Menu

ಮಳೆಗೆ ಬಿದ್ದಿದ್ದ ವಿದ್ಯುತ್‌ ತಂತಿ ತಗುಲಿ ವಿದ್ಯಾರ್ಥಿ ಸಾವು

ಧಾರಾಕಾರ ಮಳೆಗೆ ನೆಲಕ್ಕೆ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಎಂಟು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಬೀದರ್‌ನ ಹುಲಸೂರು ಪಟ್ಟಣದಲ್ಲಿ ನಡೆದಿದೆ. ಎಂಟು ವರ್ಷದ ಅಲಿ ಮೊಮಿನ್ ಮೃತಪಟ್ಟ ಬಾಲಕ.

ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆಯ ಕಾರಣ ವಿದ್ಯುತ್‌ ಕಂಬದಿಂದ ಮನೆಗೆ ನೀಡಲಾಗಿದ್ದ ಸಂಪರ್ಕ ಕಡಿದು ವೈರ್‌ ನೆಲಕ್ಕೆ ಬಿದ್ದಿದೆ. ಆಟವಾಡುತ್ತಿದ್ದ ಬಾಲಕ ಕೈಯಲ್ಲಿ ವೈರ್‌ ಹಿಡಿದುಕೊಂಡಿದ್ದು, ಶಾಕ್‌ ತಗುಲಿ ಸ್ಥಳದಲ್ಲೇ ಅಸು ನೀಗಿದ್ದಾನೆ.

ಹುಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ನಡೆದಿದ್ದು, ಜೆಸ್ಕಾಂ ಇಲಾಖೆಯ ಅಧಿಕಾರಿಗಳ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯವೇ ಬಾಲಕನ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.

ಮಡಿಕೇರಿ ಜೈಲಿನಲ್ಲಿ ಗಾಯಗೊಂಡಿದ್ದ ಕೈದಿ ಸಾವು

ಮಡಿಕೇರಿ ಜೈಲಿನೊಳಗೆ ನಡೆದ ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿಚಾರಣಾಧೀನ ಕೈದಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ನಡೆದಿದೆ. ಟಿ.ಶೆಟ್ಟಿಗೇರಿ ನಿವಾಸಿ ಹೇಮಂತ್ (25) ಮೃತ ಕೈದಿ.

ಜೂನ್ 1ರಂದು ಬೆಳಿಗ್ಗೆ ಜೈಲಿನ ಅಡುಗೆಮನೆ ಸಮೀಪ ಹಲ್ಲೆ ನಡೆದಿತ್ತು. ಕೈದಿ ರಾಜೇಶ್, ಚಾಕುವಿನಿಂದ ಹೇಮಂತ್ ಎದೆ, ಹೊಟ್ಟೆ ಮತ್ತು ಬೆನ್ನಿನ ಭಾಗಗಳಿಗೆ ಹಲವು ಬಾರಿ ಇರಿದಿದ್ದ. ಗಂಭೀರವಾಗಿ ಗಾಯಗೊಂಡ ಹೇಮಂತ್‌ನನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅಸು ನೀಗಿದ್ದಾರೆ.

ಆಸ್ತಿ ವಿವಾದದ ಹಿನ್ನೆಲೆಯಲ್ಲಿ ರಾಜೇಶ್ ಸಹೋದರ ಗಣೇಶ್ ಮೇಲೆ ಹೇಮಂತ್ ಹಲ್ಲೆ ನಡೆಸಿದ್ದರು ಎಂಬ ಆರೋಪವಿದ್ದು, ಈ ವೈಷಮ್ಯ ಜೈಲಿನೊಳಗೂ ಮುಂದುವರಿದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಮಂತ್ ತಂದೆ, ತಾಯಿ ಹಾಗೂ ಸಹೋದರರೂ ಕೈದಿಗಳಾಗಿ ಜೈಲಿನಲ್ಲಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ರಾಜೇಶ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.

Related Posts

Leave a Reply

Your email address will not be published. Required fields are marked *