Menu

ಏರ್‌ಟೆಲ್‌: 5ಜಿ ನೆಟ್‌ ವರ್ಕ್ ಮೇಲ್ದರ್ಜೆಗೆ, ಯಾವುದೇ ಸಮಯದಲ್ಲೂ ಸಿಗಲಿದೆ ಹೈ-ಸ್ಪೀಡ್ ಇಂಟರ್ನೆಟ್

ದೇಶದ ಪ್ರಮುಖ ದೂರಸಂಪರ್ಕ ಸಂಸ್ಥೆಯಾದ ಭಾರ್ತಿ ಏರ್‌ ಟೆಲ್, ತನ್ನ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಅತ್ಯುನ್ನತ ಹಾಗೂ ಸ್ಥಿರವಾದ ನೆಟ್‌ ವರ್ಕ್ ಅನುಭವವನ್ನು ನೀಡುವ ಸಲುವಾಗಿ ಅತ್ಯಾಧುನಿಕ 5ಜಿ ಸ್ಲೈಸಿಂಗ್ ತಂತ್ರಜ್ಞಾನ ಆಧಾರಿತ ಹೊಸ ಪ್ರಯಾರಿಟಿ ಪೋಸ್ಟ್‌ ಪೇಯ್ಡ್ ಸೌಲಭ್ಯವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಉದ್ಯೋಗ, ವೃತ್ತಿಪರ ಕೆಲಸಗಳು, ಮನರಂಜನೆ ಅಥವಾ ಆನ್‌ ಲೈನ್ ಮೀಟಿಂಗ್‌ಗಳಿಗಾಗಿ ಯಾವುದೇ ಅಡೆತಡೆಯಿಲ್ಲದ ಕನೆಕ್ಟಿವಿಟಿಯನ್ನು ಬಯಸುವ ಬಿಡುವಿಲ್ಲದ ಗ್ರಾಹಕರಿಗಾಗಿಯೇ ಈ ಸೇವೆಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ವಿಶೇಷ ಸೇವೆಗಾಗಿ ಏರ್‌ಟೆಲ್ ತನ್ನ ಹಾಲಿ 5ಜಿ ನೆಟ್‌ ವರ್ಕ್ ಅನ್ನು ಸುಧಾರಿತ ಸಾಮರ್ಥ್ಯದ ಸ್ಲೈಸಿಂಗ್ ತಂತ್ರಜ್ಞಾನದೊಂದಿಗೆ ಮೇಲ್ದರ್ಜೆಗೆ ಏರಿಸಿದೆ. ಈ ತಂತ್ರಜ್ಞಾನವು ನೆಟ್‌ ವರ್ಕ್‌ ನ ಒಟ್ಟಾರೆ ದಕ್ಷತೆಯನ್ನು ಹೆಚ್ಚಿಸುವುದಲ್ಲದೆ, ಹೆಚ್ಚಿನ ಡೇಟಾ ಸಾಮರ್ಥ್ಯವನ್ನು ಸೃಷ್ಟಿಸುತ್ತದೆ. ಈ ಹೆಚ್ಚುವರಿ ಸಾಮರ್ಥ್ಯವನ್ನು ನಿರ್ದಿಷ್ಟವಾಗಿ ಬಳಸಿಕೊಂಡು, ನೆಟ್‌ ವರ್ಕ್ ದಟ್ಟಣೆ ಇರುವ ಪ್ರದೇಶಗಳಲ್ಲೂ ಪ್ರಯಾರಿಟಿ ಗ್ರಾಹಕರಿಗೆ ಯಾವುದೇ ವೇಗ ಮಿತಿ ಇಲ್ಲದೆ ಅತ್ಯುತ್ತಮ ಡಿಜಿಟಲ್ ಅನುಭವವನ್ನು ನೀಡಲು ಇದು ನೆರವಾಗಲಿದೆ.

ಸಾಮಾನ್ಯವಾಗಿ ಅತಿ ಹೆಚ್ಚು ಇಂಟರ್ನೆಟ್ ಟ್ರಾಫಿಕ್ ಅಥವಾ ಬಳಕೆದಾರರ ಸಂಖ್ಯೆ ಹೆಚ್ಚಿರುವ ಸಂದರ್ಭಗಳಲ್ಲಿ ನೆಟ್‌ ವರ್ಕ್ ನಿಧಾನವಾಗುವ ಸಮಸ್ಯೆ ಎದುರಾಗುತ್ತದೆ. ಆದರೆ, ಏರ್‌ ಟೆಲ್‌ ನ ಈ ಹೊಸ ವ್ಯವಸ್ಥೆಯು ನೆಟ್‌ ವರ್ಕ್ ಸಾಮರ್ಥ್ಯವನ್ನು ಬುದ್ಧಿವಂತಿಕೆಯಿಂದ ಮತ್ತು ಕ್ರಿಯಾತ್ಮಕವಾಗಿ ವಿಭಜಿಸುವ ಮೂಲಕ, ಗ್ರಾಹಕರಿಗೆ ಯಾವುದೇ ಅಡ್ಡಿಯಿಲ್ಲದ, ಸ್ಥಿರವಾದ ಮತ್ತು ಅತ್ಯಂತ ನಂಬಿಕಸ್ಥ ಸೇವೆಯನ್ನು ಒದಗಿಸಲಿದೆ.

