Wednesday, September 23, 2026
Menu

ಯೋಜನೆಗಳಿಗೆ ಹಣವಿಲ್ಲವೆಂದು ಸರ್ಕಾರಕ್ಕೆ ಆರ್ಥಿಕ ಇಲಾಖೆ ಕಪಾಳಮೋಕ್ಷ: ಆರ್‌ ಅಶೋಕ

ಹೊಸ ಯೋಜನೆಗಳನ್ನು ಘೋಷಣೆ ಮಾಡಲು ಹಣವಿಲ್ಲ ಹಾಗೂ ಹೊಸದಾಗಿ ಸಾಲ ಮಾಡಲು ಅರ್ಹತೆ ಕಳೆದುಕೊಂಡಿದ್ದೇವೆ ಎನ್ನುವ ಮೂಲಕ ಆರ್ಥಿಕ ಇಲಾಖೆಯೇ ಸರ್ಕಾರಕ್ಕೆ ಕಪಾಳ ಮೋಕ್ಷ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಹೇಳಿದರು.

ವಿಧಾನಸಭೆಯಲ್ಲಿ ಬರಗಾಲ ವಿಷಯದ ಚರ್ಚೆಯಲ್ಲಿ ಮಾತನಾಡಿದ ಅವರು, ಆರ್ಥಿಕ ಸಂಕಷ್ಟದ ಬಗ್ಗೆ ಆರ್ಥಿಕ ಇಲಾಖೆ ಬರೆದ ಪತ್ರದ ದಾಖಲೆಯನ್ನು ಮುಂದಿಟ್ಟರು.  ರಾಜ್ಯದಲ್ಲಿ ಬರಗಾಲ ಬಂದು ರೈತರು ಗುಳೆ ಹೋಗುತ್ತಿದ್ದಾರೆ. ಮತ್ತೊಂದೆಡೆ ಸರ್ಕಾರದ ಖಜಾನೆ ಖಾಲಿಯಾಗಿ ಆರ್ಥಿಕ ಬರ ಉಂಟಾಗಿದೆ.  ಸೆಪ್ಟೆಂಬರ್‌ 17 ರಂದು ಆರ್ಥಿಕ ಇಲಾಖೆಯ ಪತ್ರದಲ್ಲಿ 1000 ಕೋಟಿ ರೂ. ಯೋಜನೆಗಳನ್ನು ಬಜೆಟ್‌ನಲ್ಲಿ ಸೇರಿಸಿಲ್ಲ ಎಂದು ಹೇಳಿದೆ. ಕಳೆದ ಬಜೆಟ್‌ನಲ್ಲಿ ಶೇ.2.95 ವಿತ್ತೀಯ ಕೊರತೆ ಉಂಟಾಗಿದೆ. ಆದರೆ ಎಫ್‌ಆರ್‌ಪಿಎಂ ಕಾಯ್ದೆಯಲ್ಲಿ ಶೇ.3 ರಷ್ಟು ಮಿತಿ ಇದೆ. ರಾಜಸ್ವದ ಕೊರತೆ 22,952 ಕೋಟಿ ರೂ. ಇದೆ. ಅನುಮತಿಸಲಾದ ಮಿತಿ ಶೂನ್ಯವಾಗಿದೆ. ಜಿಎಸ್‌ಡಿಪಿಗೆ ಹೋಲಿಸಿದರೆ ರಾಜ್ಯದ ಸಂಕುಚಿತ ಬಾಧ್ಯತೆಗಳು ಶೇ.24.94 ಕ್ಕೆ ತಲುಪಿದೆ. ಅದರ ಮಿತಿ ಶೇ.25 ಇದೆ ಎಂದು ವಿವರಿಸಿದರು.

