Menu

ನೂತನ ಕೆಪಿಸಿಸಿ ಸಾರಥಿಗೆ ನಾನಾ ಸವಾಲು

ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಮುಂದಿನ ದಿನಗಳ ಕಾಂಗ್ರೆಸ್ ಆಡಳಿತವನ್ನು ಜನತೆಯ ಮುಂದೆ ಪರಿಣಾಮಕಾರಿ ತೆಗೆದುಕೊಂಡು ಹೋಗುವ ಗುರುತರ ಹೊಣೆಗಾರಿಕೆ ಮತ್ತು ವಿಪಕ್ಷಗಳನ್ನು ಸಮರ್ಥವಾಗಿ ಎದುರಿಸುವ ಕೆಲಸವೂ ಈಗ ಹರಿಪ್ರಸಾದ್ ಅವರ ಹೆಗಲೇರಿದೆ.

ಕೆಪಿಸಿಸಿ ಸಾರಥ್ಯವೀಗ ಕಾಂಗ್ರೆಸ್ ಪಾರ್ಟಿಯ ಹಿರಿಯ ನಾಯಕ ಬಿ ಕೆ ಹರಿಪ್ರಸಾದ್ ಅವರಿಗೆ ಒಲಿದಿದೆ. ಅಹಿಂದ ನಾಯಕ ಸತೀಶ್ ಜಾರಕೊಹೊಳಿ ಈ ಹುದ್ದೆಗೆ ಪರಮಾಕಾಂಕ್ಷಿ ಆಗಿದ್ದರು. ಆದರೆ ಜಾರಕಿಹೊಳಿ ಈಗ ಡಿ ಕೆ ಶಿವಕುಮಾರ್ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿರುವುದರಿಂದ ಒಬ್ಬರಿಗೆ ಒಂದೇ ಹುದ್ದೆ ಎಂಬ ಸಂದೇಶವನ್ನು ಪಕ್ಷದ ಹೈಕಮಾಂಡ್ ರವಾನಿಸಿದೆ. ಮಿಗಿಲಾಗಿ ಹರಿಪ್ರಸಾದ್ ಆಯ್ಕೆಯ ಹಿಂದೆ ಹಲವು ಹತ್ತು ರಾಜಕೀಯ ಸಮೀಕರಣಗಳೂ ಇವೆ. ಜಾರಕಹೊಳಿ ಈ ರಾಜ್ಯದ ಓರ್ವ ಅಹಿಂದ ನಾಯಕನಾಗಿರಬಹುದು. ಇವರಿಗೆ ಪಕ್ಷದ ಸಂಘಟನೆ ಸಾಧ್ಯವಿಲ್ಲ ಎಂಬುದಲ್ಲ. ಆದರೆ ಇವರೇನೂ ಕಾಂಗ್ರೆಸ್ ಪಕ್ಷದ ಮೂಲವಾಸಿಯಲ್ಲ. ಸಿದ್ದರಾಮಯ್ಯ ಅವರ ನೆರಳಿನಲ್ಲಿ ಗುರುತಿಸಿಕೊಂಡಿರುವ ಇವರು ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಿಗೆ ಕಟಿಬದ್ಧರೇ ಎಂಬುದು ಕಾಂಗ್ರೆಸ್ ಮೂಲವಾಸಿಗಳನ್ನು ಬಹುವಾಗಿ ಕಾಡಿದ್ದರೂ ಅಚ್ಚರಿಯಿಲ್ಲ.

