Menu

ಸೋಲಿನ ಭಯದಿಂದ ಕಾಂಗ್ರೆಸ್ ಸರ್ಕಾರ  ಜಿಬಿಎ ಚುನಾವಣೆ ಮುಂದೂಡುತ್ತಿದೆ: ಆರ್‌ ಅಶೋಕ

ಸೋಲುವ ಭಯದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಯನ್ನು ಕಾಂಗ್ರೆಸ್ ಸರ್ಕಾರ ಪದೇ ಪದೆ ಮುಂದೂಡುತ್ತಿದ್ದು, ಇದು ಬೆಂಗಳೂರು ಜನತೆಗೆ ಮಾಡಿರುವ ದ್ರೋಹ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಇದ್ದ 198 ವಾರ್ಡ್‌ಗಳ ಆಧಾರದ ಮೇಲೆ ಚುನಾವಣೆ ನಡೆಸಿದ್ದರೆ ಇಷ್ಟೊತ್ತಿಗೆ ಚುನಾವಣೆ ಮುಗಿದಿರುತ್ತಿತ್ತು. ಆದರೆ ಬೆಂಗಳೂರನ್ನು ಐದು ಭಾಗಗಳಾಗಿ ವಿಭಜಿಸಿದ ಬಳಿಕ ಕಾಂಗ್ರೆಸ್‌ನ ಆಂತರಿಕ ಸಮೀಕ್ಷೆಗಳಲ್ಲಿ ಐದು ಕಡೆಯೂ ಸೋಲು ಖಚಿತವಾಗಿದೆ ಎಂಬ ವರದಿ ಬಂದಿರುವುದರಿಂದ ಸರ್ಕಾರ ಚುನಾವಣೆಯನ್ನು ಉದ್ದೇಶಪೂರ್ವಕವಾಗಿ ಮುಂದೂಡುತ್ತಿದೆ. ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ಸಿಎಂ ಅಧಿಕಾರ ಹಸ್ತಾಂತರ ಪೂರ್ಣಗೊಳ್ಳುವ ಮೊದಲು ಚುನಾವಣೆ ನಡೆಯಬಾರದು ಎಂಬ ಬಯಕೆಯಿದೆ. ಕಾಂಗ್ರೆಸ್‌ನ ಒಳಜಗಳದ ಪರಿಣಾಮವಾಗಿ ಇಂದು ಬೆಂಗಳೂರಿನ ಬೀದಿ ಬೀದಿಗಳಲ್ಲಿ ಕಸದ ರಾಶಿ ಬಿದ್ದಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಇದಕ್ಕೆ ನೇರ ಕಾರಣ ಕಾಂಗ್ರೆಸ್ ಸರ್ಕಾರ. ಕೋರ್ಟ್ ಮತ್ತೊಮ್ಮೆ ಕೊನೆಯ ಗಡುವು ನೀಡಿರುವ ಹಿನ್ನೆಲೆಯಲ್ಲಿ ಅದರೊಳಗೆ ಚುನಾವಣೆ ನಡೆಸಬೇಕು. ಬಿಜೆಪಿ ಚುನಾವಣೆಗೆ ಸಂಪೂರ್ಣ ಸಿದ್ಧವಾಗಿದೆ. ಕೂಡಲೇ ಚುನಾವಣೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ನ ಆಂತರಿಕ ಸಮೀಕ್ಷೆಗಳಲ್ಲಿ ಸೋಲು ಖಚಿತವಾದ ಬಳಿಕ ವಿರೋಧ ಪಕ್ಷಗಳ ಮೇಲೆ ಆರೋಪ ಹೊರಿಸುವ ಕೆಲಸ ಮಾಡಲಾಗುತ್ತಿದೆ. ಕಳೆದ ಬಾರಿಯೇ ಬಿಜೆಪಿ ಚುನಾವಣಾ ಆಯೋಗಕ್ಕೆ ಅಧಿಕೃತ ಪತ್ರ ಬರೆದು ತಕ್ಷಣ ಚುನಾವಣೆ ನಡೆಸುವಂತೆ ಮನವಿ ಮಾಡಿತ್ತು. ಸಮೀಕ್ಷೆಯಲ್ಲಿ ಗೆಲ್ಲುತ್ತೇವೆ ಎನ್ನುವ ವಿಶ್ವಾಸ ಇದ್ದರೆ ಚುನಾವಣೆ ಏಕೆ ನಡೆಸುತ್ತಿಲ್ಲ? ಏನೇ ಸಮಸ್ಯೆ ಬಂದರೂ ಅದನ್ನು ವಿರೋಧ ಪಕ್ಷಗಳ ಮೇಲೆ ಹಾಕುವುದು ಕಾಂಗ್ರೆಸ್‌ನ ಚಾಳಿಯಾಗಿದೆ. ಈಗಲೂ ಅದೇ ರೀತಿಯಲ್ಲಿ ಚುನಾವಣೆ ಮುಂದೂಡುವ ಹೊಣೆಗಾರಿಕೆಯನ್ನು ವಿರೋಧ ಪಕ್ಷಗಳ ಮೇಲೆ ಹಾಕಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಎಸ್‌ಐಆರ್‌ ಹಾಗೂ ಸರ್ವೇ ನೆಪ ಹೇಳಿ ಚುನಾವಣೆ ಮುಂದೂಡುವುದು ಕೇವಲ ರಾಜಕೀಯ ತಂತ್ರ. ಚುನಾವಣೆ ನಡೆಸುವ ಮನಸ್ಸಿದ್ದರೆ ಯಾವುದೂ ದೊಡ್ಡ ಸಮಸ್ಯೆಯಲ್ಲ. ಮೊದಲೇ ನಿಗದಿಪಡಿಸಿದ ವೇಳಾಪಟ್ಟಿಯಂತೆ ಚುನಾವಣೆ ನಡೆಸಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಹಾಲಿನ ದರ ಏರಿಕೆ, ಆಲ್ಕೋಹಾಲ್‌ ತೆರಿಗೆ ಹೆಚ್ಚಳ, ವಿದ್ಯುತ್ ದರ ಏರಿಕೆ, ಮನೆ ತೆರಿಗೆ ಹೆಚ್ಚಳ, ಹೊಸ ಖಾತಾ ವ್ಯವಸ್ಥೆ ಸೇರಿದಂತೆ ಜನರ ಮೇಲೆ ನಿರಂತರ ಹೊರೆ ಹಾಕಿರುವುದರಿಂದ ಬೆಂಗಳೂರು ಜನರು ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದಿದ್ದಾರೆ. ಇದೇ ಕಾರಣಕ್ಕೆ ಚುನಾವಣೆಯನ್ನು ಮುಂದೂಡಲಾಗುತ್ತಿದೆ ಎಂದು ಟೀಕಿಸಿದರು.