ಹೊಸ ಸಾಲ ಪಡೆಯಲು ಅರ್ಹತೆ ಇಲ್ಲ

ಕರ್ನಾಟಕ ತನ್ನ ಅಗತ್ಯ ಪೂರೈಸಲು ಸಾಲ ಪಡೆಯುವ ಸಾಮರ್ಥ್ಯವನ್ನು ಮಿತಿಯನ್ನು ಬಳಸಿಕೊಂಡಿದೆ ಎಂದು ಆರ್ಥಿಕ ಇಲಾಖೆ ಉಲ್ಲೇಖಿಸಿದೆ. ಇನ್ನು ಮುಂದೆ ಸಾಲ ಮಾಡಬಾರದು, ಅದಕ್ಕೆ ಅವಕಾಶ ನೀಡುವುದಿಲ್ಲ ಎಂದರ್ಥ. 2026-27 ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾದ ಯೋಜನೆಗಳ ಹಿನ್ನೆಲೆಯಲ್ಲಿ, ಇಷ್ಟು ದೊಡ್ಡ ಮೊತ್ತದ ಯೋಜನೆಗಳಿಗೆ ಹಣಕಾಸು ಪಡೆಯಲು ಹೆಚ್ಚಿನ ಸಾಲ ಪಡೆಯಲು ಅವಕಾಶ ಇಲ್ಲ ಎನ್ನಲಾಗಿದೆ.  ನಾವು ಹೊಸ ಸಾಲ ಪಡೆಯಲು ಯೋಗ್ಯತೆ ಕಳೆದುಕೊಂಡಿದ್ದೇವೆ ಎಂದರ್ಥ. ರಾಜ್ಯ ಸರ್ಕಾರದಲ್ಲಿ 2 ಲಕ್ಷ ಕೋಟಿ ರೂ. ಕಾಮಗಾರಿಗಳ ಬಾಕಿ ಬಿಲ್‌ ಇದೆ. ಲೋಕೋಪಯೋಗಿ, ಜಲಸಂಪನ್ಮೂಲ ಸೇರಿದಂತೆ ನಾಲ್ಕು ಇಲಾಖೆಗಳ ಬಾಕಿ ಬಿಲ್‌ 36,136 ಕೋಟಿ ರೂ. ಇದೆ. ಮೊದಲ ಆರು ತಿಂಗಳಲ್ಲಿ 5,000 ಕೋಟಿ ರೂ. ಗೂ ಅಧಿಕ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಬರ ಪರಿಹಾರಕ್ಕೆ, ಕುಡಿಯುವ ನೀರಿಗೆ ಹಣ ಎಲ್ಲಿದೆ, ಹಣದ ಒಂದು ಭಾಗವನ್ನಾದರೂ ಒದಗಿಸಲು ಇತರ ಇಲಾಖೆಗಳಿಗೆ ಮೀಸಲಿಟ್ಟ ಹಣ ಕಡಿತ ಮಾಡಬೇಕಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಅಂದರೆ ದಲಿತರಿಗೆ ಸೇರಿದ ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣ ಪಡೆಯಬೇಕಿದೆ ಎಂದರ್ಥ ಎಂದರು.

ಸಾರಿಗೆ ನಿಗಮ, ನೀರಾವರಿ ನಿಗಮ, ವಿದ್ಯುತ್‌ ಕಂಪನಿಗಳು ಹಣಕಾಸಿನ ತೀವ್ರ ತೊಂದರೆ ಎದುರಿಸುತ್ತಿವೆ. ಸಹಾಯಧನ ಬಾಕಿ ಉಳಿದಿಲ್ಲವೆಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದ್ದಾರೆ. ಆದರೆ ಸಹಾಯಧನವನ್ನು ಇಂಧನ ಇಲಾಖೆಗೆ ನೀಡಬೇಕಿದೆ ಎಂದು ಆರ್ಥಿಕ ಇಲಾಖೆ ಹೇಳಿದೆ. ಹೊಸ ಯೋಜನೆಗಳಿಗೆ ಹಣಕಾಸು ಒದಗಿಸುವುದು ಕಷ್ಟವಾಗಬಹುದು ಎನ್ನಲಾಗಿದೆ. ಸೆಪ್ಟೆಂಬರ್‌ 17 ರಂದು ಈ ಪತ್ರ ಬರೆಯಲಾಗಿದೆ. ಅಂದರೆ ಮುಖ್ಯಮಂತ್ರಿ ಶಿವಕುಮಾರ್‌  ಮಂಗಳೂರಿಗೆ ಹೋಗಿ ಸಚಿವ ಸಂಪುಟ ಸಭೆ ನಡೆಸುವುದಕ್ಕೆ ಮುನ್ನವೇ ಈ ಪತ್ರ ಬರೆಯಲಾಗಿದೆ ಎಂದು ಹೇಳಿದರು.

