ಸ್ನೇಹಿತರೇ, ನೀರು ನಮ್ಮನ್ನು ಒಗ್ಗೂಡಿಸಬೇಕು, ವಿಭಜಿಸಬಾರದು. ನೀರಿನ ಹಂಚಿಕೆಯಿಂದ ನೀರಿನ ಸಹಕಾರದತ್ತ ಸಾಗುವ ಸಮಯ ಈಗ ಬಂದಿದೆ. ನಮ್ಮ ಧ್ವನಿಯಲ್ಲಿ ನ್ಯಾಯ ಒಂದು ಭಾಗವಾದರೆ, ನಮ್ಮ ಸಂಪನ್ಮೂಲಗಳಲ್ಲಿ ನ್ಯಾಯಯುತ ಪಾಲು ಇನ್ನೊಂದು ಭಾಗವಾಗಿದೆ. ಪ್ರತಿಯೊಂದು ರಾಜ್ಯಕ್ಕೂ ನೀರಿಗಿಂತ ಮಹತ್ವದ ಸಂಪನ್ಮೂಲ ಮತ್ತೊಂದಿಲ್ಲ. ನಮ್ಮ ನದಿಗಳು ರಾಜಕೀಯ ಗಡಿಗಳನ್ನು ಗುರುತಿಸುವುದಿಲ್ಲ. ಕಾವೇರಿ, ಕೃಷ್ಣಾ, ತುಂಗಭದ್ರಾ, ಪೆನ್ನಾರ್ ಮತ್ತು ಪಾಲಾರ್ ನದಿಗಳು ಇಡೀ ದಕ್ಷಿಣ ಪರ್ಯಾಯ ದ್ವೀಪದ ಜೀವನಾಡಿಗಳಾಗಿವೆ ಎಂದು ಸಿಎಂ ಡಿಕೆ ಶಿವಕುಮಾರ್ ಕರೆ ನೀಡಿದರು.
ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದ 31ನೇ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಶಿವಕುಮಾರ್ ಮಾತನಾಡಿದರು. ನೀರಿಗೆ ಸಂಬಂಧಿಸಿದಂತೆ ಸಹಕಾರ ಹೇಗಿರಬೇಕು ಎಂಬುದನ್ನು ಕರ್ನಾಟಕ ತೋರಿಸಿಕೊಟ್ಟಿದೆ. ಜೂನ್ 25ರಂದು ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ.ಆರ್. ಪಾಟೀಲ್ ಅವರ ನಾಯಕತ್ವಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತಾ, ನಾವು ಜಂಟಿ ಸಾರ್ವಜನಿಕ ಸಭೆಯನ್ನು ನಡೆಸಿದೆವು. ಇದು ಅಂತಾರಾಜ್ಯ ಜಲ ಸಂಬಂಧಗಳ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು ಹಾಗೂ ರೇವಂತ್ ರೆಡ್ಡಿ ನನ್ನೊಂದಿಗೆ ಆ ಸಭೆಯಲ್ಲಿ ಭಾಗವಹಿಸಿದ್ದರು. ನಾವು ಸ್ಪರ್ಧಿಗಳಾಗಿ ಅಲ್ಲ, ಪಾಲುದಾರರಾಗಿ ಕುಳಿತು ಚರ್ಚೆ ನಡೆಸಿದೆವು. ಇದೇ ಕರ್ನಾಟಕದ ಮಾದರಿ ಎಂದು ಹೇಳಿದರು.
