ಉದಯಕಾಲ ನ್ಯೂಸ್, ಬೆಂಗಳೂರು: ರಾಜಧಾನಿ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದ ಒಂದೇ ಕುಟುಂಬದ ಏಳು ಜನರ ಭೀಕರ ಸಾಮೂಹಿಕ ಕೊಲೆ ಪ್ರಕರಣದ ತನಿಖೆಯಲ್ಲಿ ಒಂದೊಂದೇ ಬೆಚ್ಚಿಬೀಳಿಸುವ ಸತ್ಯಗಳು ಹೊರಬರುತ್ತಿವೆ. ಇಂದುಶೇಖರ್ನ ವಿಕೃತ ಕೃತ್ಯಗಳು ಮತ್ತು ತಂತ್ರಗಾರಿಕೆಯನ್ನು ಕಂಡು ಪೊಲೀಸ್ ಅಧಿಕಾರಿಗಳೇ ದಂಗಾಗಿದ್ದಾರೆ. ಕೊಲೆ ಮಾಡಿದ ಬಳಿಕ ಶವದ ದುರ್ವಾಸನೆ ಹೊರಬಾರದಂತೆ ಹಾಗೂ ಅಕ್ಕಪಾಸಿನವರಿಗೆ ಯಾವುದೇ ಅನುಮಾನ ಬರದಂತೆ ತಡೆಯಲು ಪ್ರತಿಯೊಂದು ಮೃತದೇಹಕ್ಕೂ ಬರಾಬ್ಬರಿ 10 ಲೇಯರ್ಗಳಷ್ಟು ಟೇಪ್ ಸುತ್ತಿ ವಿಕೃತಿ ಮೆರೆದಿರುವುದು ತನಿಖೆಯಿಂದ ಬಯಲಾಗಿದೆ.
ಕ್ರೂರ ಪ್ಲ್ಯಾನ್, ಬಾಲಕ ಪುನೀತ್ ಅಂತ್ಯಕ್ರಿಯೆ
ನಂದಿಬೆಟ್ಟದ ತಪ್ಪಲಿನಲ್ಲಿ ಪತ್ತೆಯಾದ ಬಾಲಕ ಪುನೀತ್ ಸೇರಿದಂತೆ ಇತರೆ ಮೃತದೇಹಗಳಿಗೂ ಆರೋಪಿ ಇದೇ ರೀತಿ ಟೇಪ್ ಸುತ್ತಿ ವಿಕೃತ ಮೆರೆದಿದ್ದ. ಆರೋಪಿ ವಾಸವಿದ್ದ ಮನೆಯ ಕೆಳಭಾಗದಲ್ಲಿ ಅಂಗಡಿಗಳಿದ್ದು, ಆತ ಮೇಲಿನ ಮಹಡಿಯಲ್ಲಿದ್ದ ಕಾರಣ ಹಾಗೂ ರಾತ್ರಿ ವೇಳೆ ಯಾರೂ ಸುಳಿಯದಿದ್ದರಿಂದ ಕೃತ್ಯದ ಸುಳಿವು ಯಾರಿಗೂ ಸಿಕ್ಕಿರಲಿಲ್ಲ. ಮನೆಯಲ್ಲಿದ್ದ ಶವಗಳ ದುರ್ವಾಸನೆ ಹೊರಬಾರದಂತೆ ಎಚ್ಚರ ವಹಿಸಿದ್ದ ಹಂತಕ, ಬಳಿಕ ಮುಂಜಾನೆ ಸಮಯದಲ್ಲಿ ಕಾರಿನಲ್ಲಿ ಶವಗಳನ್ನು ನಿರ್ಜನ ಪ್ರದೇಶಗಳಿಗೆ ಸಾಗಿಸಿ ವಿಲೇವಾರಿ ಮಾಡುತ್ತಿದ್ದ.
ಇನ್ನು ಈ ಭೀಕರ ಹತ್ಯಾಕಾಂಡದಲ್ಲಿ ಬಲಿಯಾದ ಪುಟ್ಟ ಬಾಲಕ ಪುನೀತ್ನ ಮೃತದೇಹದ ಮರಣೋತ್ತರ ಪರೀಕ್ಷೆ ಮುಗಿದ ಬಳಿಕ, ಕುಟುಂಬಸ್ಥರು ಬೆಂಗಳೂರಿನ ರಾಜಾಜಿನಗರದ ಹರಿಶ್ಚಂದ್ರ ಘಾಟ್ನಲ್ಲಿ ನ.6ರ ರಾತ್ರಿಯೇ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ. ಕಂದಮ್ಮನ ಅಗಲಿಕೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಸ್ಥಳದಲ್ಲಿ ಕಣ್ಣೀರಿನ ಮಡಲು ಹರಿದಿದೆ.
ತನಿಖೆ ತೀವ್ರಗೊಳಿಸಿದ ಪೊಲೀಸರು
ಕೇಸ್ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು, ಆರೋಪಿಯ ಹಿಂದಿನ ಅಪರಾಧ ಹಿನ್ನೆಲೆಯ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದ್ದಾರೆ. ಕೊಲೆಗಳ ಬಳಿಕ ಮೃತರ ಮೊಬೈಲ್ಗಳನ್ನು ತನ್ನ ಬಳಿಯೇ ಇಟ್ಟುಕೊಂಡು, ಯಾರಾದರೂ ಕರೆ ಮಾಡಿದರೆ ತಾವೆಲ್ಲರೂ ಪ್ರವಾಸದಲ್ಲಿರುವುದಾಗಿ ನಂಬಿಸಲು ಮೆಸೇಜ್ ಕಳುಹಿಸುತ್ತಿದ್ದ. ಸರಣಿ ಕೊಲೆಗಳ ಈ ಪ್ರಕರಣ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
#RajajinagarMurderCase #InduShekhar #BengaluruCrime #NandiHills #MassMurder #PoliceInvestigation #UdayakalaNews