ಬಿಡದಿಯಲ್ಲಿ ಭೂಸ್ವಾಧೀನ ಮಾಡಲು ಸರ್ಕಾರ ಮುಂದಾಗಿರುವುದು ರೈತರಿಗೆ ಮಾಡುತ್ತಿರುವ ದ್ರೋಹ. ಅಲ್ಲಿ ತೆಂಗು, ಮಾವು, ರೇಷ್ಮೆ ಹಾಗೂ ಹಾಲು ಉತ್ಪಾದನೆ ಸಮೃದ್ಧವಾಗಿರುವ ಫಲವತ್ತಾದ ಕೃಷಿ ಭೂಮಿಯಿದೆ. ಅಂತಹ ಪ್ರದೇಶವನ್ನು ಒತ್ತುವರಿ ಮಾಡಿ ರೈತರನ್ನು ಬೀದಿಗೆ ತರುವ ಕೆಲಸ ನಡೆಯುತ್ತಿದೆ. ಸರ್ಕಾರ ಇಂದು ಆಯೋಜಿಸಿದ ಸಭೆಗಳಲ್ಲಿ ನಕಲಿ ರೈತರನ್ನು ಕರೆತಂದು ರೈತರ ಪರ ಎಂದು ತೋರಿಸಲಾಗುತ್ತಿದೆ. ಆದರೆ ನಿಜವಾದ ರೈತರು “ಜಮೀನು ಕೊಡುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಬಿಜೆಪಿ ಆರಂಭದಿಂದಲೂ ಬಿಡದಿ ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದು, ಮುಂದೆಯೂ ರೈತರ ಪರವಾಗಿ ನಿಲ್ಲಲಿದೆ ಎಂದು ಹೇಳಿದರು.