ಪ್ರತಿಯೊಂದು ನದಿಪಾತ್ರದ ರಾಜ್ಯಕ್ಕೂ ತನ್ನದೇ ಆದ ನ್ಯಾಯಸಮ್ಮತ ಅಗತ್ಯಗಳಿವೆ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ನಮ್ಮ ನಿಲುವು ಮೂರು ತತ್ತ್ವಗಳ ಮೇಲೆ ಆಧಾರಿತವಾಗಿದೆ. ಸಮಾನತೆ. ಪಾರದರ್ಶಕತೆ. ಸಹಕಾರ. ಆದರೆ ಸಹಕಾರವು ಎರಡೂ ದಿಕ್ಕಿನಲ್ಲೂ ಇರಬೇಕು. ಕರ್ನಾಟಕವು ಸದಾ ತನ್ನ ನೆರೆ ರಾಜ್ಯಗಳ ಹಕ್ಕುಗಳನ್ನು ಗೌರವಿಸಿದೆ. ಅದೇ ರೀತಿ ನಮ್ಮ ಹಕ್ಕುಗಳನ್ನೂ ಗೌರವಿಸಬೇಕೆಂದು ನಾವು ಬಯಸುತ್ತೇವೆ. ನ್ಯಾಯಮಂಡಳಿಗಳ ತೀರ್ಪುಗಳಡಿ ನಮಗೆ ಕಾನೂನುಬದ್ಧವಾಗಿ ದೊರೆಯಬೇಕಾದ ನೀರಿನ ಪಾಲು ಹಾಗೂ ನಮ್ಮ ರೈತರಿಗೆ ನೀರನ್ನು ತಲುಪಿಸುವ ಯೋಜನೆಗಳ ಸಮಯೋಚಿತ ಪೂರ್ಣಗೊಳಿಸುವಿಕೆಯನ್ನು ನಾವು ನಿರೀಕ್ಷಿಸುತ್ತೇವೆ ಎಂದರು.
ಕೃಷ್ಣಾ ನದಿ, ಮೇಲ್ದಂಡೆ ಭದ್ರಾ ಯೋಜನೆ ಹಾಗೂ ನದಿಗಳ ಜೋಡಣೆಯ ಕುರಿತು ಕರ್ನಾಟಕದ ನಿರ್ದಿಷ್ಟ ನಿಲುವನ್ನು ಚರ್ಚೆಯ ಸಂದರ್ಭದಲ್ಲಿ ಈ ಮಂಡಳಿಯ ಮುಂದೆ ಮಂಡಿಸುತ್ತೇನೆ. ಆದರೆ, ನೀರು ನನ್ನ ಮಾತಿನ ಆರಂಭ ಮಾತ್ರ. ನಮ್ಮ ಕಾಳಜಿಗಳು ಅಲ್ಲಿಗೆ ಮುಗಿಯುವುದಿಲ್ಲ. ಆರೋಗ್ಯ ಸೇವೆಗಳ ಹಣಕಾಸು, ಶಿಕ್ಷಣ ಮತ್ತು ಪೌಷ್ಟಿಕಾಂಶ, ಅತ್ಯಂತ ಬಡ ಕುಟುಂಬಗಳಿಗೆ ವಸತಿ, ಕರಾವಳಿ ಸವೆತ ಮತ್ತು ವಿಪತ್ತು ನಿರ್ವಹಣೆಗೆ ನೆರವು, ಗಣಿಗಾರಿಕೆ ಮತ್ತು ಖನಿಜ ಸಂಪತ್ತು ಹೊಂದಿರುವ ರಾಜ್ಯಗಳ ಹಣಕಾಸಿನ ಹಕ್ಕುಗಳು, ಕೇಂದ್ರ ಸಂಸ್ಥೆಗಳಿಗೆ ರಾಜ್ಯಗಳು ನೀಡಿರುವ ಭೂಮಿ, ನ್ಯಾಯ ವಿತರಣೆ ಮತ್ತು ಡಿಜಿಟಲ್ ಮೂಲಸೌಕರ್ಯ, ನಮ್ಮ ಗ್ರಾಮಗಳಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು ಒಳಗೊಳ್ಳುವಿಕೆ, ನಮ್ಮ ರೈತರಿಗೆ ಬೆಂಬಲ ಇಂದಿನ ಕಾರ್ಯಸೂಚಿಯಲ್ಲಿ ಅಧಿಕೃತವಾಗಿ ಸೇರಿಸದಿದ್ದರೂ, ಈ ಮಂಡಳಿಯ ಮುಂದೆ ಪ್ರಸ್ತಾಪಿಸುವಷ್ಟು ಮಹತ್ವವುಳ್ಳ ಇನ್ನೂ ಎರಡು ವಿಷಯಗಳಿವೆ ಎಂದು ನಾನು ಭಾವಿಸುತ್ತೇನೆ ಎಂದು ಸಿಎಂ ಹೇಳಿದರು.
