ಎರಡು ಕಾರುಗಳು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟಟ್ಟಿರುವ ದಾರುಣ ಘಟನೆ ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಗ್ರಾಮದ ಬಳಿ ನಡೆದಿದೆ.
ಮೃತಪಟ್ಟವರು ಆಂಧ್ರಪ್ರದೇಶ ಮೂಲದವರು ಎನ್ನಲಾಗುತ್ತಿದೆ. ಈ ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ತುಮಕೂರು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿರಿಯೂರಿನಿಂದ ಹುಳಿಯಾರು ಕಡೆಗೆ ಬರುತ್ತಿದ್ದ ಕಾರಿಗೆ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ.
ಕಾರಿನಲ್ಲಿದ್ದ ವೃದ್ಧ ದಂಪತಿ ಸೇರಿ ಮೂವರು ಸ್ಥಳದಲ್ಲೇ ಅಸು ನೀಗಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರುಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ. ಪೊಲೀಸರು ಮೃತರ ಗುರುತು ಪತ್ತೆ ಮತ್ತು ಅವರ ಕುಟುಂಬವನ್ನು ಸಂಪರ್ಕಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ಅತಿಯಾದ ವೇಗ ಮತ್ತು ಚಾಲಕನ ನಿಯಂತ್ರಣ ತಪ್ಪಿರುವುದೇ ಈ ದುರಂತಕ್ಕೆ ಕಾರಣ ಎಂದು ಶಂಕಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ ಒಂದು ಕಾರಿನ ಚಾಲಕ ಅತಿ ವೇಗವಾಗಿ ಚಾಲನೆ ಮಾಡಿದ್ದರಿಂದ ನಿಯಂತ್ರಣ ಕಳೆದುಕೊಂಡು ಎದುರುಗಡೆಯಿಂದ ಬರುತ್ತಿದ್ದ ಮತ್ತೊಂದು ಕಾರಿಗೆ ನೇರವಾಗಿ ಡಿಕ್ಕಿ ಹೊಡೆದಿದ್ದಾನೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಅಪಘಾತಕ್ಕೆ ತಾಂತ್ರಿಕ ಕಾರಣಗಳಿವೆಯೇ ಅಥವಾ ಓವರ್ ಟೇಕ್ ಮಾಡಲು ಹೋಗಿ ಈ ಘಟನೆ ಸಂಭವಿಸಿದೆಯೇ ಎಂಬ ವಿವರ ತನಿಖೆಬಳಿಕ ಬಯಲಾಗಲಿದೆ.