ಎಸ್‌ಡಿಆರ್‌ಎಫ್‌, ಎನ್‌ಡಿಆರ್‌ಎಫ್‌ ಮೊದಲಾದ ಕಡೆಯಿಂದ ಬರ ಕಾಮಗಾರಿಗೆ ಹಣ ಬರುತ್ತದೆ. ಆದರೆ ಇದಕ್ಕೆ ಮುನ್ನವೇ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂಬುದಕ್ಕೆ ಇದಕ್ಕಿಂತ ಸ್ಪಷ್ಟ ದಾಖಲೆ ಬೇರೆ ಬೇಕಿಲ್ಲ. ಚಾಮರಾಜನಗರ, ಕಲಬುರ್ಗಿ ಮೊದಲಾದ ಕಡೆ ಹೊಸ ಘೋಷಣೆಗಳನ್ನು ಮಾಡಲಾಗಿದೆ. ಆದ್ದರಿಂದ ಸರ್ಕಾರಕ್ಕೆ ಆರ್ಥಿಕ ಇಲಾಖೆ ಕಪಾಳ ಮೋಕ್ಷ ಮಾಡಿದೆ. ದಾಖಲೆ ತಪ್ಪಾಗಿದ್ದರೆ ನನ್ನನ್ನು ಪ್ರಶ್ನೆ ಮಾಡಿ ಎಂದರು.

ಹವಾಮಾನ ಇಲಾಖೆ ಮುಂಗಾರು ಮಳೆ ಕಡಿಮೆ ಎಂದ ಮಾಹಿತಿ ಸರ್ಕಾರಕ್ಕೆ ಏಪ್ರಿಲ್‌ನಲ್ಲೇ ಬಂದಿದೆ. ರಾಜ್ಯ ಸರ್ಕಾರದಿಂದ ಎಷ್ಟು ಸಭೆ ನಡೆಸಲಾಯಿತು, ಮೇ ತಿಂಗಳು, ಜೂನ್‌ ಬಂದರೂ ಏನೂ ಮಾಡಲಿಲ್ಲ. ಎಲ್‌ನಿನೊ ಪರಿಣಾಮ ಇರಲಿದೆ ಎಂದು ಕೇಂದ್ರ ಸರ್ಕಾರದಿಂದ ಸೂಚನೆ ಬಂದರೂ ಅದಕ್ಕಾಗಿ ಕ್ರಮ ವಹಿಸಲೇ ಇಲ್ಲ. ಬರ ಬಗ್ಗೆ ಏಪ್ರಿಲ್‌ನಲ್ಲೇ ಸಚಿವ ಸಂಪುಟಕ್ಕೆ ಟಿಪ್ಪಣಿ ಕಳುಹಿಸಲಾಗಿದೆ. ಬರಗಾಲ ಘೋಷಣೆ ಮಾಡಲು ನಾಲ್ಕು ತಿಂಗಳು ತಡವಾಯಿತು. ಕುಡಿಯುವ ನೀರು, ಮೇವು ಮೊದಲಾದವುಗಳಿಗೆ ಎಷ್ಟು ಹಣ ನೀಡಲಾಗಿದೆ ಎಂದು ತಿಳಿಸಬೇಕು ಹಾಗೂ ತಡ ಮಾಡಿದ್ದು ಏಕೆ ಎಂದು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಸ್ವ ಪಕ್ಷದಿಂದಲೇ ವಿರೋಧ