ಕಳೆದ ಒಂದು ವರ್ಷದಲ್ಲಿ ಯುಎಸ್‌ಎ, ಸಿಂಗಾಪುರ, ಯುನೈಟೆಡ್ ಕಿಂಗ್‌ಡಮ್ ಮತ್ತು ಮಲೇಷ್ಯಾ ಸೇರಿದಂತೆ ಹಲವು ಪ್ರಮುಖ ದೇಶಗಳಲ್ಲಿ ಸ್ಲೈಸಿಂಗ್ ಆಧಾರಿತ 5ಜಿ ಸೇವೆಗಳನ್ನು ಪ್ರಾರಂಭಿಸಲಾಗಿದೆ. ಭಾರತದಲ್ಲಿ ಈ ರೀತಿಯ ಸೇವೆಯನ್ನು ಪರಿಚಯಿಸುತ್ತಿರುವುದು ಏರ್‌ ಟೆಲ್ ಸಂಸ್ಥೆಯೇ ಮೊದಲು ಎಂಬುದು ಗಮನಾರ್ಹ. ಇದು ಹೆಚ್ಚು ಸ್ಮಾರ್ಟ್, ಸ್ಥಿರ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಡಿಜಿಟಲ್ ನೆಟ್‌ ವರ್ಕ್ ಅನ್ನು ನಿರ್ಮಿಸಲು ಏರ್‌ ಟೆಲ್ ನಿರಂತರವಾಗಿ ಹೂಡಿಕೆ ಮಾಡುತ್ತಿರುವುದನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ ಗ್ರಾಹಕ ಕೇಂದ್ರಿತ ನಾವೀನ್ಯತೆಯೊಂದಿಗೆ ಸುಧಾರಿತ ತಂತ್ರಜ್ಞಾನವನ್ನು ಸಂಯೋಜಿಸುವ ಕಂಪನಿಯ ಬದ್ಧತೆಯನ್ನು ಇದು ಸ್ಪಷ್ಟಪಡಿಸುತ್ತದೆ.

ಈ ಹೊಸ ತಂತ್ರಜ್ಞಾನದ ಬಿಡುಗಡೆ ಕುರಿತು ಮಾತನಾಡಿದ ಏರ್‌ ಟೆಲ್‌ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಶ್ವತ್ ಶರ್ಮಾ ಅವರು, “ನಮ್ಮ ಗ್ರಾಹಕರ ಅನುಭವವನ್ನು ಉತ್ತಮಗೊಳಿಸುವ ಅರ್ಥಪೂರ್ಣ ಸೌಲಭ್ಯಗಳನ್ನು ನೀಡುವುದರ ಕಡೆಗೆ ಏರ್‌ ಟೆಲ್ ಯಾವಾಗಲೂ ಗಮನ ಹರಿಸುತ್ತದೆ. 5ಜಿ ಸ್ಲೈಸಿಂಗ್ ತಂತ್ರಜ್ಞಾನದ ಬೆಂಬಲದೊಂದಿಗೆ ಮೂಡಿಬಂದಿರುವ ಪ್ರಯಾರಿಟಿ ಪೋಸ್ಟ್‌ ಪೇಯ್ಡ್ ನಮ್ಮ ಇತ್ತೀಚಿನ ಆವಿಷ್ಕಾರವಾಗಿದೆ. ಗ್ರಾಹಕರು ಟ್ರಾಫಿಕ್‌ ನಲ್ಲಿ ಸಿಲುಕಿದ್ದಾಗ ಕ್ಲೈಂಟ್ ಕಾಲ್‌ ನಲ್ಲಿ ಭಾಗವಹಿಸುತ್ತಿರಲಿ, ಜನದಟ್ಟಣೆಯ ಸಂಗೀತ ಕಚೇರಿಯಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿರಲಿ ಅಥವಾ ಕಿಕ್ಕಿರಿದ ಮಾರುಕಟ್ಟೆಯಲ್ಲಿ ಕ್ಯಾಬ್ ಬುಕ್ ಮಾಡುತ್ತಿರಲಿ, ಇದು ಅವರಿಗೆ ಅತ್ಯುತ್ತಮ, ಹೆಚ್ಚು ವಿಶ್ವಾಸಾರ್ಹ ಮತ್ತು ನಂಬಿಕಸ್ಥ ನೆಟ್‌ ವರ್ಕ್ ಅನುಭವವನ್ನು ನೀಡುತ್ತದೆ,” ಎಂದು ತಿಳಿಸಿದರು.

