ಇರಾನ್ ಬೆಂಬಲಿತ ನಾಗರಿಕ ಅರೆಸೇನಾಪಡೆಗಳು ಬಳಸುತ್ತಿದ್ದ ಹಲವು ಇರಾಕ್‌ನ ಹಲವು ನೆಲೆಗಳ ಮೇಲೆ ಅಮೆರಿಕ ಮತ್ತು ಸೌದಿ ಅರೇಬಿಯಾ ಸೇನೆಗಳು ಭೀಕರ ವಾಯುದಾಳಿ ನಡೆಸಿರುವುದಾಗಿ ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ.
ಕೆಲವು ದಿನಗಳಿಂದ ಅಮೆರಿಕದ ಪಡೆಗಳು ಹಾಗೂ ಸೌದಿ ಅರೇಬಿಯಾದ ತೈಲ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಇರಾನ್ ನಡೆದ ದಾಳಿಗಳಿಗೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ.
ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಪಡೆಗಳ ಮೇಲೆ ಇರಾನ್ ಉಡಾಯಿಸಿದ್ದ ಕ್ಷಿಪಣಿಗಳನ್ನು ಯಶಸ್ವಿಯಾಗಿ ತಡೆಹಿಡಿಯಲಾಗಿದೆ. ನಮ್ಮ ಸೇನೆ ಸಂಪೂರ್ಣ ಎಚ್ಚರಿಕೆಯಿಂದಿದ್ದು, ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧಗೊಂಡಿವೆ ಎಂದು ತಿಳಿಸಿದೆ.
ಇರಾಕ್‌ನಲ್ಲಿರುವ ಇರಾನ್ ಬೆಂಬಲಿತ ಅರೆಸೇನಾಪಡೆಗಳು ಮೂರು ದಿನಗಳಲ್ಲಿ 30ಕ್ಕೂ ಹೆಚ್ಚು ಡ್ರೋನ್ ದಾಳಿ ನಡೆಸಿದ್ದವು ಎಂದು ಅಮೆರಿಕ ಸೇನೆ ಮಾಹಿತಿ ನೀಡಿದೆ. ಎರಡನೇ ದಿನವೂ ಇರಾಕ್‌ನಿಂದ ಉಡಾಯಿಸಲಾದ ಡ್ರೋನ್‌ಗಳನ್ನು ತನ್ನ ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂದು ಸೌದಿ ಅರೇಬಿಯಾ ತಿಳಿಸಿದೆ. ಡ್ರೋನ್‌ಗಳು ದೇಶದ ಪೂರ್ವ ಭಾಗದಲ್ಲಿರುವ ತೈಲ ಸೌಲಭ್ಯಗಳನ್ನು ಗುರಿಯಾಗಿಸಿ ದಾಳಿಗೆ ಮುಂದಾಗಿದ್ದವು ಎಂದು ಸೌದಿ ರಕ್ಷಣಾ ಸಚಿವಾಲಯ ಹೇಳಿದೆ. ಸೌದಿ ಅರೇಬಿಯಾ ಉದ್ವಿಗ್ನತೆ ಹೆಚ್ಚಿಸಲು ಬಯಸುವುದಿಲ್ಲ. ನಮ್ಮ ದೇಶದ ಮೇಲೆ ಯಾವುದೇ ದಾಳಿ ನಡೆದರೆ ಸೂಕ್ತ ಪ್ರತಿಕ್ರಿಯೆ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಇರಾಕ್ ಪ್ರಧಾನಿ ಅಲಿ ಅಲ್-ಜೈದಿ, ತಮ್ಮ ಭೂಭಾಗವನ್ನು ಸ್ನೇಹ ರಾಷ್ಟ್ರಗಳ ವಿರುದ್ಧ ದಾಳಿ ನಡೆಸಲು ಬಳಸುವುದನ್ನು ತಡೆಯಲು ತನಿಖೆಗೆ ಆದೇಶಿಸಿದ್ದಾರೆ. ಇರಾನ್ ಬೆಂಬಲಿತ ಇಸ್ಲಾಮಿಕ್ ರೆಸಿಸ್ಟೆನ್ಸ್ ಇನ್ ಇರಾಕ್ ಸಂಘಟನೆ, ಸೌದಿ ಮಾಡಿರುವ ಆರೋಪಗಳನ್ನು ತಳ್ಳಿಹಾಕಿದೆ. ದಾಳಿಯನ್ನು ಯೆಮೆನ್‌ನ ಹೌತಿ ಬಂಡುಕೋರರು ನಡೆಸಿರಬಹುದು ಎಂದು ಹೇಳಿದೆ.
ಯೆಮೆನ್‌ನ ಹೌತಿ ಬಂಡುಕೋರರು ಸೌದಿ ಅರೇಬಿಯಾದ ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ ನಡೆಸಿ ವಾಪಸ್ ಕಳಿಸಿದ್ದಾಗಿ ಹೇಳಿಕೊಂಡಿದ್ದಾರೆ. ಸೌದಿ ಹಡಗುಗಳ ವಿರುದ್ಧ ಸಮುದ್ರ ತಡೆ ಘೋಷಿಸಿರುವುದರಿಂದ ಬಾಬ್ ಎಲ್-ಮಂಡೆಬ್ ಜಲಸಂಧಿಯಲ್ಲೂ ಆತಂಕ ಹೆಚ್ಚಿದೆ.
ಹರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣದ ಕುರಿತು ಉದ್ವಿಗ್ನತೆ ಮುಂದುವರಿದಿದೆ. ಅಮೆರಿಕದ ನೌಕಾಪಡೆಯ ಭದ್ರತೆಯಲ್ಲಿ ಕೆಲವು ಹಡಗುಗಳು ಒಮಾನ್ ಕರಾವಳಿಯ ಮಾರ್ಗ ಮೂಲಕ ಸಂಚರಿಸುತ್ತಿವೆ. ಇರಾನ್‌ನ ಕ್ಷಿಪಣಿ ದಾಳಿಗಳನ್ನು ನಿರಂತರವಾಗಿ ತಡೆಹಿಡಿಯುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದ ಕ್ಷಿಪಣಿ ಪ್ರತಿಬಂಧಕಗಳ ಸಂಗ್ರಹ ಕಡಿಮೆಯಾಗುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ. ಆದರೂ ಅಮೆರಿಕದ ಪೆಂಟಗನ್, ಅಧ್ಯಕ್ಷರು ಸೂಚಿಸುವ ಕಾರ್ಯಾಚರಣೆ ನಡೆಸಲು ಅಗತ್ಯವಿರುವ ಎಲ್ಲಾ ಸಾಮರ್ಥ್ಯ ನಮ್ಮ ಬಳಿ ಇದೆ ಎಂದು ಸ್ಪಷ್ಟಪಡಿಸಿದೆ.