ಬರದ ಪಟ್ಟಿಗೆ ಗದಗ ಜಿಲ್ಲೆಯನ್ನು ಸೇರಿಸದಿದ್ದರೆ ರಾಜೀನಾಮೆ ನೀಡುವುದಾಗಿ ಹಿರಿಯ ಶಾಸಕ ಎಚ್‌.ಕೆ.ಪಾಟೀಲ್‌ ಎಚ್ಚರಿಕೆ ನೀಡಿದ್ದಾರೆ. ಇವರು ಕಾನೂನು ಸಚಿವರಾಗಿದ್ದರು, ನೀರಾವರಿ ಸಚಿವರಾಗಿದ್ದರು. ಅವರಿಗೆ ಕಾನೂನು ಚೆನ್ನಾಗಿ ಗೊತ್ತಿದ್ದರೂ, ಅವರಿಗೆ ಬುದ್ಧಿವಾದ ಹೇಳಲಾಗಿದೆ. ಅಪ್ಪಾಜಿ ನಾಡಗೌಡರು ಉಪವಾಸ ಸತ್ಯಾಗ್ರಹ ಮಾಡುತ್ತೇನೆಂದು ಹೇಳಿದ್ದಾರೆ. ಕಾಂಗ್ರೆಸ್‌ ಶಾಸಕರೇ ಬೀದಿಗೆ ಬಂದು ಪ್ರತಿಭಟನೆ ಮಾಡುತ್ತಿದ್ದರೂ ಸರ್ಕಾರ ಕ್ರಮ ವಹಿಸಿಲ್ಲ. ಕಾಂಗ್ರೆಸ್‌ನ ಶಾಸಕರೇ ಸರ್ಕಾರ ಸರಿ ಇಲ್ಲ ಎಂದಿದ್ದಾರೆ. ಸ್ವಪಕ್ಷದ ಶಾಸಕರಿಗೆ ಸರ್ಕಾರ ಅಪಮಾನ ಮಾಡಿದೆ ಎಂದು ಅಶೋಕ ಹೇಳಿದರು.

ರಾಜ್ಯದಲ್ಲಿ 37 ಲಕ್ಷ ಬೋರ್‌ವೆಲ್‌ಗಳಿದ್ದು, ಅದರಲ್ಲಿ ಎಷ್ಟು ದುರಸ್ತಿಯಲ್ಲಿದೆ ಎಂದು ಪರೀಕ್ಷಿಸಬೇಕಿತ್ತು. ಕುಡಿಯುವ ನೀರಿಗೆ ಹಣ ಬಿಡುಗಡೆ ಮಾಡಿ ಕ್ರಮ ವಹಿಸಬೇಕಿತ್ತು. ಆದರೆ ಬರಗಾಲದ ಸಮಯದಲ್ಲೇ ಸಚಿವ ಸಂಪುಟ ರಚನೆಯಾಯಿತು. ಸಚಿವ ಸಂಪುಟದಲ್ಲಿ ಯಾರು ಇರಬೇಕು, ಯಾರು ಇರಬಾರದು ಎಂಬ ಬಗ್ಗೆಯೇ ಚರ್ಚೆ ನಡೆಯುತ್ತಿತ್ತು. ಜುಕೈ 2 ರಂದು ನಾನು ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಅದಕ್ಕೆ ಇನ್ನೂ ಉತ್ತರ ಬಂದಿಲ್ಲ. ಇನ್ನು ಜನರಿಗೆ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೆ, ಬರಗಾಲ ಇರುವಾಗ ಮುಖ್ಯಮಂತ್ರಿಗಳು ವೈಮಾನಿಕ ಸಮೀಕ್ಷೆ ಮಾಡಿದ್ದಾರೆ. ಆದರೆ ಹೊಲಗಳಿಗೆ ಹೋಗಿ ಬೆಳೆ ನಷ್ಟವನ್ನು ಪರಿಶೀಲಿಬೇಕಿತ್ತು. ಬರಗಾಲವನ್ನು ಯಾರೂ ಹೆಲಿಕಾಪ್ಟರ್‌ನಲ್ಲಿ ನೋಡುವುದಿಲ್ಲ ಎಂದರು.

