ಉದಯಕಾಲ ನ್ಯೂಸ್,ಮಂಗಳೂರು: ಡಿಜಿಟಲ್ ಮೋಸದ ಬಗ್ಗೆ ಎಚ್ಚರದಿಂದಿರಿ ಎಂದು ಸರ್ಕಾರಗಳು ಹಾಗೂ ಸಂಸ್ಥೆಗಳು ಎಚ್ಚರಿಸುತ್ತಲೇ ಇರುತ್ತವೆ. ಆದರೂ ಜನರು ಚಾಣಾಕ್ಷ ಕಳ್ಳರ ಬಲೆಗೆ ಬೀಳುತ್ತಲೇ ಇರುತ್ತಾರೆ. ಇಂತಹ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮನಿ ಲಾಂಡರಿಂಗ್, ಡ್ರಗ್ಸ್ ಮತ್ತು ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ, ‘ಡಿಜಿಟಲ್ ಅರೆಸ್ಟ್’ ನೆಪದಲ್ಲಿ 75 ವರ್ಷದ ಹಿರಿಯ ನಾಗರಿಕ ಮಹಿಳೆಯೊಬ್ಬರಿಂದ ಬರೋಬ್ಬರಿ ₹2 ಕೋಟಿ ಹಣವನ್ನು ಲಪಟಾಯಿಸಿರುವ ಭಾರಿ ಸೈಬರ್ ವಂಚನೆ ಪ್ರಕರಣವು ಮಂಗಳೂರಿನ ಸೆನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಪ್ರಕಟಣೆ ತಿಳಿಸಿದೆ.
ಪ್ರಕರಣದ ವಿವರ
ದೂರಿನ ಪ್ರಕಾರ, ದಿನಾಂಕ 25-09-2026ರಂದು ಸಂತ್ರಸ್ತ 75 ವರ್ಷದ ವೃದ್ಧೆ ಮನೆಯಲ್ಲಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಮೊಬೈಲ್ ಕರೆ ಮಾಡಿ, ತಾನು ಮುಂಬೈನ ಕೊಲಾಬಾ ಪೊಲೀಸ್ ಅಧಿಕಾರಿ ‘ಸಂದೀಪ್ ರಾವ್’ ಎಂದು ಪರಿಚಯಿಸಿಕೊಂಡಿದ್ದಾನೆ. ಅಂತಾರಾಷ್ಟ್ರೀಯ ಮನಿ ಲಾಂಡರಿಂಗ್ ಆರೋಪಿ ನರೇಶ್ ಗೋಯಲ್ ಜೊತೆ ಸೇರಿಕೊಂಡು ನೀವು ಮನಿ ಲಾಂಡರಿಂಗ್, ಡ್ರಗ್ ಡೀಲಿಂಗ್ ಹಾಗೂ ಮಕ್ಕಳ ಕಳ್ಳಸಾಗಣೆಯಂತಹ ಗಂಭೀರ ಕೃತ್ಯಗಳಲ್ಲಿ ಭಾಗಿಯಾಗಿದ್ದೀರಿ ಎಂದು ಆರೋಪಿಸಿ, ನಿಮ್ಮ ವಿರುದ್ಧ ಮುಂಬೈನಲ್ಲಿ ಪ್ರಕರಣ ದಾಖಲಾಗಿದೆ ಎಂದು ಬೆದರಿಸಿದ್ದಾನೆ.
ನಂತರ ಮತ್ತೊಂದು ಮೊಬೈಲ್ ಸಂಖ್ಯೆಯಿಂದ ವಾಟ್ಸಾಪ್ ವಿಡಿಯೋ ಕರೆ ಮಾಡಿದ ಅಪರಿಚಿತನೊಬ್ಬ, ತಾನು ಸಿಬಿಐ ಅಧಿಕಾರಿ ‘ಸಮಾಧಾನ್ ಪವಾರ್’ ಎಂದು ಹೇಳಿಕೊಂಡಿದ್ದಾನೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಚಂದ್ರಚೂಡ್ ಅವರು ಸಹಾಯ ಮಾಡಲಿದ್ದಾರೆ ಎಂದು ನಂಬಿಸಿದ್ದಾನೆ.
