ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಟಿಇಟಿ ಅರ್ಹತೆ ಕಡ್ಡಾಯಗೊಳಿಸಿರುವ ಕೇಂದ್ರ ಸರ್ಕಾರ ಈ ಹಿಂದೆ ನೀಡಲಾಗಿದ್ದ ಆಗಸ್ಟ್ 31, 2027 ರ ಗಡುವನ್ನು ಮತ್ತೊಂದು ವರ್ಷ ವಿಸ್ತರಿಸಿ ಆಗಸ್ಟ್ 31, 2028 ರವರೆಗೆ ಕಾಲಾವಕಾಶ ನೀಡಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದನ್ವಯ ಟಿಇಟಿ ಪಾಸಾಗಲು ಆಗಸ್ಟ್ 31, 2028 ರವರೆಗೆ ಗಡುವು ವಿಸ್ತರಿಸಲಾಗಿದೆ. ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆಯಡಿ ಟಿಇಟಿ ಕನಿಷ್ಠ ಅರ್ಹತೆಯಾಗಿದ್ದು, ರಾಜ್ಯ ಸರ್ಕಾರಗಳು ವರ್ಷಕ್ಕೆ ಎರಡು ಬಾರಿ ಪರೀಕ್ಷೆ ನಡೆಸಲು ಸುಪ್ರೀಂ ಕೋರ್ಟ್ ಸೂಚಿಸಿದೆ.
ಸರ್ಕಾರಿ ಶಾಲೆಗಳ ಪ್ರತಿಯೊಬ್ಬ ಶಿಕ್ಷಕರಿಗೂ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಕಡ್ಡಾಯ ಎಂದು ಕೇಂದ್ರ ಸರ್ಕಾರ ಮತ್ತೆ ಸ್ಪಷ್ಟಪಡಿಸಿದೆ. ಉತ್ತೀರ್ಣರಾಗಲು ಸುಪ್ರೀಂ ಕೋರ್ಟ್ ನಿಗದಿಪಡಿಸಿದ್ದ ಅಂತಿಮ ಗಡುವನ್ನು ವಿಸ್ತರಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೋಕಸಭೆಯಲ್ಲಿ ಕಲಾಪದ ವೇಳೆ ಪ್ರಕಟಿಸಿದ್ದಾರೆ.
ಲೋಕಸಭೆ ಸದಸ್ಯರೊಬ್ಬರು ಕೇಳಿದ ಲಿಖಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪರಿಶೀಲನಾ ಅರ್ಜಿಗಳನ್ನು ವಿಲೇವಾರಿ ಮಾಡುವ ಸಮಯದಲ್ಲಿ ಸುಪ್ರೀಂ ಕೋರ್ಟ್ ಶಿಕ್ಷಕರಿಗೆ ಈ ಒಂದು ವರ್ಷದ ಹೆಚ್ಚುವರಿ ಅವಧಿಯನ್ನು ಮಂಜೂರು ಮಾಡಿದೆ ಎಂದು ತಿಳಿಸಿದರು.
ಶಿಕ್ಷಣ ವಿಷಯವು ಕೇಂದ್ರ ಮತ್ತು ರಾಜ್ಯಗಳಿಗೆ ಸಂಬಂಧಿಸಿ ಸಮವರ್ತಿ ಪಟ್ಟಿಯಲ್ಲಿದ್ದು ಶಿಕ್ಷಕರ ನೇಮಕಾತಿ ಹಾಗೂ ಸೇವಾ ನಿಯಮಗಳ ಜವಾಬ್ದಾರಿ ಆಯಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ್ದಾಗಿದೆ. ಶಿಕ್ಷಕರಿಗೆ ಅನುಕೂಲ ಮಾಡಿಕೊಡಲು ರಾಜ್ಯ ಸರ್ಕಾರಗಳು ಪ್ರತಿ ಆರು ತಿಂಗಳಿಗೊಮ್ಮೆ, ವರ್ಷಕ್ಕೆ ಎರಡು ಬಾರಿ ಟಿಇಟಿ ಪರೀಕ್ಷೆಗಳನ್ನು ನಡೆಸಲು ಪ್ರಯತ್ನಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ನಿಯಮಿತ ಪರೀಕ್ಷೆಗಳಿಂದಾಗಿ ಅರ್ಹ ಅಭ್ಯರ್ಥಿಗಳು ನಿಗದಿತ ಸಮಯದೊಳಗೆ ಉತ್ತೀರ್ಣರಾಗಲು ಸಾಧ್ಯವಾಗುತ್ತದೆ. ಈ ಕಡ್ಡಾಯ ಟಿಇಟಿ ನಿಯಮವು 2013 ಕ್ಕಿಂತ ಮೊದಲು ನೇಮಕಗೊಂಡಿರುವ ಕೆಲವು ಶಿಕ್ಷಕರ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಸಚಿವರು ತಿಳಿಸಿದ್ದಾರೆ. ಅಂತಹ ಶಿಕ್ಷಕರ ಸೇವಾ ದಾಖಲೆಗಳು ಮತ್ತು ಸಂಪೂರ್ಣ ವಿವರಗಳು ಆಯಾ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಡಳಿತ ವ್ಯಾಪ್ತಿಯಲ್ಲಿ ಸುರಕ್ಷಿತವಾಗಿವೆ ಎಂದು ಹೇಳಿದ್ದಾರೆ.