ರಾಜ್ಯದಲ್ಲಿ 118.08 ಲಕ್ಷ ಹೆಕ್ಟೇರ್‌ ನೀರಾವರಿ ಹಾಗೂ ಮಳೆಯಾಶ್ರಿತ ಪ್ರದೇಶವಿದೆ. 70% ಜನರು ಕೃಷಿಯನ್ನೇ ನಂಬಿದ್ದಾರೆ. ನಾನು ಕೂಡ ಬರ ಪ್ರವಾಸ ಮಾಡಿದ್ದೆ. ಮೈಸೂರು, ಮಂಡ್ಯ, ಚಿತ್ರದುರ್ಗ, ಬಳ್ಳಾರಿ ಮೊದಲಾದ ಕಡೆ ಭೇಟಿ ಮಾಡಿ ರೈತರ ಜೊತೆ ಚರ್ಚೆ ಮಾಡಿದ್ದೆ. ತಿಪ್ಪೇಸ್ವಾಮಿ ಎಂಬ ರೈತ ಎರಡು ತಿಂಗಳಿಂದ ಜಮೀನಿಗೆ ಭೇಟಿ ನೀಡಿರಲಿಲ್ಲ. ನಾನು ಭೇಟಿ ಮಾಡಿದಾಗ ಕೃಷಿ ಇಲಾಖೆಯ ಅಧಿಕಾರಿಗಳು ಬರಲೇ ಇಲ್ಲ ಎಂದು ರೈತರು ಹೇಳಿದ್ದರು. ಬೀಜ ವಿತರಣೆ ಕೇಂದ್ರಕ್ಕೆ ವಾಪಸ್‌ ಬಂದ ರೈತರು ಬೀಜಗಳನ್ನು ವಾಪಸ್‌ ನೀಡಿ ಹಣ ಪಡೆದಿದ್ದರು. ಆದರೂ ಸರ್ಕಾರಕ್ಕೆ ಏನೂ ಅನ್ನಿಸಲಿಲ್ಲ. ಮತ್ತೊಂದು ಕಡೆ ಬೋರ್‌ವೆಲ್‌ ಚಲಾಯಿಸಲು ವಿದ್ಯುತ್‌ ಇಲ್ಲ ಎಂದು ರೈತರು ಹೇಳಿದರು. ಒಂದು ಟ್ರಾನ್ಸ್‌ಫಾರ್ಮರ್‌ ಬದಲಿಸಲು 3 ಲಕ್ಷ ರೂ. ಬೇಕಾಗುತ್ತದೆ. ಮೊದಲು 25,000 ನೀಡಿದ್ದರೆ ಸಾಕಿತ್ತು ಎಂದು ತಿಳಿಸಿದರು.

ನಾಯಕನಹಟ್ಟಿಯಲ್ಲಿ ದೇವರ ಹೆಸರಲ್ಲಿ  250 ಎತ್ತುಗಳನ್ನು ಬಿಟ್ಟಿದ್ದಾರೆ. ಬರ ಬಂದ ನಂತರ ಅವುಗಳಿಗೆ ಮೇವು ಸಿಕ್ಕಿಲ್ಲ.  ಕಾಡಿಗೆ ಬಿಟ್ಟರೆ ಅವುಗಳು ಬೇಟೆಗಾಗಿ ಹಾಕಿದ ಬಾಂಬ್‌ಗಳಿಗೆ ಬಾಯಿ ಹಾಕಿ ಗಾಯಗೊಂಡಿವೆ. ಸರ್ಕಾರದಿಂದ ಬೆಳೆ ನಷ್ಟಕ್ಕಾಗಿ ವಿಮೆ ಯೋಜನೆ ಬಗ್ಗೆ ಪ್ರಚಾರ ಮಾಡಬೇಕಿತ್ತು. ಸೆಪ್ಟೆಂಬರ್‌ 4 ರವರೆಗೆ 67.32 ಲಕ್ಷ ಹೆಕ್ಟೇರ್‌ ಬಿತ್ತನೆಯಾಗಿದ್ದು, 84.10 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಆಗಬೇಕಿತ್ತು. ಆಗ ಪರ್ಯಾಯವಾಗಿ ಯಾವ ಬೆಳೆಯಬೇಕೆಂದು ತಿಳಿದು ಅದಕ್ಕೆ ಬೀಜ ಪೂರೈಸಬೇಕಿತ್ತು. ಮೋಡ ಬಿತ್ತನೆ ಮಾಡಬಾರದೆಂದು ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟರೂ, ಮೋಡ ಬಿತ್ತನೆ ಮಾಡುವುದಾಗಿ ಹೇಳಲಾಗಿತ್ತು. ಅದಕ್ಕೆ ಹಣ ಹೊಡೆಯಲು 28 ಕೋಟಿ ರೂ. ನೀಡಲಾಗಿದೆ. ಸಚಿವ ಚಲುವರಾಯಸ್ವಾಮಿ ಪತ್ರಿಕಾಗೋಷ್ಠಿ ಮಾಡಿ ಅದರಿಂದ ಏನೂ ಪ್ರಯೋಜನವಿಲ್ಲ ಎಂದಿದ್ದರು. ಆದರೂ ಇದಕ್ಕೆ ಹಣ ನೀಡಲಾಗಿದೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. 2809 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.