ಡಿಜಿಟಲ್ ನಿಗಾದ ಭೀತಿ
ನೀವು ಅಂತಾರಾಷ್ಟ್ರೀಯ ಮಟ್ಟದ ಅಪರಾಧ ಎಸಗಿದ್ದು, ಸುಪ್ರೀಂ ಕೋರ್ಟ್‌ನ ‘ನ್ಯಾಷನಲ್ ಸೀಕ್ರೆಸಿ ಆಕ್ಟ್’ ಅಡಿಯಲ್ಲಿ ಸದ್ಯ ಡಿಜಿಟಲ್ ನಿಗಾದಲ್ಲಿದ್ದೀರಿ (ಡಿಜಿಟಲ್ ಅರೆಸ್ಟ್) ಈ ವಿಷಯವನ್ನು ಯಾರಿಗೂ ಬಹಿರಂಗಪಡಿಸಬಾರದು, ತಪ್ಪಿಸಿಕೊಂಡು ಹೋಗಲು ಸಾಧ್ಯವೇ ಇಲ್ಲ ಎಂದು ವೃದ್ಧೆಯನ್ನು ತೀವ್ರ ಮಾನಸಿಕ ಒತ್ತಡ ಹಾಗೂ ಭೀತಿಗೊಳಗಾಗುವಂತೆ ಮಾಡಿದ್ದಾರೆ.
ಹಣ ವರ್ಗಾವಣೆ ಹಾಗೂ ದೂರು
ಆಸ್ತಿ ಹಾಗೂ ಬ್ಯಾಂಕ್ ಖಾತೆಗಳ ವಿವರ ಪರಿಶೀಲಿಸಿ 2 ದಿನಗಳಲ್ಲಿ ಪ್ರಕರಣದಿಂದ ಸಂಪೂರ್ಣ ‘ಕ್ಲಿಯರೆನ್ಸ್’ ನೀಡುವುದಾಗಿ ನಂಬಿಸಿದ ವಂಚಕರು, ವೃದ್ಧೆಯ ಎಲ್ಲ ಬ್ಯಾಂಕ್ ಖಾತೆಗಳ ವಿವರ ಪಡೆದುಕೊಂಡಿದ್ದಾರೆ. ಅವರ ಮಾತನ್ನು ನಂಬಿದ ಸಂತ್ರಸ್ತೆ ಮೊದಲ ಹಂತದಲ್ಲಿ ರೂ. 60,00,000 (ಅರವತ್ತು ಲಕ್ಷ ರೂ.) ಹಾಗೂ ದಿನಾಂಕ 03-10-2026ರಂದು ₹1,40,00,000 (ಒಂದು ಕೋಟಿ ನಲವತ್ತು ಲಕ್ಷ ರೂ.) ಹಣವನ್ನು ಆರೋಪಿಗಳು ನೀಡಿದ ಬ್ಯಾಂಕ್ ಆಫ್ ಇಂಡಿಯಾ ಖಾತೆಗೆ ಆರ್‌ಟಿಜಿಎಸ್ (RTGS) ಮೂಲಕ ವರ್ಗಾವಣೆ ಮಾಡಿದ್ದಾರೆ.
ಹೀಗೆ ಸೆಪ್ಟಂಬರ್ 25ರಿಂದ ಅಕ್ಟೋಬರ್ 5ರ ಅವಧಿಯಲ್ಲಿ ಹಂತ-ಹಂತವಾಗಿ ಒಟ್ಟು ರೂ. 2,00,00,000 (ಎರಡು ಕೋಟಿ ರೂಪಾಯಿ) ಹಣವನ್ನು ವರ್ಗಾಯಿಸಿಕೊಂಡು ವಂಚಕರು ಮೋಸ ಮಾಡಿದ್ದಾರೆ. ತಾನು ವಂಚನೆಗೊಳಗಾಗಿರುವುದು ಅರಿವಿಗೆ ಬರುತ್ತಿದ್ದಂತೆ ವೃದ್ಧೆ ಮಂಗಳೂರು ನಗರ ಸೆನ್ (CEN) ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.
#MangaloreNews #CyberFraud #DigitalArrest #MangaloreCENPolice #UdayakalaNews #SeniorCitizenScam #CyberCrimeKarnataka #MoneyLaunderingScam