ಬೆಂಗಳೂರು ಸುತ್ತಮುತ್ತ ಈಗಾಗಲೇ ಸಾಕಷ್ಟು ಜಾಗ ಖಾಲಿಯಿದೆ. ಕೆಂಪೇಗೌಡ ಲೇಔಟ್‌, ಶಿವರಾಮ ಕಾರಂತ ಲೇಔಟ್‌ ಸೇರಿದಂತೆ ಲಕ್ಷಾಂತರ ಫ್ಲಾಟ್‌ಗಳು ಖಾಲಿ ಇರುವಾಗ ಹೊಸ ಲೇಔಟ್‌ಗಳ ಅವಶ್ಯಕತೆ ಏನು? ಎಂದು ಪ್ರಶ್ನಿಸಿದರು. ಬಿಡದಿಯಲ್ಲಿ ಸುಮಾರು 3,000 ಎಕರೆ ಸರ್ಕಾರಿ ಜಾಗವಿದ್ದು, ಅದನ್ನು ಬಳಸದೆ ರೈತರ ಭೂಮಿಯತ್ತ ಸರ್ಕಾರ ಕಣ್ಣು ಹಾಕಿದೆ. ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿರುವುದರಿಂದ ಹೊಸ ಟೆಂಡರ್‌ಗಳ ಮೂಲಕ ಸಾವಿರಾರು ಕೋಟಿ ರೂ. ಹಣ ತಂದು ಅದರಲ್ಲಿ ಕಮಿಷನ್ ಪಡೆಯುವ ಉದ್ದೇಶದಿಂದಲೇ ಈ ಭೂ ಸ್ವಾಧೀನ ನಡೆಯುತ್ತಿದೆ. ಇದು ರೈತರ ಸಮಾಧಿಯ ಮೇಲೆ ಮಾಡುವ ಅಭಿವೃದ್ಧಿಯಾಗಿದೆ ಎಂದು ಕಿಡಿಕಾರಿದರು.

ಈಗಾಗಲೇ ಕನಕಪುರ ಬೆಂಗಳೂರು ಎಂದು ಹೇಳಿದ ಬಳಿಕ, ಎಲ್ಲ ಮಂತ್ರಿಗಳಿಗೂ ತಮ್ಮ ಜಿಲ್ಲೆಗಳಿಗೆ “ಬೆಂಗಳೂರು” ಹೆಸರು ಸೇರಿಸಬೇಕು ಎಂಬ ಸ್ಪರ್ಧೆ ಶುರುವಾಗಿದೆ. ಕರಾವಳಿ ಬೆಂಗಳೂರು, ಉತ್ತರ ಕರ್ನಾಟಕ ಬೆಂಗಳೂರು, ಕೋಲಾರ ಬೆಂಗಳೂರು, ಮಂಡ್ಯ ಬೆಂಗಳೂರು ಎಂದು ಹೆಸರಿಡುವುದರಿಂದ ಅಭಿವೃದ್ಧಿ ಆಗುವುದಿಲ್ಲ. ತುಮಕೂರಿಗೆ ಬೆಂಗಳೂರು ಹೆಸರಿಡಬೇಕು ಎಂಬ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತು ಹಾಸ್ಯಾಸ್ಪದ ಎಂದರು.

