ಬಿಟ್‌ಕಾಯಿನ್ ಹಗರಣದ ತನಿಖೆ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಗರಣದ ಕಿಂಗ್‌ಪಿನ್ ಶ್ರೀಕಿ ಸೇರಿದಂತೆ ಮೂವರನ್ನು ಬಂಧಿಸಿದ್ದು, ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್‌ಗೆ ಭೀತಿಯುಂಟಾಗಿದೆ.
ಬಂಧಿತ ಶ್ರೀಕಿ ಜೊತೆ ಮೊಹಮ್ಮದ್ ನಲಪಾಡ್ ನಿಕಟ ಸಂಪರ್ಕ ಹೊಂದಿದ್ದರು ಎಂಬ ಆರೋಪವಿದೆ. ರಾಜ್ಯ ಸರ್ಕಾರದ ಇ-ಪ್ರೊಕ್ಯೂರಮೆಂಟ್ ವೆಬ್‌ಸೈಟ್ ಹ್ಯಾಕ್ ಮಾಡಿ, ಸರ್ಕಾರದ ಹಣವನ್ನು ಅಕ್ರಮ ಖಾತೆಗಳಿಗೆ ವರ್ಗಾಯಿಸಿದ ಆರೋಪ ಶ್ರೀಕಿ ತಂಡದ ಮೇಲಿದೆ. ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ಎಸ್‌ಐಟಿ ತನಿಖೆಗೆ ವಹಿಸಿತ್ತು. ಎಸ್‌ಐಟಿ ತನಿಖೆಯ ವೇಳೆ ಹಲವು ಡಿಜಿಟಲ್ ವ್ಯಾಲೆಟ್‌ಗಳ ಕಳ್ಳತನ ಬಯಲಾಗಿತ್ತು. ಮೊಹಮ್ಮದ್ ನಲಪಾಡ್‌ಗೆ ಈ ಜಾಲದ ಜೊತೆ ಲಿಂಕ್ ಇರುವುದು ಕಂಡುಬಂದಿತ್ತು. ನಲಪಾಡ್ ಈಗಾಗಲೇ ಎರಡು ಬಾರಿ ಎಸ್‌ಐಟಿ ವಿಚಾರಣೆಗೂ ಹಾಜರಾಗಿದ್ದರು. ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆಯಲ್ಲಿ ನಲಪಾಡ್ ಪಾತ್ರದ ಕುರಿತು ತನಿಖೆ ತೀವ್ರಗೊಳಿಸಿದ್ದಾರೆ.
ಏಪ್ರಿಲ್ 2024ರಲ್ಲಿ ಶಾಸಕ ಹ್ಯಾರಿಸ್ ಮತ್ತು ನಲಪಾಡ್ ನಿವಾಸಗಳ ಮೇಲೆ ಇಡಿ 15 ಗಂಟೆ ದಾಳಿ ನಡೆಸಿತ್ತು. ಶ್ರೀಕಿ ಹ್ಯಾಕ್ ಮಾಡಿದ ಬಿಟ್‌ಕಾಯಿನ್‌ಗಳನ್ನು ಕ್ರಿಪ್ಟೋ ಮೂಲಕ ಹಣವಾಗಿ ಪರಿವರ್ತಿಸಿ ವರ್ಗಾಯಿಸಿರುವುದು ಪತ್ತೆಯಾಗಿತ್ತು. ಶ್ರೀಕಿ, ನಲಪಾಡ್ ಸಹೋದರ ಉಮರ್ ನಲಪಾಡ್‌ನ ಸಹಪಾಠಿ. ಶ್ರೀಕಿ ಮುಂಬೈ ಮೂಲದ ವ್ಯಕ್ತಿ ಮೂಲಕ ನಲಪಾಡ್ ಖಾತೆಗೆ 10 ಲಕ್ಷ ರೂ. ವರ್ಗಾಯಿಸಿದ ಆರೋಪ ಕೇಳಿಬಂದಿತ್ತು. ಒಟ್ಟಾರೆ 4.5 ಕೋಟಿ ರೂ. ಅಕ್ರಮ ವಹಿವಾಟಿನ ಶಂಕೆಯಿದೆ.
ಎಸ್‌ಐಟಿ ನೀಡಿದ್ದ ಮಾಹಿತಿಗಳ ಆಧಾರದ ಮೇಲೆ ಇಡಿ ಶ್ರೀಕಿಯನ್ನು ವಶಕ್ಕೆ ಪಡೆದಿದೆ. ರಾಜ್ಯ ಸರ್ಕಾರದ ಹಣ ಮತ್ತು ಡಿಜಿಟಲ್ ಆಸ್ತಿಗಳ ಲೂಟಿಯಲ್ಲಿ ಯಾರಿಗೆಲ್ಲಾ ಪಾಲು ಸಂದಿದೆ ಎಂಬುದು ಇಡಿ ತನಿಖೆಯಿಂದ ಹೊರಬರಲಿದೆ.