ಏರ್‌ ಟೆಲ್‌ ನ ಎಲ್ಲಾ ಪೋಸ್ಟ್‌ ಪೇಯ್ಡ್ ಪ್ಲಾನ್‌ ಗಳನ್ನು ಹೊಂದಿರುವ ಗ್ರಾಹಕರಿಗೆ ಈ ಪ್ರಯಾರಿಟಿ ಸೇವೆ ಲಭ್ಯವಿರಲಿದೆ. ಪ್ರಸ್ತುತ ಇರುವ ಪೋಸ್ಟ್‌ ಪೇಯ್ಡ್ ಗ್ರಾಹಕರು ಯಾವುದೇ ಹೆಚ್ಚುವರಿ ಪ್ರಕ್ರಿಯೆಯಿಲ್ಲದೆ ಸ್ವಯಂಚಾಲಿತವಾಗಿ ಈ ಸೌಲಭ್ಯದ ಪ್ರಯೋಜನವನ್ನು ಪಡೆಯಲಿದ್ದಾರೆ. ಇನ್ನು ಪ್ರಿಪೇಯ್ಡ್ ಗ್ರಾಹಕರು ಅಥವಾ ಇತರ ನೆಟ್‌ ವರ್ಕ್‌ ಗಳಿಂದ ಏರ್‌ ಟೆಲ್ ಪ್ರಯಾರಿಟಿ ಪೋಸ್ಟ್‌ ಪೇಯ್ಡ್‌ ಗೆ ಬದಲಾಗಲು ಬಯಸುವ ಗ್ರಾಹಕರು, ಏರ್‌ ಟೆಲ್ ಆ್ಯಪ್ ಮೂಲಕ ಅಥವಾ ಯಾವುದೇ ಹತ್ತಿರದ ಏರ್‌ಟೆಲ್ ಮಳಿಗೆಗೆ ಭೇಟಿ ನೀಡುವ ಮೂಲಕ ಸುಲಭವಾಗಿ ಈ ಸೇವೆಯನ್ನು ಪಡೆದುಕೊಳ್ಳಬಹುದು.

ಗ್ರಾಹಕರು ತಮ್ಮ ಇತ್ತೀಚಿನ ಸಾಫ್ಟ್‌ ವೇರ್ ಅಪ್‌ಗ್ರೇಡ್‌ ಹೊಂದಿರುವ ಯಾವುದೇ 5ಜಿ ಎಸ್ಎ ಸೌಲಭ್ಯವಿರುವ ಸ್ಮಾರ್ಟ್‌ ಫೋನ್‌ ನಲ್ಲಿ ನಮ್ಮ ಈ ಪ್ರಿಯಾರಿಟಿ  ಸೇವೆಯನ್ನು ಆನಂದಿಸಬಹುದು. ಇನ್ನು ಸಾಫ್ಟ್‌ ವೇರ್ ಅಪ್‌ ಗ್ರೇಡ್ ಬಾಕಿ ಇರುವ ಗ್ರಾಹಕರ ಫೋನ್‌ ಗಳ ಸೆಟ್ಟಿಂಗ್ಸ್ ವಿಭಾಗದಲ್ಲಿ ಅಪ್‌ಡೇಟ್ ಮಾಡಲು ಸೂಚಿಸುವ ನೋಟಿಫಿಕೇಶನ್ ಕಾಣಿಸಿಕೊಳ್ಳುತ್ತದೆ. ಇದರೊಂದಿಗೆ, ಗ್ರಾಹಕರು ಏರ್‌ ಟೆಲ್ ಆ್ಯಪ್ ಗೆ ಲಾಗ್ ಇನ್ ಆಗುವ ಮೂಲಕವೂ ತಮ್ಮ ಫೋನ್ ಏರ್‌ ಟೆಲ್ ಪ್ರಯಾರಿಟಿ ಸೇವೆಗಳಿಗೆ ಸಿದ್ಧವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿಕೊಳ್ಳಬಹುದು.

Related Posts

Leave a Reply

Your email address will not be published. Required fields are marked *