Menu

ಲಾಲ್‌ಬಾಗ್‌ನಲ್ಲಿ ಆಗಸ್ಟ್‌ 17ರವರೆಗೆ ಫಲಪುಷ್ಪ ಪ್ರದರ್ಶನ: ಚಾಲನೆ ನೀಡಿದ ಸಿಎಂ

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಇಂದಿನಿಂದ (ಆ.6) 17ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಧಿಕೃತವಾಗಿ ಉದ್ಘಾಟಿಸಿದರು.

220ನೇ ಫಲಪುಷ್ಪ ಪ್ರದರ್ಶನ ಇದಾಗಿದ್ದು, ಸಾವಿರ ವರ್ಷಗಳ ಗಂಗ ಸಾಮ್ರಾಜ್ಯದ ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆಯನ್ನು ಪುಷ್ಪಗಳ ಕಲಾಕೃತಿ ಮೂಲಕ ಅನಾವರಣಗೊಳಿಸಲಾಗುತ್ತಿದೆ. ಲಾಲ್‌ಬಾಗ್‌ನ
ಗಾಜಿನ ಮನೆಯಲ್ಲಿ ಬಣ್ಣ ಬಣ್ಣದ ಹೂಗಳಿಂದ ನಿರ್ಮಾಣಗೊಂಡಿರುವ ಕಲಾಕೃತಿ ವೀಕ್ಷಕರ ಕಣ್ಮನ ಸೆಳೆಯುವಂತಿದೆ.

ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿ ಗಣೇಶನ ಮಾದರಿಯಲ್ಲಿ ರೂಪಿಸಲಾದ ಅದ್ಧೂರಿ ಹೂವಿನ ಕಲಾಕೃತಿ ಗಮನ ಸೆಳೆಯಲಿದೆ. ಇದನ್ನು ಆರು ಲಕ್ಷಕ್ಕೂ ಹೆಚ್ಚು ನಾನಾ ಬಗೆಯ ಹೂಗಳಿಂದ ರಚಿಸಲಾಗಿದೆ.
ಗಂಗ ರಾಜವಂಶದ ವೈಭವವನ್ನು ಕೇಂದ್ರ ವಿಷಯವನ್ನಾಗಿ ಮಾಡಿಕೊಂಡು ರೂಪಿಸಲಾದ ಈ ಪ್ರದರ್ಶನದಲ್ಲಿ ಶ್ರವಣಬೆಳಗೊಳದ ಭಗವಾನ್ ಬಾಹುಬಲಿ ಪ್ರತಿಮೆ, ತಲಕಾಡಿನ ಪುರಾತನ ದೇವಾಲಯಗಳ ಪ್ರತಿಕೃತಿಗಳು, ಗಂಗ ದೊರೆಗಳ ಬಲಿಷ್ಠ ಗಜಸೇನೆ ಹಾಗೂ ಯುದ್ಧದ ದೃಶ್ಯಗಳನ್ನು ಹೂವಿನ ಕಲಾಕೃತಿ ರೂಪಿಸಲಾಗಿದೆ.

ಕನ್ನಡ ಸಾಹಿತ್ಯ, ಶಿಕ್ಷಣ, ನೀರಾವರಿ ವ್ಯವಸ್ಥೆ ಮತ್ತು ಶಿಲ್ಪಕಲೆಯ ಅಭಿವೃದ್ಧಿಗೆ ಗಂಗ ರಾಜವಂಶ ನೀಡಿದ ಮಹತ್ವದ ಕೊಡುಗೆಗಳನ್ನು ಬಿಂಬಿಸುವ ವಿಶೇಷ ಪ್ರದರ್ಶನವಿದೆ. ಫಲಪುಷ್ಪ ಪ್ರದರ್ಶನಕ್ಕಾಗಿ ತೋಟಗಾರಿಕೆ ಇಲಾಖೆಯು ಈ ಬಾರಿ 2.75 ಕೋಟಿ ರೂಪಾಯಿ ವೆಚ್ಚ ಮಾಡಿದೆ. ದೇಶದ ನಾಲ್ಕು ವಿವಿಧ ರಾಜ್ಯಗಳಿಂದ 130ಕ್ಕೂ ಹೆಚ್ಚು ಅಪರೂಪದ ಹೂವಿನ ತಳಿಗಳನ್ನು ತರಿಸಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ಆನ್‌ಲೈನ್ ಟಿಕೆಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚುವರಿ ವಾಹನ ನಿಲುಗಡೆ ವ್ಯವಸ್ಥೆ, ಉದ್ಯಾನದ ವಿವಿಧ ಭಾಗಗಳಲ್ಲಿ 136 ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಗಾ, ನಾಲ್ಕೂ ಪ್ರವೇಶ ದ್ವಾರಗಳಲ್ಲಿ ಆಂಬುಲೆನ್ಸ್ ಸೇವೆ ಹಾಗೂ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ಟ್ರಾಫಿಕ್ ದಟ್ಟಣೆ ಮತ್ತು ಜನಸಂದಣಿ ನಿಯಂತ್ರಣಕ್ಕಾಗಿ ವಿಶೇಷ ವ್ಯವಸ್ಥೆಗಳನ್ನೂ ಮಾಡಲಾಗಿದೆ.

Related Posts

Leave a Reply

Your email address will not be published. Required fields are marked *