ಹಿಂದಿನ ಸರ್ಕಾರದ ಅವಧಿಯಲ್ಲಿ ಯಾವ್ಯಾವ ಯೋಜನೆಗಳು ಅಥವಾ ಪ್ರತಿಮೆಗಳು ಪ್ರತಿಷ್ಟಾಪನೆ ಆಗಿತ್ತೋ, ಇವೆಲ್ಲವನ್ನೂ ನಿರ್ಮೂಲನೆ ಮಾಡಿ ಇದೇ ಜಾಗದಲ್ಲಿ ಬಿಜೆಪಿಯ ಲಾಂಛನಗಳನ್ನು ನೆಲೆಗೊಳಿಸುವುದು ನೋಡಿದಾಗ ಇದು ಸಾಮ್ರಾಜ್ಯಶಾಹಿ ಧೋರಣೆಯ ಪ್ರತೀಕ ಎನ್ನದೆ ವಿಧಿಯಿಲ್ಲ.
ಸರ್ಕಾರಗಳು ಸಂಪೂರ್ಣವಾಗಿ ಪಾರ್ಟಿ ಆಧಾರಿತ ಭೂತಕನ್ನಡಿಯಲ್ಲಿ ನೋಡಬಾರದೆಂಬ ವಾಸ್ತವ ಸತ್ಯವನ್ನು ತಮಿಳುನಾಡು ಮತ್ತು ಕೇರಳಂ ರಾಜ್ಯಗಳ ಹೊಸ ಸರ್ಕಾರಗಳ ಕಾರ್ಯವೈಖರಿಯನ್ನು ಕಂಡು ಗೆದ್ದ ಪಕ್ಷಗಳು ಕಲಿಯುವುದು ಬಹಳಷ್ಟಿದೆ.
ಪ್ರಜಾತಂತ್ರದಲ್ಲಿ ಸಾಮರಸ್ಯ ಅನಿವಾರ್ಯ.
ಚುನಾವಣೆಗಳಲ್ಲಿ ಸೋಲು ಅಥವಾ ಗೆಲುವು ಅತಿ ಸಹಜ. ಆದರೆ ಜನಾದೇಶವನ್ನು ಒಪ್ಪಿಕೊಂಡು ಗೆದ್ದ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವುದು ವಿಧಿತ. ಜಿದ್ದಿನಿಂದ ಕೂಡಿದ ರಾಜಕಾರಣ ಎಂದಿಗೂ ಹಿತಕಾರಿಯಲ್ಲ. ಇದು ಜನತೆಗೂ, ರಾಜಕೀಯ ಪಕ್ಷಗಳ ಅಧೋಗತಿಗೂ ಕಾರಣವಾಗುವುದೆಂಬುದನ್ನು ಮರೆಯುವಂತಿಲ್ಲ.
ತಮಿಳುನಾಡಿನಲ್ಲಿ ಇದೇ ಮೊದಲ ಭಾರಿಗೆ ಪಕ್ಷವೊಂದನ್ನು ಕಟ್ಟಿ ಅಧಿಕಾರದ ಚುಕ್ಕಾಣಿ ಹಿಡಿದ ಟಿವಿಕೆ ಪಕ್ಷದ ನಾಯಕ ಹಾಗೂ ರಾಜ್ಯದ ಮುಖ್ಯಮಂತ್ರಿ ವಿಜಯ್ ಈಗ ಹೊಸ ಸಂಪ್ರದಾಯ ಆಡಳಿತಕ್ಕೆ ನಾಂದಿ ಹಾಡಿದ್ದಾರೆ. ಹಿಂದಿನ ಸರ್ಕಾರಗಳ ಕೆಲ ಸಾರ್ಥಕ ಜನಪರ ಯೋಜನೆಗಳ ಪುನಶ್ಚೇತನಕ್ಕೆ ಮುಂದಾಗಿದ್ದಾರೆ. ನಾಡಿನ ರಾಜಧಾನಿ ಚೆನ್ನೈನಲ್ಲಿರುವ ನೂರಾರು ಅಮ್ಮಾ ಕ್ಯಾಂಟೀನುಗಳ ಮರುಚೇತನಕ್ಕೆ ಮುಖ್ಯಮಂತ್ರಿ ಆಸಕ್ತಿ ತೋರಿದ್ದಾರೆ. ಅನ್ನ ಸೂರು ಮತ್ತು ಆರೋಗ್ಯ- ಇವುಗಳು ದೇಶದ ಸಂವಿಧಾನದಲ್ಲಿ ಅಡಕವಾಗಿರುವ ಪರಮಾಶಯ. ಇದರ ಯೋಗ್ಯ ಅನುಷ್ಟಾನವೇ ಸರ್ಕಾರಗಳ ಕರ್ತವ್ಯ.
