ತಮಿಳುನಾಡು ಬಿಜೆಪಿ ಮುಖ್ಯಸ್ಥರಾಗಿದ್ದ ಕೆ ಅಣ್ಣಾಮಲೈ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯಸಭಾ ಸ್ಥಾನವನ್ನೂ ನಿರಾಕರಿಸಿ ಪಕ್ಷ ತೊರೆದಿದ್ದಾರೆ.
ಜೂನ್ 4 ಅಣ್ಣಾಮಲೈ ಹುಟ್ಟುಹಬ್ಬ ಇದ್ದು, ಅಂದೇ ಮುಂದಿನ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಹೊಸದಾಗಿ ಪ್ರಾದೇಶಿಕ ಪಕ್ಷ ಕಟ್ಟಲಿದ್ದಾರೆ ಎಂದು ಹೇಳಲಾಗುತ್ತಿದೆ. ನಟ ವಿಜಯ್ ಸರಕಾರ ರಚನೆಯೊಂದಿಗೆ ತಮಿಳುನಾಡಲ್ಲಿ ಇದೀಗ ಅಣ್ಣಾಮಲೈ ರಾಜೀನಾಮೆಯೂ ದೊಡ್ಡ ಸುದ್ದಿಯಾಗಿದೆ. ಅಣ್ಣಾ ಮಲೈ ಜನ ಚಳುವಳಿ ಆರಂಭಿಸಿ, ರಜನೀಕಾಂತ್ ಬೆಂಬಲವನ್ನೂ ಪಡೆಯಲಿದ್ದಾರೆ ಎನ್ನಲಾಗಿದೆ.
ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿದ್ದ ಕರೂರು ಜಿಲ್ಲೆಯ ಅಣ್ಣಾಮಲೈ ವೃತ್ತಿಗೆ ರಾಜೀನಾಮೆ ನೀಡಿ 2020 ರಲ್ಲಿ ರಾಜಕೀಯ ಪ್ರವೇಶಿಸಿದ್ದರು. 2021 ರಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.
ಆರಂಭದಿಂದಲೂ ಎಐಎಡಿಎಂಕೆಯೊಂದಿಗೆ ಬಿಜೆಪಿ ಮೈತ್ರಿ ನಡೆಸಬಾರದೆಂದು ಒತ್ತಾಯಿಸಿದ್ದರು. ಎಐಎಡಿಎಂಕೆ ಪಕ್ಷದ ನಾಯಕ ಪಳನಿಸ್ವಾಮಿ ಜೊತೆ ನಿರಂತರ ಸಂಘರ್ಷಕ್ಕಿಳಿದ ಪರಿಣಾಮ ಎನ್ಡಿಎ ಜೊತೆ ಬಿರುಕು ಮೂಡಿತು ಎಂಬ ಕಾರಣಕ್ಕೆ ಅಣ್ಣಾಮಲೈ ಅವರನ್ನು ಮೂಲೆಗುಂಪು ಮಾಡಲಾಗಿತ್ತು. ವಿಧಾನಸಭಾ ಚುನಾವಣೆಯ ಸಂದರ್ಭ ತಂದೆಯ ಅನಾರೋಗ್ಯದ ಕಾರಣ ನೀಡಿ ಚುನಾವಣಾ ಉಸ್ತುವಾರಿಯಿಂದ ಹಿಂದೆ ಸರಿದಿದ್ದರು ಮತ್ತು ಸ್ಪರ್ಧಿಸಲು ನಿರಾಕರಿಸಿದ್ದರು.


