ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಘೋಷಿಸಿದರು.
ವಿಧಾನಸಭೆಯಲ್ಲಿ ನಡೆದ ಬರಗಾಲದ ಚರ್ಚೆಗೆ ಉತ್ತರಿಸಿದ ಸಂದರ್ಭದಲ್ಲಿ ಶಿವಕುಮಾರ್ ಈ ವಿಚಾರ ತಿಳಿಸಿದರು. ಸದನದ ಎಲ್ಲಾ ಸದಸ್ಯರನ್ನು ದಸರಾ ಉತ್ಸವಕ್ಕೆ ಆಹ್ವಾನಿಸಿದರು.
ಈ ಬಾರಿ ಕೊಪ್ಪಳದ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳಿಗೆ ಉದ್ಘಾಟನೆ ಮಾಡಬೇಕು ಎಂದು ಆಹ್ವಾನ ಪತ್ರ ಕಳುಹಿಸಿದ್ದೇನೆ. ಅವರ ಜತೆ ದೂರವಾಣಿ ಮೂಲಕವೂ ಮಾತನಾಡಿದ್ದೇನೆ. ಅವರು ನಮ್ಮ ಆಹ್ವಾನವನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಮುಂದಿನ ತಿಂಗಳು ನಾಡಹಬ್ಬ ದಸರಾ ಬರುತ್ತಿದೆ. ಈ ವರ್ಷದ ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ನಾನು ಆಹ್ವಾನ ನೀಡುತ್ತಿದ್ದೇನೆ. ಎಲ್ಲರೂ ಬರಬೇಕು ಎಂದರು.
ನಾನು ಬೆಳಗಾವಿ, ಕಲಬುರ್ಗಿ, ಚಿತ್ರುದುರ್ಗದಲ್ಲಿ ವಿಭಾಗವಾರು ಸಭೆ ಮಾಡಿದೆ, ವಿವಿಧ ಜಿಲ್ಲೆಗಳಿಗೆ ಹೋಗಿ ಬರ ಅಧ್ಯಯನ ಮಾಡಿದೆ. ಕೆಲವು ಶಾಸಕರು ಹಾಲಿನ ದರಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ನೆರೆಯ ತಮಿಳುನಾಡಿನಲ್ಲಿ 11 ರೂ. ದರ ಏರಿಕೆ ಮಾಡಿದ್ದಾರೆ. ನಮ್ಮ ಗಡಿ ಭಾಗದ ಹಾಲು ತಮಿಳುನಾಡು ಸೇರುತ್ತಿವೆ. ನಮ್ಮ ಮಲೆನಾಡಿನ ಸುರೇಶ್ ಶೆಟ್ಟಿ ಅವರು ಈ ವಿಚಾರ ಪ್ರಸ್ತಾಪಿಸಿದ್ದಾರೆ. ಮೇವಿನ ಕೊರತೆ ಇದೆ. ಕೇಂದ್ರ ಸರ್ಕಾರ ನಮ್ಮ ನರೇಗಾ ಯೋಜನೆ ತೆಗೆದು ವಿಬಿ ಗ್ರಾಮ್ ಜಿ ಯೋಜನೆ ತಂದಿದೆ. ಬರ ಪ್ರದೇಶದಲ್ಲಿ 50 ದಿನ ಹೆಚ್ಚಿನ ಕೂಲಿ ನೀಡಲು ಅವಕಾಶವಿದೆ. ಈ ಹಿಂದೆ ಇದ್ದ 90:10 ಅನುಪಾತವನ್ನು ಈಗ 60:40 ಮಾಡಿದ್ದಾರೆ. ಆದರೂ ನಾವು ಒಪ್ಪಿದ್ದೇವೆ ಎಂದು ಹೇಳಿದರು.
ನಾವು ಜತೆಯಾಗಿ ಹೋಗೋಣ, ಸಂಸದರನ್ನು ಕರೆದುಕೊಳ್ಳೋಣ. ನಿಮ್ಮ ಧ್ವನಿ ಹೊರಬರಲಿ ಎಂಬ ಕಾರಣಕ್ಕೆ ನಾನು ಈ ಅಧಿವೇಶನ ಕರೆದು ಚರ್ಚೆ ಮಾಡುತ್ತಿದ್ದೇವೆ. ಈ ಅಧಿವೇಶನವನ್ನು ಉತ್ತಮವಾಗಿ ನಡೆಸಿಕೊಟ್ಟಿರುವುದಕ್ಕೆ ಧನ್ಯವಾದಗಳು. ಬರಗಾಲದಲ್ಲಿ ರಾಜಕಾರಣದ ಗುದ್ದಾಟ ಇಷ್ಟವಿಲ್ಲ. ನಾನು ತಿದ್ದಿಕೊಳ್ಳುವ ವಿಚಾರ ಇದ್ದರೆ ತಿದ್ದುಕೊಳ್ಳಲು ಸಿದ್ಧವಿದ್ದೇನೆ ಎಂದರು.
ನಮ್ಮ ಸರ್ಕಾರ ರಚನೆಯಾದ ಬಳಿಕ ಎಲ್ಲಾ ಮಂತ್ರಿಗಳಿಗೆ ಜಿಲ್ಲೆಗಳಿಗೆ ಹೋಗಿ ಬರ ಪರಿಶೀಲಿಸಿ ವರದಿ ನೀಡಿ ಎಂದು ಸೂಚಿಸಿದೆ. ಅವರು ಮೂರು ದಿನ ಚರ್ಚೆ ಮಾಡಿ ವರದಿ ಕೊಟ್ಟರು. ಅಧಿವೇಶನ ಕರೆದಾಗ ಇವರು ಬರಲಿಲ್ಲ. ಈ ರೋಷಾವೇಶ ಆಗ ಬಳಸಬಹುದಿತ್ತು. ಇವರಿಗೆ ರೈತರು, ಜನರ ಬಗ್ಗೆ ಕಾಳಜಿ ಇಲ್ಲ. ಕೇವಲ ರಾಜಕೀಯ ಮಾತ್ರ ಮುಖ್ಯ. ಅವರ ರಾಜಕಾರಣ ಅವರು ಮಾಡಲಿ. ನನಗೆ ಈ ಸ್ಥಾನದಲ್ಲಿ ಕೂತು ಸಂಘರ್ಷ ಮಾಡುವುದಕ್ಕಿಂತ ಪರಸ್ಪರ ಸಹಕಾರದಲ್ಲಿ ಸಾಗಲು ಬಯಸುತ್ತೇನೆ. ನಾವು ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಸಿಎಂ ಹೇಳಿದರು.


