ವಿಜಯಪುರ ಜಿಲ್ಲೆಯ ಸಾಲೋಟಗಿಯಲ್ಲಿ ಲಂಚ ಪಡೆಯುತ್ತಿದ್ದಾಗಲೇ ಇಬ್ಬರು ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅಧಿಕಾರಿಗಳು ಕೆಬಿಜೆಎನ್‌ಎಲ್ ಕೆನಾಲ್‌ನ 3,71,419 ರೂ. ಬಿಲ್ ಪಾವತಿಗಾಗಿ 18 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.
ಕೆಬಿಜೆಎನ್‌ಎಲ್ ಉಪವಿಭಾಗ ನಂಬರ್ ಒಂದರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸೇವುಲಾಲ್ ಚವ್ಹಾಣ 10 ಸಾವಿರ ರೂ.ಗೆ ಹಾಗೂ ಇನ್ನೊಂದು ಉಪವಿಭಾಗದ ಕಿರಿಯ ಅಭಿಯಂತರ ಸಾತಲಿಂಗಪ್ಪ ರೂಡಗಿ 8 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ನಾನಾಸಾಹೇಬ್ ರೂಡಗಿ ದೂರು ನೀಡಿದ್ದರು.
ದೂರು ಆಧರಿಸಿ ಕಾರ್ಯಪ್ರವೃತ್ತರಾದ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಇಬ್ಬರು ಲಂಚಕೋರ ಅಧಿಕಾರಿಗಳನ್ನು ಲಂಚದ ಹಣ ಸಮೇತ ಬಂಧಿಸಿದ್ದಾರೆ. ಸಂಬಂಧ ವಿಜಯಪುರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


