“ತಮಿಳುನಾಡಿನ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಬಂದಿದ್ದಾರೆ ಎಂಬುದು ಸುಳ್ಳು. ನಾನು ಪಕ್ಷ ಹೇಳಿದಂತೆ ಕೇಳುವೆ, ತಮಿಳುನಾಡು ವಿಚಾರ ನನಗೆ ಗೊತ್ತಿಲ್ಲ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ತಮಿಳುನಾಡಿನ ಶಾಸಕರು ಈಗಲ್ ಟನ್ ರೆಸಾರ್ಟ್ ಗೆ ಬಂದಿದ್ದಾರೆಯೇ ಎಂದು ಕೇಳಿದಾಗ, “ಯಾವ ಶಾಸಕರೂ ಈಗಲ್ ಟನ್ ರೆಸಾರ್ಟ್ ಗೆ ಬಂದಿಲ್ಲ. ಈ ಬಗ್ಗೆ ನನಗೆ ಗೊತ್ತಿಲ್ಲ. ನವೀಕರಣ ಹಿನ್ನೆಲೆಯಲ್ಲಿ ಈಗಲ್ ಟನ್ ರೆಸಾರ್ಟ್ ಮುಚ್ಚಲಾಗಿದೆ. ಕೆಲವರು ಹೈದರಾಬಾದ್ ಗೆ ಹೋಗಿದ್ದಾರೆ ಎಂದರೆ ಮತ್ತೆ ಕೆಲವರು ಬೆಂಗಳೂರಿಗೆ ಬಂದಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲಿ ನೋಡಿದೆ. ಪಕ್ಷದ ಹೈಕಮಾಂಡ್ ನಾಯಕರು ಏನಾದರೂ ನಿರ್ದೇಶನ ನೀಡಿದರೆ ನಾನು ಅದನ್ನು ಪಾಲಿಸುವೆ. ಆದರೆ ಈವರೆಗೆ ಹೈಕಮಾಂಡ್ ನಾಯಕರು ನನ್ನ ಜೊತೆ ಏನೂ ಮಾತನಾಡಿಲ್ಲ. ಪಕ್ಷದ ನಾಯಕರ ನಿರ್ದೇಶನದಂತೆ ನಾನು ತಮಿಳುನಾಡಿನಲ್ಲಿ ಪ್ರಣಾಳಿಕೆ ಬಿಡುಗಡೆ ಹಾಗೂ ಪ್ರಚಾರಕ್ಕೆ ಹೋಗಿದ್ದೆ. ಅದಾದ ನಂತರ ನನಗೆ ಯಾವುದೇ ಮಾಹಿತಿ ಇಲ್ಲ” ಎಂದರು.
ತಮಿಳುನಾಡಿನಲ್ಲಿ ಕ್ಷಣ ಕ್ಷಣಕ್ಕೂ ಪರಿಸ್ಥಿತಿ ಬದಲಾಗುತ್ತಿದೆಯಲ್ಲ ಎಂದಾಗ, “ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ” ಎಂದರು.
ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮದ ಬಗ್ಗೆ ಕೇಳಿದಾಗ, “ಅವರು ರಾಜ್ಯದ ಸೇವೆ ಮಾಡಿದ್ದಾರೆ. ಅವರ ಜನ್ಮದಿನವಿದ್ದರೆ ಅವರಿಗೆ ಒಳ್ಳೆಯದಾಗಲಿ. ಅವರ ಪಕ್ಷದವರು ಪಕ್ಷ ಸಂಘಟನೆ ಹಾಗೂ ಅವರಿಗೆ ಗೌರವ ನೀಡುತ್ತಿದ್ದಾರೆ. ಅದರಲ್ಲಿ ತಪ್ಪೇನಿಲ್ಲ. ಅವರಿಗೆ ಉತ್ತಮ ಆರೋಗ್ಯ ಸಿಗಲಿ ಎಂದು ಆಶಿಸುತ್ತೇನೆ. ಭಗವಂತ ಅವರಿಗೆ ಹೆಚ್ಚಿನ ಆಯಸ್ಸು ನೀಡಲಿ. ರಾಜಕೀಯವಾಗಿ ಅವರ ವಿಚಾರಧಾರೆ ಬೇರೆ, ನಮ್ಮ ವಿಚಾರಧಾರೆ ಬೇರೆ” ಎಂದು ತಿಳಿಸಿದರು.
