Menu

ರಾಹುಲ್ ಗಾಂಧಿ ವಂಶ ಧ್ವಂಸ ಬೆದರಿಕೆ: ಶಾಸಕ ಯಶ್ ಪಾಲ್ ಸುವರ್ಣ ವಿರುದ್ಧ ಪ್ರಕರಣ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದ್ವೇಷ ಭಾಷಣ ಮಾಡಿರುವ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ಹಾಗೂ ಕಾಂಗ್ರೆಸ್‌ ವಿರುದ್ಧ ಉಡುಪಿ ನಗರದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಯಶ್‌ಪಾಲ್ ಸುವರ್ಣ, ಬಾಬರಿ ಮಸೀದಿಯಂತೆ ರಾಹುಲ್ ಗಾಂಧಿ ವಂಶವನ್ನು ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಿದ್ದರು. ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು.

ನಟ ಪ್ರಕಾಶ್ ರಾಜ್ ಕರಾವಳಿ ಭಾಗದಲ್ಲಿ ನಾಟಕ ಕಾರ್ಯಕ್ರಮಗಳ ಮೂಲಕ ಕಲಾವಿದರನ್ನು ಒಗ್ಗೂಡಿಸಿ ಅವರಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಯಶ್‌ಪಾಲ್ ಸುವರ್ಣ ಆರೋಪಿಸಿದರು.

ಪ್ರಕಾಶ್ ರಾಜ್ ಅವರು ಕಲಾವಿದರಿಗೆ ಮತಾಂತರ ಸೇರಿದಂತೆ ಆಮಿಷಗಳನ್ನು ಒಡ್ಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. “ತುದೆಗ್ ಜಾಸ್ತಿ ಅಂಡಲಾ ಕಡಲಗ್ ಜಾಸ್ತಿ ಆಪುಜಿ (ನದಿಗೆ ಜಾಸ್ತಿ ಆದರೂ ಕಡಲಿಗೆ ಜಾಸ್ತಿ ಆಗುವುದಿಲ್ಲ) ಎಂಬ ಗಾದೆಯ ಅರ್ಥವನ್ನು ತಿಳಿದುಕೊಳ್ಳಬೇಕು. ಕರಾವಳಿಗೆ ಬಂದು ಅಧಿಕ ಪ್ರಸಂಗ ಮಾಡಿದರೆ ಮುಂದಿನ ದಿನಗಳಲ್ಲಿ ನೀವು ಮೀನುಗಳಿಗೆ ಆಹಾರ ಆಗಬಹುದು ಎಂದು ಎಚ್ಚರಿಕೆ ನೀಡಿದರು.

ಇದನ್ನು ಖಂಡಿಸಿ ಉಡುಪಿ ನಗರ ಪೊಲೀಸ್ ಠಾಣೆಗೆ ತೆರಳಿದ ಕಾಂಗ್ರೆಸ್ ಮುಖಂಡರು ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರಿಗೆ ದೂರು ಸಲ್ಲಿಸಿದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ನೀಡಿದ ದೂರಿನಂತೆ ಶಾಸಕ ಯಶ್ ಪಾಲ್ ಸುವರ್ಣ ವಿರುದ್ಧ ಬಿಎನ್‌ಎಸ್‌ನ ಕಲಂ 57, 192, 196(2), 352, 353(2) ಮತ್ತು 351(2) ಅಡಿ ಪ್ರಕರಣ ದಾಖಲಾಗಿದೆ.  ಕಾಂಗ್ರೆಸ್ ಮುಖಂಡರಾದ ಪ್ರಸಾದ್ ರಾಜ್ ಕಾಂಚನ್ ಹಾಗೂ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ವಕೀಲರಾದ ಹಬೀಬ್ ಅಲಿ, ಹರೀಶ್ ಪಾಂಗಾಳ ಮೊದಲಾದವರು ಹಾಜರಿದ್ದರು.

Related Posts

Leave a Reply

Your email address will not be published. Required fields are marked *