Menu

ಮನೆಯಲ್ಲಿದ್ದ ಚಿನ್ನವೆಲ್ಲ ಧರಿಸಿ ವೀಡಿಯೊ ಅಪ್ಲೋಡ್‌: ಮನೆಗೆ ನುಗ್ಗಿ ದೋಚಿದ ಕಳ್ಳರು

ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಯೂಟ್ಯೂಬರ್ ರಚನಾ ಗುರ್ಜರ್ ಮನೆಗೆ ಕಳ್ಳರು ನುಗ್ಗಿದ್ದು, 8 ರಿಂದ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದಾರೆ.

ಯೂಟ್ಯೂಬರ್‌ ರಚನಾ ಮನೆಯಲ್ಲಿದ್ದ ಎಲ್ಲ ಒಡವೆಗಳನ್ನು ಧರಿಸಿಕೊಂಡು ವೀಡಿಯೊ ಮಾಡುವುದರ ಜೊತೆಗೆ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಪ್ರದರ್ಶಿಸಿ ಯುಟ್ಯೂಬ್‌ಗೆ ಅಪ್‌ಲೋಡ್‌ ಮಾಡಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿ ಕಳ್ಳರು ದರೋಡೆಗೆ ಪ್ಲಾನ್‌ ರೂಪಿಸಿದ್ದರು. ನರವರ್ ಪೊಲೀಸ್ ಠಾಣಾ ವ್ಯಾಪ್ತಿಯ ಮೋಹಾನಿ ಗ್ರಾಮದಲ್ಲಿರುವ ಆಕೆಯ ಮನೆಗೆ ಬೆಳಗಿನ ಜಾವ ನುಗ್ಗಿದ ಮುಸುಕುಧಾರಿ ಕಳ್ಳರ ಗುಂಪು ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದನ್ನು ದೋಚಿ ಪರಾರಿಯಾಗಿದೆ.

ರಾತ್ರಿ ರಚನಾ ಗುರ್ಜರ್ ಮತ್ತು ಪತಿ ಊದಲ್ ಸಿಂಗ್ ಗುರ್ಜರ್ ಸೇರಿದಂತೆ ಕುಟುಂಬದ ಸದಸ್ಯರು ಗಾಢ ನಿದ್ರೆಯಲ್ಲಿದ್ದಾಗ ಕಳ್ಳರು ಕಾಂಪೌಂಡ್‌ನ ತಂತಿ ಬೇಲಿಯನ್ನು ಕತ್ತರಿಸಿ ಒಳನುಗ್ಗಿದ್ದಾರೆ. ದಂಪತಿ ಮಲಗಿದ್ದ ಕೋಣೆಯ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿದ್ದಾರೆ. ಮನೆಯೊಳಗೆ ಸಿಸಿಟಿವಿ ಕ್ಯಾಮೆರಾಗಳಿರುವುದನ್ನು ಅರಿತಿದ್ದ ಕಳ್ಳರು, ಮುಖಗಳು ಕಾಣದಂತೆ ತಡೆಯಲು ಕ್ಯಾಮರಾವನ್ನು ಕೋಲಿನ ಸಹಾಯದಿಂದ ಮೇಲ್ಮುಖವಾಗಿ ತಿರುಗಿಸಿದ್ದಾರೆ. ನಗದು, ಚಿನ್ನದ ಮಂಗಳಸೂತ್ರ, ಉಂಗುರಗಳು, ಒಡ್ಯಾಣ ಮತ್ತು ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ.

ಬೆಳಗ್ಗೆ 4 ಗಂಟೆಗೆ ರಚನಾ ನೀರು ಕುಡಿಯಲು ಎದ್ದಾಗ ಬಾಗಿಲು ಹೊರಗಿನಿಂದ ಲಾಕ್ ಆಗಿರುವುದು ಗೊತ್ತಾಗಿದೆ. ಸಂಬಂಧಿಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸಂಬಂಧಿಕರು ಮನೆಗೆ ಬಂದು ಬಾಗಿಲು ತೆರೆದು ರಕ್ಷಿಸಿದ್ದಾರೆ.

Related Posts

Leave a Reply

Your email address will not be published. Required fields are marked *