ಗುಳೆ ಹೋಗುವವರಿಗೆ ಸೂಕ್ತ ವ್ಯವಸ್ಥೆ ಮಾಡಬೇಕು. ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಬೇಕು. ಬಿಜೆಪಿ ಅವಧಿಯಲ್ಲಿ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಇತ್ತು. ಅದನ್ನು ಕೂಡ ರದ್ದು ಮಾಡಲಾಗಿದೆ ಎಂದು ವಿವರಿಸಿದರು. ಬಿಜೆಪಿ ಅವಧಿಯಲ್ಲಿ ರೈತರಿಗೆ ದುಪ್ಪಟ್ಟು ಪರಿಹಾರ ನೀಡಲಾಗಿತ್ತು. ಮಹಾರಾಷ್ಟ್ರದಲ್ಲಿ 2 ಲಕ್ಷ ರೂ. ವರೆಗೆ ಸಾಲ ಮನ್ನಾ ಮಾಡಲಾಗಿದೆ. ಇಲ್ಲಿ ಕೂಡ  ಪ್ರತಿ ಎಕರೆಗೆ 50,000 ರೂ. ಪರಿಹಾರ ನೀಡಬೇಕು. ಖಾಸಗಿ ಫೈನಾನ್ಸ್‌ಗಳನ್ನು ಈಗಲೇ ನಿಯಂತ್ರಣ ಮಾಡಬೇಕು. ಮೀಟರ್‌ ಬಡ್ಡಿ ವಸೂಲಿ ಮಾಡಿದರೆ ಜೈಲಿಗೆ ಹಾಕುವುದಾಗಿ ಎಚ್ಚರಿಕೆ ನೀಡಬೇಕು. ವಿಬಿ ಜಿ ರಾಮ್‌ಜಿ ಯೋಜನೆಯಡಿ ಉದ್ಯೋಗ ನೀಡಬೇಕು. ಕೊಳೆವಬಾವಿ ಕೊರೆಯಲು ನಿರ್ಬಂಧವಿದ್ದು, ಅದಕ್ಕೆ ವಿನಾಯಿತಿ ನೀಡಬೇಕು. ಮೇವು ಸಂಗ್ರಹ ಮಾಡಲು ಈಗಲೇ ತಯಾರಿ ಮಾಡಬೇಕು ಹಾಗೂ ಅದನ್ನು ರೈತರಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು. ಪ್ರತಿ ಹಳ್ಳಿಗಳಲ್ಲಿ ಗೋಶಾಲೆ ಆರಂಭಿಸಿ ಹಣ ನೀಡಬೇಕು. ಕೆರೆಗಳ ಹೂಳು ಕೂಡ ತೆಗೆಯಬೇಕು. 5,000 ಕೋಟಿ ಪ್ರಾಕೃತಿಕ ವಿಕೋಪ ನಿಧಿ ಆರಂಭಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಅದನ್ನು ಕೂಡ ಈಗ ಮಾಡಬೇಕು ಎಂದು ಆಗ್ರಹಿಸಿದರು.

Related Posts

Leave a Reply

Your email address will not be published. Required fields are marked *