ಅಭಿವೃದ್ಧಿ ಮಾಡಲು ಯೋಗ್ಯತೆ ಇಲ್ಲದವರು ಹೆಸರು ಬದಲಾಯಿಸಿ ಪ್ರಚಾರ ಪಡೆಯಲು ಯತ್ನಿಸುತ್ತಿದ್ದಾರೆ. ಹಣ ನೀಡದೆ, ಯೋಜನೆ ತರದೆ ಕೇವಲ ಹೆಸರನ್ನು ಬಳಸುವುದರಿಂದ ಜನ ಮೆಚ್ಚುವುದಿಲ್ಲ. ಬಿಜೆಪಿ ಸರ್ಕಾರ ಬಂದ ಬಳಿಕ ಮೂಲ ಹೆಸರನ್ನೇ ಮರುಸ್ಥಾಪಿಸಲಾಗುವುದು. ಬ್ರ್ಯಾಂಡ್ ಬೆಂಗಳೂರು, ಟನಲ್ ಬೆಂಗಳೂರು ಎಂದು ಹೇಳಿದರೂ ಇಂದು ನಗರ, ಕಸದ ಬೆಂಗಳೂರು, ಗುಂಡಿಗಳ ಬೆಂಗಳೂರು ಆಗಿದೆ. ಜನರ ಗಮನ ಬೇರೆಡೆ ಸೆಳೆಯಲು ಹೆಸರಿನ ರಾಜಕೀಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಬೆಂಗಳೂರು ಕಾರ್ಪೊರೇಷನ್‌ ಹಣವನ್ನು ತುಮಕೂರು ಅಥವಾ ರಾಮನಗರ ಜಿಲ್ಲೆಗಳ ಅಭಿವೃದ್ಧಿಗೆ ಬಳಸಲು ಸಾಧ್ಯವಿಲ್ಲ. ಹೀಗೆ ಬೆಂಗಳೂರಿನ ಹೆಸರನ್ನು ದುರುಪಯೋಗ ಮಾಡಿದರೆ ಬೆಂಗಳೂರು ಜನರೇ ಕಾಂಗ್ರೆಸ್‌ಗೆ ಶಾಪ ಹಾಕುತ್ತಾರೆ. ಅದೇ ಶಾಪದಿಂದ ಮುಂದಿನ ಜಿಬಿಎ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲಿದೆ ಎಂದು  ಹೇಳಿದರು.

ಹಾಲಿನ ದರ ಏರಿಕೆ, ಆಲ್ಕೋಹಾಲ್‌ ತೆರಿಗೆ ಹೆಚ್ಚಳ, ವಿದ್ಯುತ್ ದರ ಏರಿಕೆ, ಮನೆ ತೆರಿಗೆ ಹೆಚ್ಚಳದ ಜೊತೆಗೆ ಈಗ ಎ-ಖಾತಾ, ಬಿ-ಖಾತಾ ಹೆಸರಿನಲ್ಲಿ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಲಾಗುತ್ತಿದೆ. ಜನರು ಮನೆಗಳ ಖಾತಾ ಕೇಳಿದ್ದರೆ, ಸರ್ಕಾರ ಹೊಸದಾಗಿ ‘ಒ ಖಾತಾ’, ‘ಇ-ಖಾತಾ’ ಎಂಬ ಗೊಂದಲ ಸೃಷ್ಟಿಸಿದೆ. ಸ್ವಾತಂತ್ರ್ಯ ಬಂದ ಬಳಿಕ ಇಷ್ಟು ವರ್ಷ ಯಾವುದೇ ಸಮಸ್ಯೆ ಇರಲಿಲ್ಲ. ಈಗ ಹೊಸ ಖಾತಾ ವ್ಯವಸ್ಥೆಯ ಅಗತ್ಯವೇನು? ಇದು ಕೇವಲ ಹಣ ಮಾಡುವ ದಾರಿಯಾಗಿದೆ. ಇಷ್ಟೆಲ್ಲ ಲೂಟಿ ಮಾಡಿದ ಬಳಿಕ ಬೆಂಗಳೂರು ಜನ ಕಾಂಗ್ರೆಸ್‌ಗೆ ಮತ ಹಾಕುವುದಿಲ್ಲ ಎಂಬ ಭಯದಿಂದಲೇ ಸರ್ಕಾರ ಚುನಾವಣೆ ಮುಂದೂಡುತ್ತಿದೆ ಎಂದು ಟೀಕಿಸಿದರು.

Related Posts

Leave a Reply

Your email address will not be published. Required fields are marked *