ರಾಜ್ಯದಲ್ಲಿ ಕಳೆದ ೩೦-೪೦ ವರ್ಷಗಳಿಂದ ಅನಧಿಕೃತ ಬಡಾವಣೆಗಳಲ್ಲಿ ಮನೆ, ನಿವೇಶನ ಹೊಂದಿರುವವರಿಗೆ ಎ ಖಾತೆ ನೀಡಲು ಸರ್ಕಾರ ಮುಂದಾಗಿದೆ. ಬಿ ಖಾತೆ ಕಾರಣ ಸಂಕಷ್ಟದಲ್ಲಿದ್ದ ಲಕ್ಷಾಂತರ ಕುಟುಂಬಗಳಿಗೆ ಅನುಕೂಲ ಕಲ್ಪಿಸಲು ರಾಜ್ಯ ಸರ್ಕಾರ ಹೊಸ ಕಾಯ್ದೆ ಅಂಗೀಕರಿಸಿದೆ. ಅನಧಿಕೃತ ಬಡಾವಣೆಗಳಲ್ಲಿನ ಆಸ್ತಿಗಳಿಗೆ ಸಂಪೂರ್ಣ ಮಾಲೀಕತ್ವದ ಹಕ್ಕು ಕಲ್ಪಿಸಿ, ಎ ಖಾತೆ ನೀಡುವ ಕರ್ನಾಟಕ ನಗರಪಾಲಿಕೆಗಳ (ತಿದ್ದುಪಡಿ) ವಿಧೇಯಕ-2026 ಅನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ.
ವಿಧೇಯಕದ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ವಿವರಣೆ ನೀಡಿದ್ದು, ರಾಜ್ಯದಲ್ಲಿ ಪ್ರತಿಯೊಬ್ಬ ಆಸ್ತಿ ಮಾಲೀಕನಿಗೂ ಸಂಪೂರ್ಣ ಆಸ್ತಿ ಭದ್ರತೆ ನೀಡುವುದು ಸರ್ಕಾರದ ಸಖಲ್ಪ, ಅದೇ ಭೂ ಗ್ಯಾರಂಟಿ. ಅನಧಿಕೃತ ಬಡಾವಣೆಗಳ ಮೂಲಭೂತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಗರ ಪಾಲಿಕೆಗಳ ಕಾಯ್ದೆಯ ಸೆಕ್ಷನ್ 284ಕ್ಕೆ ತಿದ್ದುಪಡಿ ತರಲಾಗುತ್ತಿದೆ ಎಂದು ಹೇಳಿದ್ದಾರೆ.
ಅನಧಿಕೃತ ಬಡಾವಣೆಗಳನ್ನು ನಿರ್ಮಿಸುವಾಗ ಬಿಡಲಾಗಿರುವ ರಸ್ತೆಗಳು ಮೂಲ ಜಮೀನು ಮಾಲೀಕರ ಹೆಸರಿನಲ್ಲೇ ಇವೆ. ಹೊಸ ತಿದ್ದುಪಡಿಯ ಪ್ರಕಾರ, ಈ ರಸ್ತೆಗಳನ್ನು ಸ್ಥಳೀಯ ನಗರಪಾಲಿಕೆ ಅಥವಾ ಮುನ್ಸಿಪಾಲಿಟಿ ದಾಖಲೆಗಳಲ್ಲಿ ‘ಸಾರ್ವಜನಿಕ ರಸ್ತೆ’ ಎಂದು ಅಧಿಕೃತವಾಗಿ ಘೋಷಿಸಲು ಅವಕಾಶ ಸಿಗಲಿದೆ. ರಸ್ತೆಗಳು ಅಧಿಕೃತಗೊಳ್ಳುತ್ತಿದ್ದಂತೆ ಆ ಬಡಾವಣೆಗಳಲ್ಲಿರುವ ನಿವೇಶನ ಮತ್ತು ಮನೆಗಳಿಗೆ ನಿಯಮಾನುಸಾರ ಎ ಖಾತೆ ನೀಡಲಾಗುವುದು.
ಎ ಖಾತೆಯಾದರೆ ಆಸ್ತಿ ಮಾಲೀಕರಿಗೆ ಬ್ಯಾಂಕುಗಳಿಂದ ಸುಲಭವಾಗಿ ಗೃಹ/ಆಸ್ತಿ ಸಾಲ ಸಿಗಲಿದೆ. ಕಟ್ಟಡ ನಕ್ಷೆ ಮಂಜೂರಾತಿ ಮತ್ತು ವಾಸಯೋಗ್ಯ ಪ್ರಮಾಣಪತ್ರ ಪಡೆಯಲು ತೊಡಕುಗಳು ಇರುವುದಿಲ್ಲ. ಭವಿಷ್ಯದಲ್ಲಿ ಯಾವುದೇ ಹೊಸ ಅನಧಿಕೃತ ಬಡಾವಣೆಗಳು ತಲೆಎತ್ತದಂತೆ ಸರ್ಕಾರ ಸಂಪೂರ್ಣ ತಡೆ ಹಾಕಿದೆ.
ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿರುವ ವೈವಿಧ್ಯಮಯ ಪ್ರವಾಸೋದ್ಯಮ ಸಾಮರ್ಥ್ಯವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ರೂಪಿಸಲಾಗುತ್ತಿರುವ ಕರಾವಳಿ–ಮಲೆನಾಡು ಪ್ರವಾಸೋದ್ಯಮ ನೀತಿಯ ಕರಡು ಸೆಪ್ಟೆಂಬರ್ 7ರೊಳಗೆ ಸಿದ್ಧಪಡಿಸಲಾಗುವುದು ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಕರಾವಳಿ ಮತ್ತು ಮಲೆನಾಡು ಪ್ರದೇಶಗಳು ಕಡಲತೀರ, ಧಾರ್ಮಿಕ ಹಾಗೂ ಸಾಂಸ್ಕೃತಿಕ ತಾಣಗಳು, ಪ್ರಕೃತಿ ಪ್ರವಾಸೋದ್ಯಮ ಸೇರಿದಂತೆ ವೈವಿಧ್ಯಮಯ ಪ್ರವಾಸೋದ್ಯಮ ಸಂಪನ್ಮೂಲಗಳನ್ನು ಹೊಂದಿವೆ. ಈ ಸಾಮರ್ಥ್ಯವನ್ನು ಬಳಸಿಕೊಂಡು ಸ್ಥಳೀಯ ಆರ್ಥಿಕತೆ, ಹೂಡಿಕೆ ಹಾಗೂ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ರೀತಿಯಲ್ಲಿ ಸಮಗ್ರ ಪ್ರವಾಸೋದ್ಯಮ ಅಭಿವೃದ್ಧಿಗೆ ನೀತಿ ರೂಪಿಸುವ ಕುರಿತು ಚರ್ಚಿಸಲಾಗಿದೆ ಎಂದರು.


