ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ವಾಹನ ಸಿಗದೆ ಹೆತ್ತ ಮಗನ ಶವವನ್ನು ಪೋಷಕರು ತಳ್ಳುಗಾಡಿಯಲ್ಲಿ ಸಾಗಿಸಿದ ಘಟನೆ ನಡೆದಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಕರೀಂನಗರ ಜಿಲ್ಲೆಯ ಶಂಕರಪಟ್ಟಣಂ ಮಂಡಲದ ನಿವಾಸಿ ಯಾಕೂಬ್ ಎಂಬ ಯುವಕ ಅನಾರೋಗ್ಯದಿಂದ ಮೃತಪಟ್ಟಿದ್ದ.
ಪೋಷಕರಿಗೆ ಆಸ್ಪತ್ರೆಯಿಂದ ಮನೆಗೆ ಮಗನ ಮೃತದೇಹವನ್ನು ಸಾಗಿಸಲು ಯಾವುದೇ ಸರ್ಕಾರಿ ವಾಹನ ಅಥವಾ ಆಂಬ್ಯುಲೆನ್ಸ್ ಸಿಗದೆ ಪರದಾಡಿದ್ದಾರೆ. ಖಾಸಗಿ ಆಂಬ್ಯುಲೆನ್ಸ್ ಪಡೆಯಲು ಹಣ ಇಲ್ಲದ ಕಾರಣ ಶವವನ್ನು ನಿಂಬೆಹಣ್ಣು ಮಾರುವ ತಳ್ಳುಗಾಡಿಯಲ್ಲಿ ಇರಿಸಿ ಮನೆಗೆ ಕೊಂಡೊಯ್ದಿದ್ದಾರೆ.
ಯಾಕೂಬ್ ಕುಟುಂಬದ ಈ ದುಸ್ಥಿತಿ ನೋಡಿದ ಸ್ಥಳೀಯರು ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುರ್ತು ಸಂದರ್ಭಗಳಲ್ಲಿಯೂ ಮೂಲಭೂತ ಸಾರಿಗೆ ಸೌಲಭ್ಯಗಳನ್ನು ಒದಗಿಸಲು ವಿಫಲವಾಗಿರುವ ವ್ಯವಸ್ಥೆಯ ವಿರುದ್ಧ ಜನರು ಕಿಡಿಕಾರಿದ್ದಾರೆ.
ಜನವರಿಯಲ್ಲಿ ಫರಿದಾಬಾದ್‌ನ ಆಸ್ಪತ್ರೆಯಲ್ಲಿ ಕ್ಷಯರೋಗದಿಂದ ಮೃತಪಟ್ಟ 35 ವರ್ಷದ ಮಹಿಳೆಯ ಶವವನ್ನು ಸಾಗಿಸಲು ನೆರವು ಸಿಗದಿದ್ದಾಗ ಕುಟುಂಬದವರು 12 ಕಿಲೋಮೀಟರ್ ದೂರ ಮೋಟಾರ್‌ಚಾಲಿತ ತಳ್ಳುಗಾಡಿಯಲ್ಲಿ ಶವ ಸಾಗಿಸಿದ್ದ ಪ್ರಕರಣ ಎಲ್ಲೆಡೆ ಸುದ್ದಿಯಾಗಿತ್ತು. ಆನ್‌ಲೈನ್‌ನಲ್ಲಿ ಹರಿದಾಡಿದ ವೀಡಿಯೊದಲ್ಲಿ ಪುಟ್ಟ ಮಗ ತನ್ನ ತಾಯಿಯ ಮುಖವನ್ನು ಬಟ್ಟೆಯಿಂದ ಮುಚ್ಚುತ್ತಿರುವುದು ಕಂಡುಬಂದಿತ್ತು. ತೆಲಂಗಾಣದಲ್ಲಿ ಅಪಘಾತದಲ್ಲಿ ಯುವಕನ ಶವ ಸಾಗಿಸಲು ಆಂಬ್ಯುಲೆನ್ಸ್ ಸಿಗದೆ ಪೊಲೀಸ್ ಅಧಿಕಾರಿ ತಳ್ಳುಗಾಡಿಯಲ್ಲೇ ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದರು.


