Menu

ನೀರು ಅಕ್ರಮ ಸೋರಿಕೆ ತಡೆಗೆ ಎಐ, ರೋಬೊಟಿಕ್‌ ತಂತ್ರಜ್ಞಾನಗಳ ಮೂಲಕ BWSSB ಬ್ರೇಕ್‌

ನೀರಿನ ಕಳ್ಳತನ ಹಾಗೂ ನೀರು ಸೋರಿಕೆ ತಡೆಗೆ ಎಐ (AI) ಮತ್ತು ರೋಬೋಟಿಕ್ ತಂತ್ರಜ್ಞಾನದ ಅಳವಡಿಕೆಗೆ  ಬೆಂಗಳೂರು  ಜಲಮಂಡಳಿ ಮುಂದಾಗಿದೆ.  ಬೆಂಗಳೂರು ನಗರದ ಭವಿಷ್ಯದ ನೀರಿನ ಸವಾಲುಗಳನ್ನು ಎದುರಿಸಲು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದೆ.  ಯುವ ಸ್ಟಾರ್ಟ್-ಅಪ್‌ಗಳಿಗೆ ತಮ್ಮ ವಿನೂತನ ಐಡಿಯಾಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲು ಮುಕ್ತ ಅವಕಾಶ ಕಲ್ಪಿಸಿದೆ.

ನೀರಿನ ಕಳ್ಳತನ, ನಗರದಲ್ಲಿ ಲೆಕ್ಕಕ್ಕೆ ಸಿಗದ ನೀರು (UFW) ಹಾಗೂ ಆದಾಯ ತರದ ನೀರಿನ (NRW) ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ, ಜಲಮಂಡಳಿಯು ಸ್ಮಾರ್ಟ್ ಟೆರ್ರಾ (SmartTerra) ಮತ್ತು ಸೊಲಿನಾಸ್ (Solinas) ಎಂಬ ಸ್ಟಾರ್ಟ್-ಅಪ್‌ಗಳ ಜಂಟಿ ಅಧ್ಯಯನಕ್ಕೆ ಒಪ್ಪಿಗೆ ನೀಡಲು ಮುಂದಾಗಿದೆ.

ಈ ಅಧ್ಯಯನವು ಟೈಟಾನ್ ಡಿಸೈನ್ ಇಂಪ್ಯಾಕ್ಟ್ ಅವಾರ್ಡ್ಸ್ 2.0 (Titan Design Impact Awards 2.0 – Deep Impact Phase) ಯೋಜನೆಯಡಿ ಆಯ್ಕೆಯಾಗಿದ್ದು, ಟೈಟಾನ್ ಕಂಪನಿ ಲಿಮಿಟೆಡ್‌ನ ಅನುದಾನದಿಂದ ನಡೆಯಲಿದೆ. ವಿಲ್ಗ್ರೋ (Villgro) ಇನ್‌ಕ್ಯುಬೇಷನ್ ಹಾಗೂ ವೆಲ್ ಲ್ಯಾಬ್ಸ್ (WELL Labs) ಈ ಯೋಜನೆಗೆ ತಾಂತ್ರಿಕ ಪಾಲುದಾರರಾಗಿ ಕಾರ್ಯನಿರ್ವಹಿಸಲಿವೆ.

ಒಂದು ವರ್ಷದ ಅವಧಿಯ ಈ ಅಧ್ಯಯನ ಜಲಮಂಡಳಿಗೆ ಯಾವುದೇ ಆರ್ಥಿಕ ಹೊರೆ ಇಲ್ಲದೆ ಶೂನ್ಯ ವೆಚ್ಚದಲ್ಲಿ ಅನುಷ್ಠಾನಗೊಳ್ಳಲಿದೆ. ಕೇವಲ ಪೈಪ್‌ಗಳ ದುರಸ್ತಿ, ಬದಲಿ ಹಾಗೂ ಉತ್ಖನನದಂತಹ (Excavation) ಅಗತ್ಯ ಸಿವಿಲ್ ಕಾಮಗಾರಿಗಳನ್ನು ಮಾತ್ರ ಜಲಮಂಡಳಿ ತನ್ನ ವ್ಯಾಪ್ತಿಯಲ್ಲಿ ನಿರ್ವಹಿಸಲಿದೆ.

