ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶದ ಹಿನ್ನೆಲೆಯಲ್ಲಿ ಕಾವೇರಿ ಕೊಳ್ಳದ ರೈತರು ರಸ್ತೆ ತಡೆ, ಅರೆ ಬೆತ್ತಲೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು. ಮೈಸೂರು ಜಿಲ್ಲಾ ರೈತ ಸಂಘದ ಬುಧವಾರ ಮೈಸೂರಿನ ಹಳೆ ಕೋರ್ಟ್ ಮುಂಭಾಗದಲ್ಲಿರುವ ಗಾಂಧಿ ಪುತ್ತಳಿ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದೆ.
ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಪಟ್ಟಣದ ಕುವೆಂಪು ವೃತ್ತದ ಬಳಿಯ ಮೈಸೂರು-ಬೆಂಗ ಳೂರು ಹೆದ್ದಾರಿಯಲ್ಲಿ ಜಮಾವಣೆಗೊಂಡ ಕಾರ್ಯಕರ್ತರು, ಕೈಯಲ್ಲಿ ತಟ್ಟೆ ಹಾಗೂ ಬಟ್ಟಲು ಹಿಡಿದು ಕಾವೇರಿ ನೀರು ನಿಯಂತ್ರಣ ಸಮಿತಿ ವಿರುದ್ಧ ಕಿಡಿ ಕಾರಿದರು.
ವೇದಿಕೆ ಸಂಸ್ಥಾಪಕ ಅಧ್ಯಕ್ಷ ಶಂಕರ್ಬಾಬು ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಸಮರ್ಪಕವಾಗಿ ಮಳೆಯಾಗದೆ ಅಣೆಕಟ್ಟೆ ಸಹ ಭರ್ತಿಯಾಗದೆ ಭರದ ಛಾಯೆ ಆವರಿಸಿದೆ.ಇಂತಹ ಪರಿಸ್ಥಿತಿಯನ್ನ ಕಾವೇರಿ ನೀರು ನಿಯಂತ್ರಣ ಸಮಿತಿ ಅವಲೋಕಿಸದೆ, ಏಕಾಏಕಿ ೧೫ ದಿನಗಳ ಕಾಲ ೪ ಟಿಎಂಸಿ ನೀರು ಹರಿಸುವಂತೆ ಹೇಳಿರುವುದು ಸರಿಯಲ್ಲ. ಸಂಪೂರ್ಣವಾಗಿ ಮಳೆ ಕೈಕೊಟ್ಟ ಹಿನ್ನಲೆಯಲ್ಲಿ ಅಣೆಕಟ್ಟೆ ಭರ್ತಿಯಾಗದೆ ಸ್ಥಳೀಯ ರೈತರ ಬೆಳೆಗಳು ಒಣಗುವ ಜೊತೆಗೆ ಮುಂದೆ ಕುಡಿಯುವ ನೀರಿನ ಪರಿಸ್ಥಿತಿ ಹೇಗೆ ಎಂಬ ಚಿಂತೆಯಲ್ಲಿರುವಾಗಲೇ ಈ ಆದೇಶ ಬಂದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.
ಕೂಡಲೇ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ಈ ಆದೇಶವನ್ನ ಹಿಂಪಡೆದು,ಇಲ್ಲಿನ ವಸ್ತು ಸ್ಥಿತಿಯನ್ನ ಪರಿಶೀಲಿಸಬೇಕು. ಒಂದು ವೇಳೆ ರೈತರಿಗೆ ದ್ರೋಹ ಬಗೆಯುವಂತ ಕೆಲಸಕ್ಕೆ ಮುಂದಾದರೆ ರಾಜ್ಯದಾಧ್ಯಂತ ಉಗ್ರ ಹೋರಾಟ ನಡೆಸಬೇಕಾ ಗುತ್ತದೆ ಎಂದು ಎಚ್ಚರಿಸಿದರು.
ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್ಸಿ)ಯು ತಮಿಳುನಾಡಿಗೆ ನಿತ್ಯ ೩,೫೦೦ ಕ್ಯೂಸೆಕ್ನಂತೆ ೧೫ ದಿನ ಹರಿಸಲು ಆದೇಶಿಸಿರುವುದು ಖಂಡನೀಯ. ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದ್ದು,ಕರುನಾಡಲ್ಲಿ ಬರದ ಭೀತಿ ಆವರಿಸಿದೆ. ಇಂತಹ ಪರಿಸ್ಥಿತಿಯಲ್ಲೂ ಕಾವೇರಿ ನೀರನ್ನು ತಮಿಳು ನಾಡಿಗೆ ಬಿಡುವ ವಿಚಾರ ವಾಗಿ ಕಾವೇರಿ ನೀರು ನಿರ್ವಹಣಾ ಮಂಡಳಿ ನೀರು ಹರಿಸುವಂತೆ ಶಿಫಾರಸು ಮಾಡಿರುವುದು ಖಂಡ ನೀಯ.ತಮಿಳುನಾಡಿನ ಒತ್ತಡದ ಮೇರೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಉನ್ನತ ಮಟ್ಟದ ಸಭೆ ನಡೆಸಿದೆ. ಕಳೆದ ಸಭೆಯಲ್ಲೂ ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಡುವ ಬಗ್ಗೆ ಯಾವುದೇ ಸೂಚನೆ ನೀಡಿರಲಿಲ್ಲ.ಇದಕ್ಕೆ ತಮಿಳುನಾಡು ಅತೃಪ್ತಿ ವ್ಯಕ್ತಪಡಿಸಿತ್ತು.ಇದೀಗ ಸಭೆಯಲ್ಲಿ ತಮಿಳುನಾಡಿಗೆ ನೀರು ಬಿಡಲು ಸೂಚಿಸಿರು ವುದು ಸರಿಯಲ್ಲ.ಇದಕ್ಕೆ ಸರ್ಕಾರ ಸ್ಪಂದಿಸಬಾರದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಆಗ್ರಹಿಸಿದ್ದಾರೆ.
ವಿವಿಧ ಕನ್ನಡ ಮತ್ತು ಜನಪರ ಸಂಘಟನೆಗಳು ಒಣಗಿದ ಕಬ್ಬನ್ನು ಪ್ರದರ್ಶಿ ಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿವೆ. ನಗರದ ಜಯಚಾಮ ರಾಜೇದ್ರ ಒಡೆಯರ್ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ, ಕರುನಾಡ ಸೇವಕರು ಸಂಘಟನೆ ವಿದ್ಯಾರ್ಥಿಗಳು ಜಮಾವಣೆಗೊಂಡು ಸಮಿತಿ ನಿಲುವಿನ ವಿರುದ್ದ ಘೋಷಣೆ ಕೂಗಿ ಒಣಗಿದ ಕಬ್ಬಿನ ಕಂತೆಯನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್. ಸಂದೇಶ್, ಕಾವೇರಿ ವಿಚಾರದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಇದೆ. ಪ್ರಸ್ತುತ ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಹೊತ್ತಿನಲ್ಲಿ ತಮಿಳುನಾಡು ಭಾಗದ ಬೆಳೆಗಳಿಗೆ ಪ್ರತಿನಿತ್ಯ ೧೫೦೦ ಕ್ಯೂಸೆಕ್ ನೀರು ಬಿಡುವಂತೆ ಆದೇಶಿಸಿರುವುದು ರಾಷ್ಟ್ರೀಯ ದುರಂತವಾಗಿದೆ ಎಂದರು.
ಮೈಸೂರು ಜಿಲ್ಲಾ ರೈತ ಸಂಘದ ಬುಧವಾರ ಮೈಸೂರಿನ ಹಳೆ ಕೋರ್ಟ್ ಮುಂಭಾಗದಲ್ಲಿರುವ ಗಾಂಧಿ ಪುತ್ತಳಿ ಮುಂದೆ ರಾಜ್ಯದಲ್ಲಿ ಬರಗಾಲವಿದ್ದರೂ ತಮಿಳುನಾಡಿಗೆ ನೀರನ್ನು ಹರಿಸಲು ಆದೇಶಿಸಿರುವುದನ್ನು ಖಂಡಿಸಿ ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಪ್ರಧಾನ ಕಾರ್ಯದರ್ಶಿ ಪಿ.ಮರಂಕಯ್ಯ ತಿಳಿಸಿದ್ದಾರೆ.


