ಗಡಿ ನಿರ್ಣಯ ಮಸೂದೆ ಮತ್ತು ಮಹಿಳಾ ಮೀಸಲಾತಿ ಮಸೂದೆ ಚರ್ಚೆಗಾಗಿ ಮುಂಗಾರು ಅಧಿವೇಶನ ಮುಗಿದ ಬಳಿಕ ಎರಡು ದಿನಗಳ ವಿಶೇಷ ಅಧಿವೇಶನ ಕರೆಯಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ವಿಶೇಷ ಅಧಿವೇಶನ ಆಗಸ್ಟ್ 16 ರಿಂದ 18 ರವರೆಗೆ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಈ ಎರಡು ಮಹತ್ವದ ಮಸೂದೆಗಳನ್ನು ಚರ್ಚೆಗೆ ತಂದ ನಂತರ ಅಂಗೀಕಾರ ಪಡೆಯುವ ಮೊದಲು, ಸಂಸತ್ತಿನಲ್ಲಿ ಉಂಟಾಗಿರುವ ಬಿಕ್ಕಟ್ಟು ನಿವಾರಿಸಲು ಮತ್ತು ಪ್ರತಿಪಕ್ಷದೊಂದಿಗಿನ ಸಮಸ್ಯೆ ಬಗೆಹರಿಸಲು ಕೇಂದ್ರವು ಮುಂದಾಗಿದೆ.
ಸಂಸತ್ತಿನಲ್ಲಿ ನಡೆಯುತ್ತಿರುವ ಗೊಂದಲ ನಿವಾರಣೆ ಪ್ರಯತ್ನವಾಗಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ 50 ನಿಮಿಷ ಸಭೆ ನಡೆಸಿದರು. ಈ ಸಭೆಯಲ್ಲಿ ಪ್ರಸ್ತಾವಿತ ಡಿಲಿಮಿಟೇಶನ್ ಮಸೂದೆ ಮತ್ತು ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ (ಎಫ್‌ಸಿಆರ್‌ಎ) ತಿದ್ದುಪಡಿ ಸೇರಿದಂತೆ ಪ್ರಮುಖ ಶಾಸನಗಳ ಕುರಿತು ರಾಹುಲ್ ಗಾಂಧಿಯ ಅಭಿಪ್ರಾಯಗಳನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಕೇಳಿದರು. ಆ ಮೂಲಕ ಕಾಂಗ್ರೆಸ್ ಪಕ್ಷದ ನಿಲುವನ್ನು ಅರ್ಥಮಾಡಿಕೊಳ್ಳಲು ಕೇಂದ್ರ ಸರ್ಕಾರವು ಪ್ರಯತ್ನಿಸಿದೆ ಎಂದು ಹೇಳಲಾಗುತ್ತಿದೆ.
ಪ್ರತಿಪಕ್ಷಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಒತ್ತಾಯಿಸುತ್ತಿಲ್ಲ, ಪ್ರಶ್ನೆಪತ್ರಿಕೆ ಸೋರಿಕೆ ಪ್ರತಿಭಟನೆ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ಅತಿಯಾದ ಬಲಪ್ರಯೋಗ ನಡೆದಿರುವ ವಿಷಯದ ಬಗ್ಗೆ ಸಂಸತ್ತಿನಲ್ಲಿ ಹೇಳಿಕೆ ನೀಡಬೇಕೆಂದು ಒತ್ತಾಯಿಸುತ್ತಿವೆ ಎಂದು ರಾಹುಲ್ ಗಾಂಧಿ ಕಿರಣ್ ರಿಜಿಜು ಅವರಿಗೆ ತಿಳಿಸಿದ್ದಾರೆ.
ಈ ಬಗ್ಗೆ ಗೃಹ ಸಚಿವರು ಸದನವನ್ನು ಉದ್ದೇಶಿಸಿ ಮಾತನಾಡಲೇಬೇಕಾಗುತ್ತದೆ ಎಂದು ರಾಹುಲ್ ಗಾಂಧಿ ಅವರು ಕಿರಣ್ ರಿಜಿಜು ಅವರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಕೇಂದ್ರ ಸರ್ಕಾರ ಸಮಾಜವಾದಿ ಪಕ್ಷದೊಂದಿಗೆ ಮಾತುಕತೆ ನಡೆಸಲಿದ್ದು, ಸಚಿವರಾದ ಪ್ರಹ್ಲಾದ್ ಜೋಶಿ, ಪಿಯೂಷ್ ಗೋಯಲ್, ಅರ್ಜುನ್ ರಾಮ್ ಮೇಘವಾಲ್ ಮತ್ತು ಎಲ್. ಮುರುಗನ್ ಅವರಿಗೆ ಇತರ ವಿರೋಧ ಪಕ್ಷಗಳ ಜೊತೆ ಮಾತುಕತೆ ನಡೆಸುವ ಜವಾಬ್ದಾರಿ ನೀಡಲಾಗಿದೆ.


