Wednesday, September 23, 2026
Menu

ಮುಸ್ಲಿಂ ವ್ಯಕ್ತಿಯ ಮದುವೆಯಾಗಿದ್ದ ಮಹಿಳೆ: ತಂದೆಯ ಗೃಹ ಬಂಧನದಿಂದ ಕೋರ್ಟ್‌ ಮುಕ್ತಿ

ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದ ಮಗಳನ್ನು ಗೃಹಬಂಧನದಲ್ಲಿ ಇರಿಸಿದ್ದ ತಂದೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಅಲಹಾಬಾದ್‌ ಹೈಕೋರ್ಟ್‌, ಮಗಳನ್ನು ತಂದೆಯ ವಶದಿಂದ ಬಿಡುಗಡೆಗೊಳಿಸಿ ಪತಿಯೊಂದಿಗೆ ವಾಸಿಸಲು ಅನುಮತಿಸಿದೆ.

ಗಾಜಿಯಾಬಾದ್‌ನ 26 ವರ್ಷದ ಮಹಿಳೆಯನ್ನು ತಂದೆಯ ವಶದಿಂದ ಹೈಕೋರ್ಟ್ ಮುಕ್ತಗೊಳಿಸಿದೆ. ಮಹಿಳೆ ವಯಸ್ಕಳಾಗಿದ್ದು ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಭೂತ ಹಕ್ಕನ್ನು ಹೊಂದಿದ್ದಾಳೆ ಎಂದು ಕೋರ್ಟ್‌ ಹೇಳಿದೆ. ಸೋನಿಕಾ ಚೌಹಾಣ್ ಎಂಬ ಮಹಿಳೆಯು ತಾನು ಅಕ್ಬರ್‌ ಖಾನ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದು, ತಂದೆ ಈ ಮದುವೆ ವಿರೋಧಿಸಿ ತನ್ನನ್ನು ಗೃಹ ಬಂಧನದಲ್ಲಿರಿಸಿದ್ದಾರೆ ಎಂದು ಆರೋಪಿಸಿದ್ದರು.

ಕೋರ್ಟ್‌ ವಿಚಾರಣೆಯ ವೇಳೆ, ತಾನು ಸ್ವಯಂಪ್ರೇರಣೆಯಿಂದ ಖಾನ್ ಅವರನ್ನು ಮದುವೆಯಾಗಿದ್ದೇನೆ ಮತ್ತು ಅವರೊಂದಿಗೆ ವಾಸಿಸಲು ಬಯಸಿರುವುದಾಗಿ ಸೋನಿಕಾ ತಿಳಿಸಿದ್ದಾರೆ. ಖಾನ್ ಅವರೂ ಸೋನಿಕಾ ಅವರೊಂದಿಗೆ ವಾಸಿಸಲು ಸಮ್ಮತಿಸಿದರು.

ಸೋನಿಕಾ ತಂದೆ ಲಕ್ಷ್ಮಣ್ ಸಿಂಗ್ ಚೌಹಾಣ್, ಅಕ್ಬರ್ ತನ್ನ ಮಗಳಿಗೆ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಮತ್ತು ಆಕೆ ಅವರ ಒತ್ತಡಕ್ಕೆ ಮಣಿದಿದ್ದಾಳೆ ಎಂದು ಹೇಳಿದರು. ಯುವತಿ ತಾನು ಸ್ವಂತ ಇಚ್ಛೆಯಿಂದ ಮದುವೆಯಾಗಿರುವುದಾಗಿ ತಿಳಿಸಿದರು.

ಯುವತಿಗೆ ಸಂಗಾತಿಯನ್ನು ಆಯ್ಕೆ ಮಾಡುವ ಮತ್ತು ಸ್ವಂತ ಇಚ್ಛೆಗೆ ಅನುಗುಣವಾಗಿ ಜೀವನ ನಡೆಸುವ ಮೂಲಭೂತ ಹಕ್ಕು ಇದೆ, ಪೋಷಕರು ಅಥವಾ ಇತರ ಕುಟುಂಬ ಸದಸ್ಯರು ಆಕೆಗೆ ಆಜ್ಞೆ ಮಾಡುವಂತಿಲ್ಲ ಅಥವಾ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಸೋನಿಕಾಗೆ ಸೂಕ್ತ ಭದ್ರತೆ ಖಚಿತಪಡಿಸಿಕೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದೆ. ಅವರ ವೈವಾಹಿಕ ಜೀವನದಲ್ಲಿ ಮಧ್ಯಪ್ರವೇಶಿಸದಂತೆ ಕುಟುಂಬದ ಸದಸ್ಯರಿಗೆ ಎಚ್ಚರಿಸಿದೆ.

Related Posts

Leave a Reply

Your email address will not be published. Required fields are marked *