ಇಡೀ ದಕ್ಷಿಣ ಭಾರತದ ಮತ್ತೊಂದು ಪ್ರಮುಖ ವಿಚಾರ ಎಂದರೆ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ. ಯಾವುದೇ ದಕ್ಷಿಣ ರಾಜ್ಯ ತನ್ನ ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳುವುದಿಲ್ಲ ಎಂಬ ಭರವಸೆಯನ್ನು ನಾವು ಸ್ವಾಗತಿಸುತ್ತೇವೆ. ಪ್ರಾತಿನಿಧ್ಯವೆಂದರೆ ಕೇವಲ ಸಂಖ್ಯೆಗಳ ವಿಷಯವಲ್ಲ. ಅದು ನಮ್ಮ ಪ್ರಭಾವ ಮತ್ತು ಧ್ವನಿಯ ವಿಷಯವೂ ಹೌದು. ದಕ್ಷಿಣ ಭಾರತವು ದೇಶದ ಕರೆಯನ್ನು ಸ್ವೀಕರಿಸಿ, ಜನಸಂಖ್ಯೆಯನ್ನು ಶಿಸ್ತುಬದ್ಧವಾಗಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಯಶಸ್ಸೇ ನಮ್ಮ ಧ್ವನಿಯನ್ನು ದುರ್ಬಲಗೊಳಿಸಲು ಕಾರಣವಾಗಬಾರದು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಪಾದಿಸಿದ್ದಾರೆ.
ನಮ್ಮ ಆರ್ಥಿಕ ತೂಕಕ್ಕೆ ತಕ್ಕ ರಾಜಕೀಯ ಧ್ವನಿಯೂ ಇರಬೇಕು ಎಂದು ವಾದಿಸಿದರು. ನಮ್ಮ ಪ್ರಾತಿನಿಧ್ಯದ ಪಾಲನ್ನು ಸಂಖ್ಯಾತ್ಮಕವಾಗಿಯೂ ಅಥವಾ ಅನುಪಾತದಲ್ಲಿಯೂ ಕಡಿಮೆ ಮಾಡಬಾರದು. ನಾನು ಹೇಳುತ್ತಿರುವ ಈ ನಿಲುವನ್ನು ಇಲ್ಲಿ ಉಪಸ್ಥಿತರಿರುವ ಎಲ್ಲ ಮುಖ್ಯಮಂತ್ರಿಗಳು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ. 1971ರ ಜನಸಂಖ್ಯಾ ಆಧಾರವನ್ನು ಗೌರವಿಸಬೇಕು ಮತ್ತು ನಮ್ಮ ಧ್ವನಿಯ ಬಲವನ್ನು ಸಂರಕ್ಷಿಸಬೇಕು ಎಂದು ಒತ್ತಾಯಿಸಿದರು.
ನಮ್ಮ ಮಹಿಳೆಯರಿಗೆ ದೊರೆಯಬೇಕಾದ ನ್ಯಾಯ ಮತ್ತಷ್ಟು ವಿಳಂಬವಾಗಬಾರದು. ಮಹಿಳೆಯರು ತಮ್ಮ ನ್ಯಾಯಯುತ ಪ್ರಾತಿನಿಧ್ಯಕ್ಕಾಗಿ ಬಹಳ ಕಾಲದಿಂದ ಕಾಯುತ್ತಿದ್ದಾರೆ. ಮಹಿಳಾ ಮೀಸಲಾತಿಯು ಮತ್ತೊಂದು ಜನಗಣತಿಯವರೆಗೆ ಕಾಯಬೇಕಾದ ಅಗತ್ಯವಿಲ್ಲ. ಪ್ರಸ್ತುತ ಇರುವ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಂಡು, ಇದೇ ಸ್ಥಾನಗಳ ಸಂಖ್ಯೆಯೊಳಗೆ ಮಹಿಳಾ ಮೀಸಲಾತಿಯನ್ನು ಒದಗಿಸುವಂತೆ ಈ ಮಂಡಳಿಯು ಒಂದು ನಿರ್ಣಯವನ್ನು ಅಂಗೀಕರಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ನಮ್ಮ ಈ ಸಾಮೂಹಿಕ ನಿಲುವಿನ ಹಿಂದೆ ನನ್ನ ಸಹ ಮುಖ್ಯಮಂತ್ರಿಗಳು ಒಗ್ಗಟ್ಟಾಗಿ ನಿಲ್ಲಬೇಕೆಂದು ನಾನು ಕರೆ ನೀಡುತ್ತೇನೆ ಎಂದರು.