ನೀರು ಸೋರಿಕೆಯಾಗುವ ಮತ್ತು ಅಪಾಯದಲ್ಲಿರುವ ಪೈಪ್‌ಲೈನ್ ವಿಭಾಗಗಳನ್ನು ಗುರುತಿಸಲು ಕೃತಕ ಬುದ್ಧಿಮತ್ತೆ ಆಧಾರಿತ ವಿಶ್ಲೇಷಣೆಯನ್ನು (AI-driven predictive analytics) ಈ ಯೋಜನೆ ಬಳಸಿಕೊಳ್ಳಲಿದೆ.
ಸೊಲಿನಾಸ್ ಸಂಸ್ಥೆಯು ಪೈಪ್‌ಗಳ ಒಳಗೆ ರೋಬೋಟ್‌ಗಳನ್ನು ಕಳುಹಿಸಿ (Robotic insertion) ತಪಾಸಣೆ ನಡೆಸಲಿದೆ.  ಸ್ಮಾರ್ಟ್ ಟೆರ್ರಾ ಸಂಸ್ಥೆಯು ಶಬ್ದ ತರಂಗಗಳ (Acoustic leak pinpointing) ಮೂಲಕ ಸೋರಿಕೆಯ ನಿಖರ ಸ್ಥಳವನ್ನು ಯಾವುದೇ ಉತ್ಖನನವಿಲ್ಲದೆ ಪತ್ತೆ ಮಾಡಲಿದೆ.  ಈ ನವೀನ ವಿಧಾನಗಳು ನೀರು ಪೂರೈಕೆ, ಮೀಟರ್‌ಗಳ ಬೇಡಿಕೆ ಮತ್ತು ಸೋರಿಕೆಯ ನಷ್ಟವನ್ನು ನಿರಂತರವಾಗಿ ಕಣ್ಗಾವಲಿನಲ್ಲಿಡಲು ಹಾಗೂ ಆದಾಯ ಹೆಚ್ಚಿಸಲು ಸಹಾಯ ಮಾಡಲಿವೆ.

ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ನಿರ್ದೇಶನದಂತೆ ನವೀನ ತಂತ್ರಜ್ಞಾನಗಳನ್ನು ಆವಿಷ್ಕರಿಸಿರುವ ಯುವ ಸ್ಟಾರ್ಟ್-ಅಪ್‌ಗಳಿಗೆ ಜಲಮಂಡಳಿಯು ‘ಟೆಸ್ಟ್ ಬೆಡ್’ ಆಗಿ ಕಾರ್ಯನಿರ್ವಹಿಸಲು ಅವಕಾಶ ನೀಡಲು ಮುಂದಾಗಿದೆ.

ನವೋದ್ಯಮಗಳ ಇಂತಹ ದತ್ತಾಂಶ ಆಧಾರಿತ ವೈಜ್ಞಾನಿಕ ವಿಧಾನಗಳು ಮತ್ತು ಡಿಜಿಟಲ್ ವರ್ಕ್‌ಫ್ಲೋಗಳು ನಗರದ ನೀರು ನಿರ್ವಹಣೆಯಲ್ಲಿ ದೊಡ್ಡ ಬದಲಾವಣೆ ತರಬಲ್ಲವು. ಈ ಪ್ರಾಯೋಗಿಕ ಅಧ್ಯಯನಕ್ಕಾಗಿ ಆದ್ಯತೆಯ ವಲಯಗಳನ್ನು ಗುರುತಿಸಿ, ಆರಂಭಿಕ ಸಮೀಕ್ಷೆಗೆ ಶೀಘ್ರವೇ ಅನುಮತಿ ನೀಡಲಾಗುವುದು. ಇದರಿಂದ ಬೆಂಗಳೂರು ಜಲಮಂಡಳಿಗೆ ಆಗುತ್ತಿರುವ ಆರ್ಥಿಕ ಹಾನಿ ಹಾಗೂ ಪೈಪ್‌ಲೈನ್‌ನಲ್ಲಿರುವ ಲೋಪದೋಷಗಳಿಂದ ನೀರು ಕಲುಷಿತವಾಗುವುದನ್ನು ತಪ್ಪಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ವಿ. ತಿಳಿಸಿದ್ದಾರೆ .

Related Posts

Leave a Reply

Your email address will not be published. Required fields are marked *