ಒಬ್ಬರೇ ವ್ಯಕ್ತಿ ಎರಡು ಹುದ್ದೆಗಳನ್ನು ನಿಭಾಯಿಸುವುದು ಅಷ್ಟು ಸುಲಭದ ಮಾತಲ್ಲ. ಎಲ್ಲರೂ ಡಿಕೆಶಿ ಹಾಗೆ ಹಲವು ಹತ್ತು ಹೊಣೆಗಾರಿಕೆಗಳನ್ನು ಒಮ್ಮೆಲೆಗೆ ನಿಭಾಯಿಸಲು ಸಾಧ್ಯವಿಲ್ಲ. ಈ ದಿಶೆಯಲ್ಲಿ ಪಕ್ಷದ ಹೈಕಮಾಂಡ್ ಈಗ ಹರಿಪ್ರಸಾದ್ ಅವರನ್ನು ಗುರುತರ ಹುದ್ದೆಗೆ ಅಯ್ಕೆ iಡುವ ಮೂಲಕ ಪಕ್ಷದ ಕಟ್ಟಾಳು ಓರ್ವನಿಗೆ ಕೆಪಿಸಿಸಿ ಪಟ್ಟವನ್ನು ಕಟ್ಟಿದೆ. ಇಲ್ಲಿಯವರೆಗೆ ಪಕ್ಷವನ್ನು ಗ್ರಾಮ, ಹೋಬಳಿ, ತಾಲೂಕು ಮತ್ತು ಜಿಲ್ಲೆಯ ಮಟ್ಟದಲ್ಲಿ ಡಿಕೆಸಿ ಸಂಘಟಿಸಿ ಅಡಿ ಪಾಯ ಹಾಕಿರುವುದು ನಿಜ. ಮುಂದಿನ ಎರಡು ವರ್ಷಗಳ ಕಾಲ ಆಡಳಿತಾರೂಢ ಪಕ್ಷವು ಸರ್ವ ರೀತಿಯಲ್ಲಿ ಜನಮಾನಸದಿಂದ ದೂರ ಸರಿಯಬಾರದು. ಮಿಗಿಲಾಗಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅಬ್ಬರ ಮತ್ತು ಅರ್ಭಟವನ್ನು ಇನ್ನು ಮುಂದೆ ಕಾಂಗ್ರೆಸ್ ಅ ಹೇಗೆ ನಿಭಾಯಿಸಲು ಸಾಧ್ಯ ಎಂಬುದಕ್ಕೆ ಹೈಕಮಾಂಡ್ ಈಗ ಹರಿಪ್ರಸಾದ್ ಆಯ್ಕೆ ಮೂಲಕ ತಕ್ಕ ಉತ್ತರ ನೀಡಿದೆ. ಇತ್ತ ಸಿದ್ದರಾಮಯ್ಯ ಕಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಬಂದ ಶಾಸಕರು ಮತ್ತು ನಾಯಕರು, ಅತ್ತ ಮೊದಲಿಂದಲೂ ಪಕ್ಷಕ್ಕಾಗಿ ದುಡಿಯುತ್ತಿರುವ ನಾಯಕರು ಮತ್ತು ಕಾರ್ಯಕರ್ತರ ನಡುವೆ ಸಮನ್ವಯತೆ ಮೂಡಿಸುವುದು ಅನಿವಾರ್ಯ.

ಮೂರು ವರ್ಷಗಳ ಹಿಂದೆ ಡಿಕೆಶಿಗೆ ಈ ಹೊಣೆಗಾರಿಕೆಯನ್ನು ಹೈಕಮಾಂಡ್ ತನ್ನ ಹೆಗಲ ಮೇಲೆ ಹೊರಿಸಿದಾಗ ಈ ಕ್ಷಣದ ವರೆಗೆ ಇದನ್ನು ಸಮರ್ಥವಾಗಿ ನಿಭಾಯಿಸಿದರು, ಅಲ್ಲದೆ ಸರ್ಕಾರದಲ್ಲಿ ಡಿಸಿಎಂ ಆಗಿದ್ದುಕೊಂಡು ಪಕ್ಷವನ್ನು ಸಂಘಟಿಸುವಲ್ಲಿ ಇವರು ಯಶಸ್ವಿಯಾದರು. ಇನ್ನು ಮುಂದೆ ಈ ಕೆಲಸವನ್ನು ಹರಿಪ್ರಸಾದ್ ಸಮರ್ಪಕವಾಗಿ ಮುಂದುವರಿಸಬೇಕಿದೆಯಷ್ಟೆ. ಬಹಳ ಮುಖ್ಯವಾಗಿ ಸಿದ್ದರಾಮಯ್ಯ ಪರಮಾಪ್ತರೂ ಈಗ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆ ಮತ್ತು ಕಾಯಕದಿಂದ ದುಡಿಯುವ ಮನಃಸ್ಥಿತಿಯನ್ನು ಹೊಂದಿರಬೇಕು, ಇದರ ಜೊತೆಗೆ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಮುಂದಿನ ದಿನಗಳ ಕಾಂಗ್ರೆಸ್ ಆಡಳಿತವನ್ನು ಜನತೆಯ ಮುಂದೆ ಪರಿಣಾಮಕಾರಿ ತೆಗೆದುಕೊಂಡು ಹೋಗುವ ಗುರುತರ ಹೊಣೆಗಾರಿಕೆ ಮತ್ತು ವಿಪಕ್ಷಗಳನ್ನು ಸಮರ್ಥವಾಗಿ ಎದುರಿಸುವ ಕೆಲಸವೂ ಈಗ ಹರಿಪ್ರಸಾದ್ ಅವರ ಹೆಗಲೇರಿದೆ.

Related Posts

Leave a Reply

Your email address will not be published. Required fields are marked *