ಮೊದಲನೆಯದು ನಮ್ಮ ಖನಿಜ ಸಂಪನ್ಮೂಲಗಳಿಗೆ ಸಂಬಂಧಿಸಿದೆ. Mines & Minerals (Development & Regulation) Act, 2026 ಅನ್ನು ಕೇಂದ್ರ ಸರ್ಕಾರವು ಮರುಪರಿಶೀಲಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಈ ಕಾಯ್ದೆಯು ಪ್ರಮುಖ ಖನಿಜಗಳ ಮೇಲೆ ತೆರಿಗೆ ವಿಧಿಸುವ ರಾಜ್ಯಗಳ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಈ ಹಕ್ಕನ್ನು ಸುಪ್ರೀಂ ಕೋರ್ಟ್ ಒಂಬತ್ತು ನ್ಯಾಯಮೂರ್ತಿಗಳ ಪೀಠವು ರಾಜ್ಯಗಳಿಗೆ ನೀಡಿದೆ. ಎರಡನೆಯದು ಹೆಚ್ಚುತ್ತಿರುವ ಮಾದಕ ವಸ್ತುಗಳ ಕಳ್ಳಸಾಗಣೆಯ ಸವಾಲು. ಮಾದಕ ವಸ್ತುಗಳ ಕಳ್ಳಸಾಗಣೆಯನ್ನು ತಡೆಯಲು ನಮಗೆ ಬಲಿಷ್ಠ ಕಾನೂನುಗಳು, ಬಲಿಷ್ಠ ಜಾರಿ ವ್ಯವಸ್ಥೆ ಮತ್ತು ಕಳ್ಳಸಾಗಣೆದಾರರ ವಿರುದ್ಧ ಅತ್ಯಂತ ಕಠಿಣ ಕ್ರಮಗಳ ಅಗತ್ಯವಿದೆ ಎಂದು ವಿವರಿಸಿದರು.
ಈ ಕಾನೂನು ಚೌಕಟ್ಟನ್ನು ಬಲಪಡಿಸಿ, ಈ ಅಕ್ರಮ ವ್ಯವಹಾರದಿಂದ ಲಾಭ ಪಡೆಯುವವರ ವಿರುದ್ಧ ತ್ವರಿತ ಮತ್ತು ಕಠಿಣ ಕಾನೂನು ಕ್ರಮ ಕೈಗೊಳ್ಳಲು ರಾಜ್ಯಗಳಿಗೆ ಅಗತ್ಯ ಬೆಂಬಲ ನೀಡಬೇಕೆಂದು ನಾನು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ. ಇವು ಪ್ರತ್ಯೇಕ ಬೇಡಿಕೆಗಳಲ್ಲ. ನಮ್ಮ ಜನರಿಗಾಗಿ ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹೇಗೆ ಕಾರ್ಯಗತಗೊಳಿಸಬೇಕು ಎಂಬುದಕ್ಕೆ ಸಂಬಂಧಿಸಿದ ಪ್ರಶ್ನೆಗಳಾಗಿವೆ. ಮುಂದಿನ ಚರ್ಚೆಯ ಸಂದರ್ಭದಲ್ಲಿ ಈ ಪ್ರತಿಯೊಂದು ವಿಷಯದ ಕುರಿತಾದ ನಿರ್ದಿಷ್ಟ ಸಮಸ್ಯೆಗಳು, ಸಂಬಂಧಿತ ಅಂಕಿ-ಅಂಶಗಳು ಹಾಗೂ ಕರ್ನಾಟಕ ಪ್ರಸ್ತಾಪಿಸುವ ಪರಿಹಾರ ಕ್ರಮಗಳನ್ನು ಈ ಮಂಡಳಿಯ ಮುಂದೆ ಮಂಡಿಸುತ್ತೇನೆ ಎಂದು ತಿಳಿಸಿದರು.


