ಕೌಟುಂಬಿಕ ಕಲಹದಿಂದ ಬೇಸತ್ತ ವ್ಯಕ್ತಿಯೊಬ್ಬ ಇಬ್ಬರು ಮಕ್ಕಳನ್ನು ಕಾಲುವೆಗೆ ಎಸೆದಿರುವ ಘಟನೆಯೊಂದು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದಲ್ಲಿ ನಡೆದಿದೆ. ಮಕ್ಕಳಿಗಾಗಿ ಕಾಲುವೆಯಲ್ಲಿ ಶೋಧ ನಡೆಸಲಾಗುತ್ತಿದೆ. ಹೆಂಡತಿ ಜೊತೆ ಜಗಳ ಮಾಡಿಕೊಂಡ ಶಾಂತಪ್ಪ ಬಿರಾದಾರ್ ಎಂಬಾತ ಮೂವರು ಮಕ್ಕಳಲ್ಲಿ ಇಬ್ಬರನ್ನು ಕಾಲುವೆಗೆ ಎಸೆದಿದ್ದಾನೆ.
ಜಗಳವಾಡಿ ಮೂವರು ಮಕ್ಕಳನ್ನು ಬೈಕ್‌ನಲ್ಲಿ ಕೂರಿಸಿಕೊಂಡು ತೆರಳಿದ್ದ ಶಾಂತಪ್ಪ, ಇಬ್ಬರು ಮಕ್ಕಳನ್ನ ಕಾಲುವೆಗೆ ಬಿಸಾಡಿ ಒಬ್ಬ ಮಗಳನ್ನು ವಾಪಸ್ ಕರೆ ತಂದಿದ್ದ. 9 ವರ್ಷದ ಸಾನ್ವಿ ಹಾಗೂ 2 ವರ್ಷದ ಸೃಜನ್ನನ್ನು ಕಾಲುವೆಗೆ ಎಸೆದಿದ್ದಾನೆ ಎನ್ನಲಾಗಿದೆ, ಇಬ್ಬರು ಮಕ್ಕಳೂ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಈವರೆಗೂ ಕಾಣೆಯಾಗಿರುವ ಮಕ್ಕಳ ಸುಳಿವು ಪತ್ತೆಯಾಗಿಲ್ಲ. ಗೋಗಿ ಪೊಲೀಸ್ ಠಾಣೆಯಲ್ಲಿ ಮಕ್ಕಳ ನಾಪತ್ತೆ ಪ್ರಕರಣ ದಾಖಲಾಗಿದ್ದು. ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಕಾಲುವೆಯಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ.


