ಇರಾನ್ ಮೇಲಿನ ವೈಮಾನಿಕ ದಾಳಿ ತಕ್ಷಣ ಪುನರಾರಂಭಿಸಬೇಕು ಎಂದು ಬೆಂಜಮಿನ್ ನೆತನ್ಯಾಹು ಪಟ್ಟು ಹಿಡಿದಿದ್ದು, ದಾಳಿ ಮುಂದೂಡಿಕೆ ದೊಡ್ಡ ತಪ್ಪು ಎಂದು ಟ್ರಂಪ್ ಜೊತೆ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಇರಾನ್ ವಿರುದ್ಧದ ಯುದ್ಧ ಮತ್ತು ರಾಜತಾಂತ್ರಿಕ ಕಾರ್ಯತಂತ್ರ ವಿಚಾರದಲ್ಲಿ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ನೆತನ್ಯಾಹು ನಡುವೆ ಭಿನ್ನಮತ ಸ್ಫೋಟಗೊಂಡಿದೆ.
ಇಬ್ಬರ ನಡುವೆ ಇತ್ತೀಚೆಗೆ ನಡೆದ ಸುದೀರ್ಘ ಫೋನ್ ಕರೆಯಲ್ಲಿ ಇರಾನ್ ವಿಚಾರವಾಗಿ ಇಬ್ಬರು ನಾಯಕರು ಪರಸ್ಪರ ಭಿನ್ನ ನಿಲುವು ವ್ಯಕ್ತಪಡಿಸಿದ್ದು, ಮಾತುಕತೆ ಉದ್ವಿಗ್ನತೆಯಿಂದ ಕೂಡಿತ್ತು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಇರಾನ್ನ ಮಿಲಿಟರಿ ಶಕ್ತಿಯನ್ನು ಸಂಪೂರ್ಣವಾಗಿ ಕುಗ್ಗಿಸಲು ಸತತ ಮಿಲಿಟರಿ ಕಾರ್ಯಾಚರಣೆಯೊಂದೇ ದಾರಿ ಎಂದು ನೆತನ್ಯಾಹು ಹೇಳಿದ್ದಾಗಿ ವರದಿಯಾಗಿದೆ.
ಇರಾನ್ ಜೊತೆಗಿನ ಸಂಘರ್ಷಕ್ಕೆ ರಾಜತಾಂತ್ರಿಕ ಮಾತುಕತೆಗಳ ಮೂಲಕ ಪರಿಹಾರ ಕಂಡುಕೊಳ್ಳಲು, ಯುದ್ಧವನ್ನು ಅಧಿಕೃತವಾಗಿ ಕೊನೆಗೊಳಿಸಲು ಮತ್ತು ಇರಾನ್ನ ಪರಮಾಣು ಕಾರ್ಯಕ್ರಮ, ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವ ಕುರಿತು 30 ದಿನಗಳ ಮಾತುಕತೆ ನಡೆಸಲು ಒಪ್ಪಂದದ ಪತ್ರ ಸಿದ್ಧಪಡಿಸುವತ್ತ ಟ್ರಂಪ್ ಆಸಕ್ತಿ ವಹಿಸಿದ್ದಾರೆ ಎನ್ನಲಾಗುತ್ತಿದೆ.
ಸೌದಿ ಅರೇಬಿಯಾ, ಯುಎಇ ಮತ್ತು ಕತಾರ್ ನೀಡಿದ ರಾಜತಾಂತ್ರಿಕ ಸಲಹೆ ಪರಿಗಣಿಸಿ ಟ್ರಂಪ್, ಇರಾನ್ ಮೇಲಿನ ನಿಗದಿತ ದಾಳಿಗಳನ್ನು ಸ್ಥಗಿತಗೊಳಿಸಿದ್ದಾರೆ. ಟ್ರಂಪ್ ಅವರ ಈ ನಿರ್ಧಾರ ಇಸ್ರೇಲ್ ನಾಯಕತ್ವದಲ್ಲಿ ಅಸಮಾಧಾನ ಮೂಡಿಸಿದೆ ಎನ್ನಲಾಗಿದೆ. ರಾಜತಾಂತ್ರಿಕ ಮಾತುಕತೆಗಳು ವಿಫಲವಾದರೆ ಮಿಲಿಟರಿ ದಾಳಿ ನಡೆಸಲು ತಾವು ಸಿದ್ಧ. ಅಮೆರಿಕ ಮತ್ತು ಇರಾನ್ ಒಪ್ಪಂದ ಅಂತಿಮ ಹಂತದಲ್ಲಿದ್ದು, ನಮಗೆ ಶೇ.100 ತೃಪ್ತಿಕರ ಉತ್ತರಗಳು ಸಿಗದಿದ್ದರೆ ಸೇನಾ ಕ್ರಮ ಮತ್ತೆ ಶುರುವಾಗಬಹುದು ಎಂದು ಟ್ರಂಪ್ ಎಚ್ಚರಿಕೆ ಕೂಡ ನೀಡಿದ್ದಾರೆ.


