ಗೋಕಾಕ್ ತಾಲೂಕಿನ ಕೊಣ್ಣೂರ ಪಟ್ಟಣದಲ್ಲಿ ಬೈಕ್‌ಗೆ ಬಸ್ ಡಿಕ್ಕಿ ಹೊಡೆದು ತಂದೆ, ಮಗಳು ಸೇರಿ ಸ್ಥಳದಲ್ಲೇ ಮೂವರು ಅಸು ನೀಗಿದ್ದಾರೆ. ಸೈಫ್ ಮುಲ್ಲಾ(29), ಪುತ್ರಿ ಸಿಜಾ ಮುಲ್ಲಾ(4) ಮತ್ತು ಗೆಳೆಯ ಇಮ್ತಿಯಾಜ್ ಬಡಗಾಂವ (35) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮಗು ಸಿಹಾನ್ ಶಾರುಖ್ ಕುಡಚಿಕರ್ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಗೋಕಾಕ್‌ಗೆ ಕೆಎಸ್ಸಾರ್ಟಿಸಿ ಬಸ್ ಸಂಚರಿಸುತ್ತಿದ್ದಾಗ ಗೋಕಾಕ್ ಫಾಲ್ಸ್ ಪೋರ್ಬಸ್ ಶಾಲೆಯಿಂದ ಕೊಣ್ಣೂರಿಗೆ ಹೊರಟಿದ್ದ ಬೈಕ್‌ಗೆ ಬಸ್ ಡಿಕ್ಕಿ ಹೊಡೆದಿದೆ. ಈ ಬೈಕ್‌ನಲ್ಲಿ ಸೈಫ್ ಮುಲ್ಲಾ, ಮಗಳು ಸಿಜಾ ಹಾಗೂ ಸೈಫ್ ಗೆಳೆಯನ ಮಗ ಸಿಹಾನ್, ಮತ್ತೊಬ್ಬ ಗೆಳೆಯ ಇಮ್ತಿಯಾಜ್ ಪ್ರಯಾಣಿಸುತ್ತಿದ್ದರು.
ಅಪಘಾತ ನಡೆದ ತಕ್ಷಣ ಬಸ್ ಬಿಟ್ಟು ಚಾಲಕ ಓಡಿ ಹೋಗಿದ್ದಾನೆ. ಸ್ಥಳಕ್ಕೆ ಗೋಕಾಕ್ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಲೆ ಬಿಟ್ಟಾಗ ಸೈಫ್ ತಮ್ಮ ಮಗಳನ್ನು ಕರೆದುಕೊಂಡು ಮನೆಗೆ ಹೊರಟಿದ್ದರು. ಜೊತೆಗೆ ಗೆಳೆಯನ ಮಗ ಮತ್ತು ಮತ್ತೊಬ್ಬ ಗೆಳೆಯನನ್ನೂ ಕೂರಿಸಿಕೊಂಡಿದ್ದರು.


