Menu

ಪ್ರಥಮ ದರ್ಜೆ ಕ್ರಿಕೆಟ್‌ಗೆ ಯಜುವೇಂದ್ರ ಚಹಲ್ ವಿದಾಯ

ಪ್ರಥಮ ದರ್ಜೆ ಕ್ರಿಕೆಟ್‌ಗೆ ಯಜುವೇಂದ್ರ ಚಹಲ್ ವಿದಾಯ: ಸೀಮಿತ ಓವರ್‌ಗಳಲ್ಲಿ ಮುಂದುವರಿಕೆ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಹಿರಿಯ ಲೆಗ್-ಸ್ಪಿನ್ನರ್ ಯಜುವೇಂದ್ರ ಚಹಲ್ ಪ್ರಥಮ ದರ್ಜೆ (ಕೆಂಪು ಚೆಂಡಿನ) ಕ್ರಿಕೆಟ್‌ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ ಅವರ 17 ವರ್ಷಗಳ ಸುದೀರ್ಘ ರೆಡ್‌ ಬಾಲ್ ಕ್ರಿಕೆಟ್ ಪ್ರಯಾಣಕ್ಕೆ ಅಧಿಕೃತ ತೆರೆಬಿದ್ದಿದೆ.ಭಾರತದ ಪರ ಟೆಸ್ಟ್ ಕ್ರಿಕೆಟ್ ಆಡುವ ತಮ್ಮ ಬಹುದಿನಗಳ ಕನಸು ಈಡೇರದಿದ್ದರೂ, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ (ಏಕದಿನ ಹಾಗೂ ಟಿ20) ಮುಂದುವರಿಯುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

148 ವಿಕೆಟ್ ಸಾಧನೆ

2009ರಲ್ಲಿ ಹರಿಯಾಣ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ 35 ವರ್ಷದ ಚಹಲ್, ಒಟ್ಟು 49 ಪಂದ್ಯಗಳಿಂದ 32.27ರ ಸರಾಸರಿಯಲ್ಲಿ 148 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಭಾರತ ಪರ 72 ಏಕದಿನ ಹಾಗೂ 80 ಟಿ20 ಪಂದ್ಯಗಳನ್ನು ಆಡಿರುವ ಅವರಿಗೆ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಅವಕಾಶ ಸಿಗಲೇ ಇಲ್ಲ. ಅವರು ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಗಸ್ಟ್ 2023ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ (ಟಿ20) ಆಡಿದ್ದರು.

ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಚಹಲ್

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಬರೆಯಿಕೊಂಡಿರುವ ಅವರು, “ನಾನು 10 ವರ್ಷದವನಿದ್ದಾಗ ಮೊದಲ ಬಾರಿಗೆ ಕೆಂಪು ಚೆಂಡನ್ನು ಕೈಗೆತ್ತಿಕೊಂಡೆ. ಆ ಕ್ಷಣದಲ್ಲೇ ಈ ಆಟವನ್ನು ಇಷ್ಟೊಂದು ಗಾಢವಾಗಿ ಪ್ರೀತಿಸುತ್ತೇನೆ ಎಂದು ಊಹಿಸಿರಲಿಲ್ಲ. ಕೆಂಪು ಚೆಂಡಿನ ಕ್ರಿಕೆಟ್ ನನಗೆ ಕೇವಲ ಒಂದು ಮಾದರಿಯಾಗಿರಲಿಲ್ಲ; ಅದು ನನಗೆ ತಾಳ್ಮೆ, ವ್ಯಕ್ತಿತ್ವ, ಸಹಿಷ್ಣುತೆ ಮತ್ತು ಗಂಟೆಗಟ್ಟಲೆ ಮೈದಾನದಲ್ಲಿ ನಿಂತು ಹೋರಾಡುವ ಖುಷಿಯನ್ನು ಕಲಿಸಿಕೊಟ್ಟಿತು. ಭಾರತದ ಟೆಸ್ಟ್ ಕ್ಯಾಪ್ ಧರಿಸುವುದು ನನ್ನ ಕನಸಾಗಿತ್ತು, ಅದು ನನಸಾಗದೇ ಇರಬಹುದು, ಆದರೆ ಈ ಹಾದಿಯ ಬಗ್ಗೆ ನನಗೆ ಅಪಾರ ತೃಪ್ತಿ ಇದೆ” ಎಂದು ಭಾವನಾತ್ಮಕವಾಗಿ ನುಡಿದಿದ್ದಾರೆ.

“ನನ್ನ ಆಟ ಇನ್ನೂ ಮುಗಿದಿಲ್ಲ”

ಪ್ರಥಮ ದರ್ಜೆ ಕ್ರಿಕೆಟ್‌ಗೆ ವಿದಾಯ ಹೇಳಿದರೂ ಅಂತಾರಾಷ್ಟ್ರೀಯ ಸೀಮಿತ ಓವರ್‌‌ಗಳ ಕ್ರಿಕೆಟ್‌ನಿಂದ ಹಿಂದೆ ಸರಿಯುವ ಯಾವುದೇ ಉದ್ದೇಶವಿಲ್ಲ ಎಂಬುದನ್ನು ಚಹಲ್ ದೃಢಪಡಿಸಿದ್ದು, “ನನ್ನ ಆಟ ಇನ್ನೂ ಮುಗಿದಿಲ್ಲ. ದೇಶಕ್ಕಾಗಿ ಆಡುವ ಹಸಿವು ನನ್ನಲ್ಲಿ ಇಂದಿಗೂ ಜೀವಂತವಾಗಿದೆ. ಏಕದಿನ ಮತ್ತು ಟಿ20 ಮಾದರಿಯಲ್ಲಿ ಮತ್ತೆ ಭಾರತ ತಂಡವನ್ನು ಪ್ರತಿನಿಧಿಸಲು ನನ್ನ ಸರ್ವಸ್ವವನ್ನೂ ಧಾರೆಯೆರೆಯುತ್ತೇನೆ,” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಮ್ಮ ವೃತ್ತಿಜೀವನಕ್ಕೆ ಬೆಂಬಲ ನೀಡಿದ ಹರಿಯಾಣ ಕ್ರಿಕೆಟ್ ಸಂಸ್ಥೆ ಹಾಗೂ ಮಾಜಿ ಪದಾಧಿಕಾರಿಗಳಿಗೆ ಅವರು ವಿಶೇಷ ಧನ್ಯವಾದ ಅರ್ಪಿಸಿದ್ದಾರೆ.

#YuzvendraChahal #TeamIndia #FirstClassCricket #CricketNews #RedBallCricket #IndianCricket #UdayakalaNews #BCCI

Related Posts

Leave a Reply

Your email address will not be published. Required fields are marked *