ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಕೈದಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ದಾಖಲಿಸಿದ ಬಳಿಕ ಬೆದರಿಕೆ ಕರೆಗಳು ಬಂದಿರುವುದಾಗಿ ಪ್ರಮುಖ ಸಾಕ್ಷಿಯೊಬ್ಬರು ವಿಚಾರಣೆ ವೇಳೆ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ತನ್ನ ಮತ್ತು ತನ್ನ ಮಗನ ಸುರಕ್ಷತೆ ಬಗ್ಗೆ ಆತಂಕ ಹೊಂದಿರುವುದಾಗಿ ತಿಳಿಸಿದ್ದಾರೆ. ಹೊಳೆನರಸೀಪುರದ 43 ವರ್ಷದ ಸಮಾಜ ಸೇವಕಿ ಜುಲೈ 6, 2026ರಂದು ಪ್ರಾಸಿಕ್ಯೂಷನ್ ಸಾಕ್ಷಿ-4 ಆಗಿ ನ್ಯಾಯಾಲಯದಲ್ಲಿ ಸಾಕ್ಷ್ಯ ದಾಖಲಿಸಿದ್ದರು. ಸಾಕ್ಷಿಯು ಬೆದರಿಕೆ ಬಂದಿರುವದಾಗಿ ತಿಳಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಸಿಐಡಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ತನಿಖೆ ನಡೆಸಿ ಮುಂದಿನ ವಿಚಾರಣೆ ದಿನ ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ.
ನನಗೆ ಅಥವಾ ನನ್ನ ಮಗನಿಗೆ ಏನಾದರೂ ಆದರೆ ಅದಕ್ಕೆ ಆರೋಪಿಗಳೇ ಹೊಣೆ ಎಂದು ಸಾಕ್ಷಿದಾರರು ನ್ಯಾಯಾಲಯದಲ್ಲಿ ಹೇಳಿದ್ದಾರೆ. ಕಾರಾಗೃಹದ ಹೈ ಸೆಕ್ಯುರಿಟಿ ಬ್ಯಾರಕ್‌ನಲ್ಲಿ ಪ್ರಜ್ವಲ್ ರೇವಣ್ಣ ಇದ್ದ ಸೆಲ್‌ನಿಂದ ಮೊಬೈಲ್ ಫೋನ್, ಚಾರ್ಜರ್, ಪೆನ್ ಡ್ರೈವ್ ಹಾಗೂ ಪ್ಯಾಡ್ ಸಿಸಿಬಿ ಅಧಿಕಾರಿಗಳು ವಶಪಡಿಸಿಕೊಂಡ ಬಳಿಕ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ನಂತರ ಪ್ರಜ್ವಲ್‌ನನ್ನು ಹಲವು ಕೈದಿಗಳಿರುವ ಸೆಲ್‌ಗೆ ಸ್ಥಳಾಂತರಿಸಲಾಗಿದೆ. ಈಗ ಸಾಕ್ಷಿಗೆ ಬೆಂಬಲಿಗರು ಬೆದರಿಕೆ ಒಡ್ಡಿರುವುದು ಕೂಡ ಪ್ರಜ್ವಲ್‌ಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.
2019ರಲ್ಲಿ ಸಂಸದರ ಕೋಟಾದಲ್ಲಿ ಮಗನಿಗೆ ಕೇಂದ್ರೀಯ ವಿದ್ಯಾಲಯದಲ್ಲಿ ಸೀಟು ಕೊಡಿಸುವಂತೆ ಮಹಿಳೆ ಪ್ರಜ್ವಲ್ ರೇವಣ್ಣ ಅವರನ್ನು ಸಂಪರ್ಕಿಸಿದ್ದರು. ಮಹಿಳೆಯ ಮೊಬೈಲ್ ನಂಬರ್ ಪಡೆದ ಆತ 2019 ಮತ್ತು 2021ರ ನಡುವೆ ಕರೆ ಮಾಡಿ ವಿವಸ್ತ್ರವಾಗಿ ಮೊಬೈಲ್ ಕ್ಯಾಮರಾದ ಮುಂದೆ ಬರುವಂತೆ ಒತ್ತಾಯಿಸಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ವಿವಸ್ತ್ರವಾಗಿ ಕ್ಯಾಮೆರಾ ಮುಂದೆ ಬಂದಾಗ ಆಕೆಯ ಅನುಮತಿ ಇಲ್ಲದೆ ವೀಡಿಯೊ ರೆಕಾರ್ಡ್ ಮಾಡಿ, ಫೋಟೊ ಸಂಗ್ರಹಿಸಿದ್ದ. ತಾನು ಕರೆ ಮಾಡಿದಾಗ ಫೋನ್ ತೆಗೆಯದಿದ್ದರೆ ಅವುಗಳನ್ನು ಬಹಿರಂಗಗೊಳಿಸುವುದಾಗಿ ಬೆದರಿಸಿದ್ದ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದರು.
ಈ ಆರೋಪದಡಿ ಐಪಿಸಿ ಸೆಕ್ಷನ್‌ಗಳಾದ 354ಎ (ಲೈಂಗಿಕ ಕಿರುಕುಳ), 354ಬಿ (ವಿವಸ್ತ್ರಗೊಳಿಸಲು ಬೆದರಿಕೆ), 354ಡಿ (ಹಿಂಬಾಲಿಸುವುದು) ಮತ್ತು 506 (ಕ್ರಿಮಿನಲ್ ಬೆದರಿಕೆ) ಜೊತೆಗೆ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ಗಳಾದ 66ಇ ಮತ್ತು 67 ಅಡಿ ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಪ್ರಜ್ವಲ್ ವಿರುದ್ಧ ಮೂರು ಅತ್ಯಾಚಾರ ಮತ್ತು ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣ ಸೇರಿ ಒಟ್ಟು ನಾಲ್ಕು ಪ್ರಕರಣ ದಾಖಲಾಗಿದ್ದು, ಒಂದರ ವಿಚಾರಣೆ ಪೂರ್ಣಗೊಂಡು ಶಿಕ್ಷೆಯಾಗಿದೆ.


