Menu

ಬೆಂಗಳೂರಿನ ಪ್ರಮುಖ ಫಾರ್ಮಾಗಳ ಮೇಲೆ ಎಸ್‌ಐಟಿ ದಾಳಿ, ನಕಲಿ ಔಷಧಿ ಸೀಜ್!

ಉದಯಕಾಲ ನ್ಯೂಸ್, ಬೆಂಗಳೂರು: ರಾಜ್ಯದಲ್ಲಿ ಸಂಚಲನ ಮೂಡಿಸಿರುವ ನಕಲಿ ಔಷಧಿ ದಂಧೆ (Fake Medicine Scam) ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ತೀವ್ರಗೊಳಿಸಿರುವ ಎಸ್‌ಐಟಿ (SIT) ಅಧಿಕಾರಿಗಳು, ಆರೋಪಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನಕಲಿ ಔಷಧಿಗಳನ್ನು ಖರೀದಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದ ಬೆಂಗಳೂರಿನ ಮೂರು ಫಾರ್ಮಾಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ, ಕೋಟ್ಯಂತರ ರೂ. ಮೌಲ್ಯದ ನಕಲಿ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿಗಳಾದ ಪ್ರಶಾಂತ್ ಹಾಗೂ ಡಿಸ್ಟ್ರಿಬ್ಯೂಟರ್ ವಿರೇಶ್ ಅವರ ವಿಚಾರಣೆ ವೇಳೆ ಲಭ್ಯವಾದ ಮಹತ್ವದ ಸುಳಿವುಗಳ ಆಧಾರದ ಮೇರೆಗೆ ಎಸ್‌ಐಟಿ ಈ ಕಾರ್ಯಾಚರಣೆ ನಡೆಸಿದೆ.
ದೊಡ್ಡ ಫಾರ್ಮಾಗಳ ಮೇಲೆ ದಾಳಿ!

ಕಳೆದ ವರ್ಷದ ಏಪ್ರಿಲ್‌ನಿಂದ ಇಲ್ಲಿಯವರೆಗೆ ಪ್ರಮುಖ ಆರೋಪಿಗಳಿಂದ ನಕಲಿ ಔಷಧಿಗಳನ್ನು ಪಡೆದು ಗ್ರಾಹಕರಿಗೆ ಮತ್ತು ವಿವಿಧ ಕಡೆಗಳಿಗೆ ಮಾರಾಟ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಳಗಿನ ಮೂರು ಪ್ರಮುಖ ಮಳಿಗೆಗಳ ಮೇಲೆ ದಾಳಿ ನಡೆಸಲಾಗಿದೆ

ಆರ್‌ಆರ್ ಫಾರ್ಮಾ(ರಾಜರಾಜೇಶ್ವರಿ ನಗರ)
ಮೆಡಿ365 ಎಲ್‌ಎಲ್‌ಪಿ ಫಾರ್ಮಾ (ಚಾಮರಾಜಪೇಟೆ)
ಪಟೇಲ್ ಫಾರ್ಮಾ (ತಲಘಟ್ಟಪುರ)

ಮಾಲೀಕರಿಗೆ ನೋಟಿಸ್ ಹಾಗೂ ತೀವ್ರ ವಿಚಾರಣೆ

ದಾಳಿ ನಡೆಸಿದ ಎಸ್‌ಐಟಿ ಅಧಿಕಾರಿಗಳು ಮೂರು ಫಾರ್ಮಾಗಳ ಮಾಲೀಕರಿಗೆ ಅಧಿಕೃತ ನೋಟಿಸ್ ಜಾರಿಗೊಳಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ. ಆರೋಪಿಗಳಿಂದ ಯಾವ ಕಾಲದಿಂದ ನಕಲಿ ಮಾತ್ರೆಗಳನ್ನು ಖರೀದಿಸಲಾಗುತ್ತಿತ್ತು? ಯಾವೆಲ್ಲಾ ವೈದ್ಯಕೀಯ ಮಳಿಗೆಗಳು, ವ್ಯಕ್ತಿಗಳು ಅಥವಾ ಆಸ್ಪತ್ರೆಗಳಿಗೆ ಈ ನಕಲಿ ಮಾತ್ರೆಗಳನ್ನು ಸರಬರಾಜು ಮಾಡಲಾಗಿದೆ? ಎಂಬ ಗಂಭೀರ ಮಾಹಿತಿಯನ್ನು ಅಧಿಕಾರಿಗಳು ಕಲೆಹಾಕುತ್ತಿದ್ದಾರೆ.

ನಕಲಿ ಔಷಧಿಗಳ ಮಾರಾಟದಿಂದ ಸಾರ್ವಜನಿಕರ ಆರೋಗ್ಯದ ಜತೆ ಚೆಲ್ಲಾಟವಾಡುತ್ತಿರುವವರ ಜಾಲವನ್ನು ಸಂಪೂರ್ಣವಾಗಿ ಭೇದಿಸಲು ಎಸ್‌ಐಟಿ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
#FakeMedicineScam #SITRaids #BangaloreNews #RRPharma #Medi365 #PatelPharma #HealthSafety #CrimeNews #UdayakalaNews #BreakingNews

Related Posts

Leave a Reply

Your email address will not be published. Required fields are marked *