ಪುದುಚೆರಿ ಪ್ರವಾಸದ ಬಗ್ಗೆ ಕೇಳಿದಾಗ, “ನಾನು ಬಹಳ ದಿನಗಳಿಂದ ದೇವಾಲಯಕ್ಕೆ ಹೋಗಿರಲಿಲ್ಲ. ಹೀಗಾಗಿ ಶನೇಶ್ವರ ದೇವಾಲಯಕ್ಕೆ ಹೋಗುತ್ತಿದ್ದೇನೆ” ಎಂದು ಉತ್ತರಿಸಿದರು. ಕೇರಳಂ ಸಿಎಂ ಆಯ್ಕೆ ವಿಚಾರವಾಗಿ ಕೇಳಿದಾಗ, “ನಮ್ಮ ಎಲ್ಲಾ ನಾಯಕರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ. ಅದು ಎಲ್ಲಾ ಪಕ್ಷಗಳಲ್ಲೂ ನಡೆಯುವ ಪ್ರಕ್ರಿಯೆ” ಎಂದು ಪ್ರತಿಕ್ರಿಯಿಸಿದರು.
ನಗರದಲ್ಲಿ ಮರಗಳ ತೆರವಿಗೆ ಸಮಯವಿಲ್ಲ ಎಂಬ ವಿರೋಧ ಪಕ್ಷದ ನಾಯಕ ಅಶೋಕ ಟೀಕೆ ಬಗ್ಗೆ ಕೇಳಿದಾಗ, “ಬಿದ್ದಿರುವ ಎಲ್ಲಾ ಮರಗಳ ತೆರವು ಮಾಡಲಾಗುತ್ತಿದೆ. ಅರಮನೆ ಮೈದಾನ ಸುತ್ತಮುತ್ತ ಸೇರಿದಂತೆ ಎಲ್ಲೆಡೆ ಈ ಕಾರ್ಯ ಮಾಡಲಾಗುತ್ತಿದೆ. ದುರ್ಬಲವಾಗಿರುವ ಮರಗಳ ತೆರವಿಗೂ ಸೂಚಿಸಲಾಗಿದೆ. 480 ಮರಗಳ ಪಟ್ಟಿ ನೀಡಿದ್ದು, ಅವುಗಳ ರೆಂಬೆ ಕತ್ತರಿಸಲು ಅನುಮತಿ ನೀಡಲಾಗಿದೆ. ಅಶೋಕ್ ಅವರು ಹೇಳಿರುವ ಎಲ್ಲಾ ಕೆಲಸ ಮಾಡಲಾಗುತ್ತಿದೆ” ಎಂದರು.
ಆರ್ ಅಶೋಕ ಅವರು ಶಾಸಕರಾದ ಕಾಶಪ್ಪನವರು ಐಪಿಎಲ್ ಟಿಕೆಟ್ ಕೇಳಿದ್ದರು. ಈಗ ಅದನ್ನು ನನ್ನ ಮೇಲೆಯೇ ಹಾಕಿಕೊಂಡಿದ್ದೇನೆ. ಗುಜರಾತಿನವರಿಗೆ ಟಿಕೆಟ್ ಗಳು ಹೆಚ್ಚಾಗಿ ಬೇಕಾಗಿತ್ತು, ವ್ಯಾಪಾರ ಜಾಸ್ತಿ ಆಗಬೇಕಿತ್ತು. ಅದಕ್ಕೆ ಈ ರೀತಿ ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ನಾವು ಕೇಳಿದ್ದ 300 ಟಿಕೆಟ್ ದೊಡ್ಡದಾಯ್ತಾ? ಬೇರೆ ರಾಜ್ಯಗಳಲ್ಲಿ 60% ಟಿಕೆಟ್ ಅನ್ನು ರಾಜ್ಯ ಸರ್ಕಾರಗಳಿಗೆ ಕೊಡುತ್ತಿದ್ದಾರೆ. ನಾನು ಕರ್ನಾಟಕದ ಪ್ರತಿನಿಧಿಯಾಗಿ ಶಾಸಕರು ಏನು ಹೇಳುತ್ತಾರೋ ಅದನ್ನು ಮಾಡಿದ್ದೇನೆ. ಎಲ್ಲಾ ಪಕ್ಷದವರು ಸೇರಿ ಬೇಡಿಕೆ ಇಟ್ಟರಲ್ಲವೇ? ದಳದವರಿಗೆ ಬೇಡವಾದರೆ ತಮ್ಮ ಪಕ್ಷದ ಶಾಸಕರಿಗೆ ಟಿಕೆಟ್ ಬೇಡ ಎಂದು ವಾಪಸ್ ನೀಡಲಿ. ನಾನು ನನಗಾಗಿ ಟಿಕೆಟ್ ಕೇಳಿದ್ದೀನಾ? ನಮ್ಮ ಜನಪ್ರತಿನಿಧಿಗಳು ಮನವಿ ಮಾಡಿದ್ದಕ್ಕೆ ಕೇಳಿದೆ. ಈ ಹಿಂದೆ ಶಾಸಕರಿಗೆ 2 ಟಿಕೆಟ್ ನೀಡುತ್ತಿದ್ದರು. ಈಗ ಮೂರು ಟಿಕೆಟ್ ನೀಡಿ ಎಂದು ಹೇಳಿರುವೆ” ಎಂದು ಸ್ಪಷ್ಟಪಡಿಸಿದರು.


