ಕೇರಳದ ಕೋಝಿಕ್ಕೋಡ್ನಲ್ಲಿ ವ್ಯಕ್ತಿಗೆ ನಿಪಾ ವೈರಸ್ ತಗುಲಿರುವುದು ದೃಢಪಟ್ಟ ಬಳಿಕ ಕೇರಳ- ತಮಿಳುನಾಡು ಗಡಿಯಲ್ಲಿ ಆರೋಗ್ಯಾಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದು, ಕರ್ನಾಟಕದ ಗಡಿಯಲ್ಲೂ ಹೆಚ್ಚಿನ ಅಲರ್ಟ್ ಕೈಗೊಳ್ಳಲಾಗಿದೆ. ಕೇರಳದಿಂದ ಬರುವ ಜನರಿಗೆ ಪರೀಕ್ಷೆ ನಡೆಸಿದ ನಂತರವೇ ತಮಿಳುನಾಡಿಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ.
ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ ಹಾಗೂ ತಮಿಳುನಾಡಿನ ಗಡಿ ಭಾಗಗಳ ಚೆಕ್ಪೋಸ್ಟ್ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದಿಂದ ಬರುವ ಪ್ರಯಾಣಿಕರಿಗೆ ಜ್ವರ, ತಲೆನೋವು ಅಥವಾ ಉಸಿರಾಟದ ತೊಂದರೆಯಂತಹ ಲಕ್ಷಣಗಳು ಇವೆಯೇ ಎಂದು ತಪಾಸಣೆ ನಡೆಸಲಾಗುತ್ತಿದೆ. ತರಕಾರಿ, ಹಣ್ಣುಗಳ ಮೇಲೆ ವಾಹನಗಳ ಮೇಲೂ ನಿಗಾ ಇಡಲಾಗಿದೆ.
ಸುರಕ್ಷಿತ ಮೇಲಂಗಿ ಮತ್ತು ಫೇಸ್ ಮಾಸ್ಕ್ ಧರಿಸಿದ ಆರೋಗ್ಯ ಇಲಾಖೆಯ ಕಾರ್ಯಕರ್ತರು ಕೇರಳ -ತಮಿಳುನಾಡು ಗಡಿಯಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ಕೇರಳದಿಂದ ಬರುವ ವಾಹನಗಳನ್ನು ನಿಲ್ಲಿಸಿ ಪ್ರಯಾಣಿಕರಲ್ಲಿ ಜ್ವರ ಮತ್ತು ನಿಪಾ ವೈರಸ್ ಸೋಂಕಿದೆಯೇ ಎಂದು ಪರೀಕ್ಷಿಸಿದ ಬಳಿಕವೇ ತಮಿಳುನಾಡಿಗೆ ಬರಲು ಅನುಮತಿಸುತ್ತಿದ್ದಾರೆ.
ಕೋಝಿಕ್ಕೋಡ್ನಲ್ಲಿ ನಿಪಾ ವೈರಸ್ ತಗುಲಿರುವ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದ 77 ಜನರನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ವ್ಯಕ್ತಿಯಿಂದ ತೆಗೆದ ಮಾದರಿಗಳನ್ನು ಮಹಾರಾಷ್ಟ್ರದ ಪುಣೆಯಲ್ಲಿರುವ ವೈರಾಲಜಿ ಸಂಸ್ಥೆಗೆ ಕಳುಹಿಸ ಅಲ್ಲಿನ ವರದಿ ಬಂದ ಬಳಿಕ ಸೋಂಕು ತಗುಲಿರುವುದು ದೃಢಪಟ್ಟಿದೆ. ನಿಪಾ ವೈರಸ್ ಸೋಂಕು ಬಾವಲಿಗಳು ಮತ್ತು ಹಂದಿಗಳು ಸೇರಿದಂತೆ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ತೀವ್ರ ಜ್ವರ, ತಲೆನೋವು, ಸ್ನಾಯು ನೋವು, ಗಂಟಲು ನೋವು, ತಲೆತಿರುಗುವಿಕೆ, ವಾಂತಿ, ಅಸ್ವಸ್ಥತೆ, ಉಸಿರಾಟದ ತೊಂದರೆ ನಿಪಾ ವೈರಸ್ ಸೋಂಕಿನ ಲಕ್ಷಣಗಳಾಗಿವೆ.
ಸೋಂಕಿತ ವ್ಯಕ್ತಿಗೆ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ನೀಡಲಾಗುತ್ತಿದೆ. ಇಷ್ಟರ ಮಧ್ಯೆ ಈಗ ಕೇರಳದಲ್ಲಿ ಶಿಗೆಲ್ಲಾ ವೈರಸ್ ಹರಡುತ್ತಿದೆ. ವಯನಾಡ್ ಪ್ರದೇಶದ ಬಾಲಕಿರಿಗೆ ಈ ಸೋಂಕು ತಗುಲಿದೆ, ವಿದ್ಯಾರ್ಥಿನಿ ಸೇರಿ ಆರು ಮಂದಿ ಶಿಗೆಲ್ಲಾ ಬ್ಯಾಕ್ಟೀರಿಯಾ ಸೋಂಕಿಗೆ ಒಳಗಾಗಿದ್ದಾರೆ.


