ತಿರುಪತಿ ಜಿಲ್ಲೆಯ ನಾರಾಯಣವನಂ ಮಂಡಲದ ವೆಂಕಟಕೃಷ್ಣಪಾಲೆಂ ಪಂಚಾಯತ್ನಲ್ಲಿ ಐದು ಜನರ ಇಡೀ ಕುಟುಂಬ ಪ್ರಾಣ ಕಳೆದುಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಮೋಹನ್ ಎಂಬ ವ್ಯಕ್ತಿ ಪತ್ನಿ ಮತ್ತು ತಾಯಿಯನ್ನು ಕತ್ತು ಹಿಸುಕಿ ಕೊಂದು, ಇಬ್ಬರು ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೋಹನ್ ಅವರ ಪತ್ನಿ ಹರಿತಾ ಟೈಲರಿಂಗ್ ಮತ್ತು ಬ್ಯೂಟಿಗೆ ಸಂಬಂಧಿಸಿದಂತೆ ವ್ಯವಹಾರ ನಡೆಸುತ್ತಿದ್ದರು. ತಾಯಿ ಚಂದ್ರಕಲಾ (65) ಗೃಹಿಣಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೋಹನ್ ತಾಯಿ ಚಂದ್ರಕಲಾ (65) ಮತ್ತು ಪತ್ನಿ ಹರಿತಾ (33) ಅವರನ್ನು ಮನೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಮಕ್ಕಳಾದ ಕೌಶಿಕ್(14) ಮತ್ತು ಹರಿಣಿ (12) ಓದುತ್ತಿದ್ದ ಶಾಲೆಗೆ ಹೋಗಿ ಮನೆಯಲ್ಲಿ ಕುಟುಂಬದ ಸದಸ್ಯರೊಬ್ಬರು ನಿಧನ ಹೊಂದಿದ್ದಾರೆ ಎಂದು ಮಕ್ಕಳನ್ನು ಕರೆದುಕೊಂಡು ಬಂದಿದ್ದರು. ಮನೆಗೆ ವಾಪಸ್ ಆಗಿಲ್ಲ.
ಹರಿತಾ ಅವರ ಸಹೋದರ ಮೋಹನ್ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಅನುಮಾನಗೊಂಡು ಮನೆಯನ್ನು ಪರಿಶೀಲಿಸಿದಾಗ ಇಬ್ಬರ ಶವ ಪತ್ತೆಯಾಗಿದೆ. ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಹುಡುಕಿದಾಗ ಮೋಹನ್ ಮಕ್ಕೊಳೊಂದಿಗೆ ಪುತ್ತೂರು ತಾಲೂಕಿನ ವೇಪಗುಂಟ ಬಳಿಯ ರೈಲ್ವೆ ಹಳಿಯ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.
ಕೊಲೆ ಮತ್ತು ಆತ್ಮಹತ್ಯೆಯ ಹಿಂದಿನ ಉದ್ದೇಶ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೋಹನ್ಗೆ ಯಾವುದೇ ಆರ್ಥಿಕ ಅಥವಾ ಮಾನಸಿಕ ಆರೋಗ್ಯ ಸಮಸ್ಯೆಗಳಿಲ್ಲ ಎನ್ನಲಾಗಿದೆ. ನಾರಾಯಣವನಂ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.