ಸರ್ಕಾರ ಯಾವುದೇ ಇರಲಿ. ಜನತೆಯ ಹಸಿವು ನೀಗಿಸುವ ಮತ್ತು ಅವರ ಆರೋಗ್ಯವನ್ನು ಕಾಪಾಡುವ ದಿಶೆಯಲ್ಲಿ ಸರ್ಕಾರಗಳು ರೂಪಿಸುವ ಯೋಜನೆಗಳು ಅತಿ ಮುಖ್ಯ . ಇಂತಹ ಯೋಜನೆಗಳು ಒಂದು ಪಕ್ಷದ ಸ್ವತ್ತಲ್ಲ. ಸರ್ಕಾರಗಳಿಗೆ ರಾಜಕೀಯ ತಾರತಮ್ಯ ಇರಬಾರದು. ಕೇವಲ ಒಂದು ಪಕ್ಷದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವ ಸರ್ಕಾರಗಳ ಧೋರಣೆಯಂತೂ ಸಂವಿಧಾನ ವಿರೋಧಿ. ಈ ದಿಶೆಯಲ್ಲಿ ವಿಜಯ್ ಅತಿ ಕಡಿಮೆ ಅವಧಿಯಲ್ಲಿ ಇಂತಹ ಯೋಜನೆಗಳು ಮತ್ತು ವಿಚಾರದ ಬಗ್ಗೆ ಗಂಭೀರವಾಗಿ ಆಲೋಚಿಸಿ ಅದನ್ನು ಕಾರ್ಯಾಚರಣೆಗೆ ತಂದಿರುವುದು ಸಂತಸಕರ.
ದೇಶದ ಮತ್ತೊಂದು ರಾಜ್ಯವಾದ ಕೇರಳಂದಲ್ಲಿಯೂ ಸರಳ ಹಾಗೂ ಸಾಧಾರಣ ಕಾರ್ಯಕರ್ತನೊಬ್ಬ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಸಂತಸಕರ. ರಾಜ್ಯದ ಮುಖ್ಯಮಂತ್ರಿಯಾಗಿ ಸತೀಶನ್ ಪ್ರಮಾಣ ಸ್ವೀಕರಿಸುವ ವೇಳೆ ಮಾಜಿ ಸಿಎಂ ಪಿಣರಾಯ್ ವಿಜಯನ್ ಮತ್ತು ಬಿಜೆಪಿ ಹಿರಿಯ ನಾಯಕ ಹಾಗೂ ಶಾಸಕ ರಾಜೀವ್ ಚಂದ್ರಶೇಖರ್ ವೇದಿಕೆಯಲ್ಲಿ ಹಾಜರಾಗಿದ್ದು ಗಮನಾರ್ಹ. ಸತೀಶನ್ ಕೂಡಾ ತಮ್ಮ ವೈಯಕ್ತಿಕ ಭದ್ರತೆಗಾಗಿ ರಾಜ್ಯದ ಖಜಾನೆಯಿಂದ ಹಣ ಸೋರಿಕೆಯಾಗುವುದನ್ನು ತಪ್ಪಿಸಲು ಭದ್ರತೆ ಕಡಿಮೆಗೊಳಿಸಿರುವುದು ಶ್ಲಾಘನೀಯ. ಇವೆಲ್ಲವೂ ಪ್ರಜಾತಂತ್ರದ ಜೀವಾಳವೇ.
ಆದರೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅಧಿಕಾರ ಮುಗಿದ ಕೂಡಲೇ , ಈ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿಯ ಧೋರಣೆಯಂತೂ ಪ್ರಜಾತಂತ್ರಕ್ಕೆ ಮಾರಕವೇ ಸರಿ. ಹಿಂದಿನ ಸರ್ಕಾರದ ಅವಧಿಯಲ್ಲಿ ಯಾವ್ಯಾವ ಯೋಜನೆಗಳು ಅಥವಾ ಪ್ರತಿಮೆಗಳು ಪ್ರತಿಷ್ಟಾಪನೆ ಆಗಿತ್ತೋ, ಇವೆಲ್ಲವನ್ನೂ ನಿರ್ಮೂಲನೆ ಮಾಡಿ ಇದೇ ಜಾಗದಲ್ಲಿ ಬಿಜೆಪಿಯ ಲಾಂಛನಗಳನ್ನು ನೆಲೆಗೊಳಿಸುವುದು ನೋಡಿದಾಗ ಇದು ಸಾಮ್ರಾಜ್ಯಶಾಹಿ ಧೋರಣೆಯ ಪ್ರತೀಕ ಎನ್ನದೆ ವಿಧಿಯಿಲ್ಲ. ಸರ್ಕಾರಗಳು ಸಂಪೂರ್ಣವಾಗಿ ಪಾರ್ಟಿ ಆಧಾರಿತ ಬೂತಕನ್ನಡಿಯಲ್ಲಿ ನೋಡಬಾರದೆಂಬ ವಾಸ್ತವ ಸತ್ಯವನ್ನು ತಮಿಳುನಾಡು ಮತ್ತು ಕೇರಳಂ ರಾಜ್ಯಗಳ ಹೊಸ ಸರ್ಕಾರಗಳ ಕಾರ್ಯವೈಖರಿಯನ್ನು ಕಂಡು ಗೆದ್ದ ಪಕ್ಷಗಳು ಕಲಿಯುವುದು ಬಹಳಷ್ಟಿದೆ.


