‘ನಾನು ನೋಡಿದ ಮೊದಲ ವೀರ’ ಹಾಡುಗಳನ್ನು ಸುಮಧುರವಾಗಿ ಹಾಡಿ ಗಮನ ಸೆಳೆದರು.

ಇತರ ಕಲಾವಿದರ ರಸಮಂಜರಿ ಹಾಗೂ ಎಸ್.ಜಾನಕಿಗೆ ನಮನ
ಇದೇ ವೇಳೆ ಸರಿಗಮಪ ಖ್ಯಾತಿಯ ಅಮೂಲ್ಯ ‘ಮಾಯಾವಿ ಮಿನುಗು ನೀನು’, ಗಾಯಕಿ ಶಾಶ್ವತಿ ಕಶ್ಯಪ್ ‘ಸೋಜಿಗದ ಸೂಜುಮಲ್ಲಿಗೆ’ ಹಾಡಿನ ಮೂಲಕ ಮಲೆ ಮಹದೇಶ್ವರ ಸ್ಮರಣೆ ಮಾಡಿದರು. ಗಾಯಕ ನಿಖಿಲ್ ಪಾರ್ಥಸಾರಥಿ ‘ನಿನ್ನಂದಲೇ ನಿನ್ನಂದಲೇ’ ಹಾಡಿ ಪ್ರೇಕ್ಷಕರನ್ನು ಗಾನ ಲೋಕದಲ್ಲಿ ತೇಲಿಸಿದರು. ವಿಜಯಪ್ರಕಾಶ್ ಕಲ್ಚರ್ ಟ್ರಸ್ಟ್ ತಂಡದವರು ‘ಶಿಲೆಗಳು ಸಂಗೀತವಾ’ ಹಾಡನ್ನು ಹಾಡಿದರೆ, ಮತ್ತೊಂದು ತಂಡದ ವಿದ್ಯಾರ್ಥಿಗಳು ನೃತ್ಯದ ಮೂಲಕ ರಂಗು ತುಂಬಿದರು.

ಕಾರ್ಯಕ್ರಮಕ್ಕೂ ಮುನ್ನ ಮೈಸೂರು ವಿವಿ ಸಂಜೆ ಕಾಲೇಜಿನ ವಿದ್ಯಾರ್ಥಿಗಳು ಇತ್ತೀಚೆಗೆ ನಿಧನರಾದ ಗಾನಕೋಗಿಲೆ ಎಸ್. ಜಾನಕಿ ಹಾಗೂ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರನ್ನು ಸ್ಮರಿಸಿ ನಮನ ಸಲ್ಲಿಸಿದರು. ಮೈಸೂರು ವಿವಿ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ತಮಟೆ ಸದ್ದಿಗೆ ಯುವ ಜನತೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಒಟ್ಟಾರೆ 10ಕ್ಕೂ ಹೆಚ್ಚು ಕಾಲೇಜಿನ ವಿದ್ಯಾರ್ಥಿ ತಂಡಗಳು ಈ ಅಂತಿಮ ದಿನದ ಯುವ ಸಂಭ್ರಮದಲ್ಲಿ ಭಾಗವಹಿಸಿ ಪ್ರದರ್ಶನ ನೀಡುವ ಮೂಲಕ ಈ ಬಾರಿಯ ಯುವಸಂಭ್ರಮಕ್ಕೆ ಅದ್ಭುತ ತೆರೆಬಿತ್ತು.
#MysoreDasara2026 #Yuvasambhrama #VijayPrakash #AnuradhaBhat #MysoreUniversity #KuvempuRangaMandira #UdayakalaNews #MysoreNews #DasaraFestival #KarnatakaCulture

Related Posts

Leave a Reply

Your email address will not be published. Required fields are marked *